ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: ಮಾನವ ಅಭಿವೃದ್ಧಿಗೆ ಬೇಕಿದೆ ಆದ್ಯತೆ

Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಸರ್ಕಾರವು 2013-14ರ ಆರ್ಥಿಕ ವರ್ಷದಲ್ಲಿ  ಜುಲೈ 12ರಂದು ಎರಡನೇ ಬಾರಿ ಮಂಡಿಸುತ್ತಿರುವ ಆಯವ್ಯಯದ ಬಗ್ಗೆ ಗಮನಿಸಬಹುದಾದ ಕೆಲವು ವಿಶೇಷ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಈ ಮುಂಗಡಪತ್ರ, ಕೇವಲ ಆದಾಯ ಖರ್ಚುಗಳ ಲೆಕ್ಕಾಚಾರವಾಗಿರದೆ, ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಕ್ಷೇತ್ರಗಳ ಆದ್ಯತೆ ಮತ್ತು ಪ್ರಮಾಣವನ್ನು ನಿರ್ಧರಿಸಿ ಅಂದಾಜಿಸುವ ಹಾಗೂ ಹೊಸ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳ ಸ್ವರೂಪ ಮತ್ತು ಸಂಪನ್ಮೂಲ ಹಂಚಿಕೆಯ ಪ್ರಸ್ತಾವ ಪ್ರಮುಖವಾಗಿರುತ್ತದೆ.

ಹಿಂದಿನ ಸರ್ಕಾರವು 2013ರ ಫೆ.8 ರಂದು ಮಂಡಿಸಿದ ಆಯವ್ಯಯದಲ್ಲಿ ಕೃಷಿ ಮತ್ತು ಸಾಮಾನ್ಯ ಬಜೆಟ್ ಎಂದು ಎರಡು ಭಾಗಗಳಾಗಿ ವಿಂಗಡಿಸಿ ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳಿಗೆ ಒಟ್ಟು  ರೂ 22,310 ಕೋಟಿಗಳ ಅಂದಾಜು ವೆಚ್ಚವನ್ನು ನಿಗದಿಪಡಿಸಿದೆ. ಕೃಷಿ ಆಯವ್ಯಯದಲ್ಲಿ, ಕೃಷಿಗೆ ಸಂಬಂಧಿಸಿದ ಯೋಜನೆಗಳು, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಅಭಿವೃದ್ಧಿ, ಮೀನುಗಾರಿಕೆ, ಸಹಕಾರ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಂದಾಜು ವೆಚ್ಚಗಳನ್ನು ಒಂದುಗೂಡಿಸಿ ಪ್ರಸ್ತಾಪಿಸಲಾಗಿದೆ.

ರಾಜ್ಯವು ಕಳೆದೆರಡು ವರ್ಷಗಳಿಂದ ಅಸಾಧಾರಣ ಪ್ರಕೃತಿ ವಿಕೋಪವನ್ನು ಎದುರಿಸುತ್ತಿದ್ದು ಇದರಿಂದ ಉಂಟಾಗಿರುವ ಬೆಳೆ ಹಾನಿ ಮೊತ್ತ ರೂ 5,273 ಕೋಟಿ ಎಂದು ಅಂದಾಜಿಸಲಾಗಿದೆ. ರಾಜ್ಯದ ಒಟ್ಟು 176 ತಾಲ್ಲೂಕುಗಳಲ್ಲಿ 157 ತಾಲ್ಲೂಕುಗಳನ್ನು ಬರಪೀಡಿತವೆಂದು ಪರಿಗಣಿಸಲಾಗಿದ್ದು, ಇದರ  ನಿರ್ವಹಣೆಗೆ ಅನೇಕ ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

ಸರ್ಕಾರದ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿರುವಂತೆ ಒಟ್ಟು ಅಂತರಿಕ ಉತ್ಪನ್ನದಲ್ಲಿ ಕೃಷಿ ಮತ್ತು ಅವಲಂಬಿತ ಕ್ಷೇತ್ರಗಳ ಪಾಲು 2010-11ರಲ್ಲಿ ಶೇ 16.9 ರಷ್ಟು ಇದ್ದದ್ದು, 2011-12ರ ಹೊತ್ತಿಗೆ ಶೇ 15.9 ರಷ್ಟು ಇದ್ದು, 2012-13ಕ್ಕೆ ಶೇ 15.3ಕ್ಕೆ ಇಳಿದಿರುವುದು ವಿಷಾದಕರ ಬೆಳವಣಿಗೆ.

ರಾಜ್ಯ  ಪ್ರತಿವರ್ಷ ಮಂಡಿಸುತ್ತಿರುವ ಆಯವ್ಯಯ ಮತ್ತು ಅದರ ಅನುಸಾರ ವಿವಿಧ ಕಾರ್ಯಕ್ರಮಗಳಿಗೆ ಮಾಡುತ್ತಿರುವ ವೆಚ್ಚದ ಒಟ್ಟಾರೆ ಪ್ರಮಾಣ ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರುವುದಿಲ್ಲವೆಂಬ ಅಂಶವನ್ನು ಗಮನಿಸಬಹುದು. ಈ ವಿಚಾರದಲ್ಲಿ ಕೃಷಿ ಕ್ಷೇತ್ರ ಎದುರಿಸುತ್ತಿರುವ ಕೆಲವು ಮೂಲಭೂತ ಸಮಸ್ಯೆಗಳನ್ನು ಸರ್ಕಾರವು ಗಮನಿಸಿ ಅವುಗಳ ಪರಿಹಾರಕ್ಕಾಗಿ ಆಯವ್ಯಯದಲ್ಲಿ ಆದ್ಯತೆ ನೀಡಬೇಕಾಗಿರುತ್ತದೆ. ರಾಜ್ಯದ ಬಹುಪಾಲು ರೈತರು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದು ಅವರು ಹೊಂದಿರುವ ಸಣ್ಣ ಹಿಡುವಳಿಗಳಿಂದಾಗಿ ಅವರ ಪರಿಶ್ರಮವೂ ಸೇರಿದಂತೆ, ಆದಾಯಕ್ಕಿಂತ ಉತ್ಪಾದನಾ ವೆಚ್ಚವು ಆಧಿಕ ವಾಗಿರುವುದು ಅಂಕಿ ಸಂಖ್ಯೆಗಳಿಂದ ಸ್ಪಷ್ಟವಾಗಿರುತ್ತದೆ.  ಜೊತೆಗೆ ಅತಿವೃಷ್ಟಿ, ಅನಾವೃಷ್ಟಿಗಳಿಂದಾಗಿ ಬೆಳೆಹಾನಿಯಿಂದ ಅಪಾರ ನಷ್ಟವನ್ನು ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕಿ ನರಳುವ ಪರಿಸ್ಥಿತಿಯನ್ನು ಸರ್ಕಾರವು ಗಮನಿಸಬೇಕಾಗಿದೆ. ಕೃಷಿ ಉತ್ಪನ್ನಕ್ಕಾಗಿ ಬಳಸುವ ಬೀಜ, ಗೊಬ್ಬರ, ಉಪಕರಣ ಮತ್ತು ಕ್ರಿಮಿನಾಶಕಗಳ ಬೆಲೆಗಳು ಅಧಿಕವಾಗಿದ್ದು, ಕೃಷಿ ಉತ್ಪನ್ನಗಳ ಬೆಲೆಗಳ ಅನಿಶ್ಚಿತ ಏರುಪೇರಿನಿಂದಾಗಿ ರೈತರಿಗೆ ನಷ್ಟ ಉಂಟಾಗಿ ಅವರು ಸಾಲದ ಬಾಧೆಯಲ್ಲಿ ಸಿಲುಕುವುದು ಸಾಮಾನ್ಯವಾಗಿದೆ. ಸರ್ಕಾರವು ಘೋಷಿಸಿರುವ ಬೆಳೆಸಾಲದ ಬಡ್ಡಿ ಮನ್ನಾ ಮತ್ತು ರಿಯಾಯಿತಿಗಳು ಈ ಒಟ್ಟಾರೆ ಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗುವ ಸಾಧ್ಯತೆಯಿದೆ. ಆದುದರಿಂದ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬೀಜ, ಗೊಬ್ಬರ, ಉಪಕರಣ ಮತ್ತು ಕ್ರಿಮಿನಾಶಕ ಮುಂತಾದವುಗಳನ್ನು ರಿಯಾಯಿತಿ ದರದಲ್ಲಿ ಸಹಕಾರಿ ಸಂಘಗಳ ಮೂಲಕ ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು ಸೂಕ್ತ.

ಇದರ ಜೊತೆಗೆ ಸರ್ಕಾರವು ಘೋಷಿಸುವ ಬೆಳೆ ಸಾಲ ಮುಂತಾದವುಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವಂಥ ವ್ಯವಸ್ಥೆ ಮಾಡಬೇಕಾಗಿದೆ. ಈಗಿರುವ ಬೆಳೆ ವಿಮೆ ಪದ್ಧತಿಯನ್ನು ಆಮೂಲಾಗ್ರವಾಗಿ ವಿಶ್ಲೇಷಿಸಿ ಈ ಯೋಜನೆಯನ್ನು ಹೆಚ್ಚಿನ ಪ್ರದೇಶಗಳಿಗೆ ಮತ್ತು ಬೆಳೆಗಳಿಗೆ ವಿಸ್ತರಿಸುವ ಅವಶ್ಯಕತೆ ಇದೆ. ಬೆಳೆ ವಿಮೆ ಕ್ಷೇತ್ರದಲ್ಲಿ ವಿಮಾ ಕಂಪೆನಿಗಳು ಮತ್ತು ಮಧ್ಯವರ್ತಿಗಳು ಕೆಲವು ಭಾಗಗಳಲ್ಲಿ ರೈತರನ್ನು ಶೋಷಿಸುತ್ತಿರುವ ಮತ್ತು  ರೈತರಿಗೆ ಅತ್ಯಲ್ಪ ಪ್ರಮಾಣದಲ್ಲಿ ವಿಮಾ ಹಣವನ್ನು ತಲುಪಿಸುತ್ತಿರುವ ವಿಚಾರ ಅಲ್ಲಲ್ಲಿ ಕೇಳಿಬರುತ್ತಿದೆ.

ಕೃಷಿ ಮತ್ತು ಅವಲಂಬಿತ ಕ್ಷೇತ್ರಗಳ ಉತ್ಪಾದನಾ ಸಾಮರ್ಥ್ಯ ಕುಸಿಯುತ್ತಿರುವುದು ಸಾಮಾನ್ಯವಾಗಿದೆ. ಬಹುಮುಖ್ಯವಾಗಿ, ಈ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳ ಕೊರತೆ, ತಾಂತ್ರಿಕತೆಯ ಅಳವಡಿಕೆಯಲ್ಲಿ ಮಂದಗತಿ, ಕಳಪೆ ಬೀಜದ ಪೂರೈಕೆ, ಕ್ರಿಮಿಕೀಟಗಳ ಹಾವಳಿ, ನೀರಾವರಿ ಮತ್ತು ವಿದ್ಯುತ್ ಕೊರತೆ ಮುಂತಾದವುಗಳು ಪ್ರಮುಖವಾಗಿರುತ್ತದೆ. ಆದುದರಿಂದ, ಈ ಎಲ್ಲಾ ಅಂಶಗಳ ಬಗ್ಗೆಯೂ ಆಯವ್ಯಯದಲ್ಲಿ ವಿಶ್ಲೇಷಿಸಿ ಪರಿಹಾರವನ್ನು ಒದಗಿಸುವುದು ಅಗತ್ಯವಿದೆ.

ಕೃಷಿ ಮತ್ತು ತೋಟಗಾರಿಕೆಯನ್ನು ಒಂದು ಲಾಭದಾಯಕ ಕಸಬನ್ನಾಗಿಸಲು ವಿಪುಲವಾದ ಅವಕಾಶಗಳಿವೆ. ಅಲ್ಪಸ್ವಲ್ಪ ನೀರಾವರಿ ಇರುವಲ್ಲಿ ಹೂ, ಹಣ್ಣು ಮತ್ತು ತರಕಾರಿ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೆ ಈ ಉತ್ಪನ್ನಗಳ ವ್ಯವಸ್ಥಿತ ಮಾರುಕಟ್ಟೆ, ಮೌಲ್ಯವರ್ಧಿತ ಸಂಸ್ಕರಣೆ ಮತ್ತು ಮಾರಾಟಗಳ ವ್ಯವಸ್ಥೆಯ ಕೊರತೆಯಿಂದಾಗಿ ರೈತರಿಗೆ ಸೂಕ್ತವಾದ ಬೆಲೆ ದೊರಕುತ್ತಿಲ್ಲ. ಆದ್ದರಿಂದ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ `ಸಮಗ್ರ ಕೃಷಿ-ತೋಟಗಾರಿಕೆ ವಾಣಿಜ್ಯ ಅಭಿವೃದ್ಧಿ' ನೀತಿಯನ್ನು ಜಾರಿಗೊಳಿಸಿ ಹೈನುಗಾರಿಕೆ ಕ್ಷೇತ್ರದಲ್ಲಿರುವಂತೆ ಹಾಲು ಉತ್ಪಾದನಾ ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟದ ವ್ಯವಸ್ಥೆಯಂತೆ ಅನುಷ್ಠಾನಗೊಳಿಸಿದಲ್ಲಿ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವುದು ಸಾಧ್ಯವಾಗುತ್ತದೆ.

ಕರ್ನಾಟಕ ಆರ್ಥಿಕ ಸಮೀಕ್ಷೆ 2010-11, 2011-2012 ಮತ್ತು 2012-13ರ ವಿವರಗಳನ್ನು ಪರಿಶೀಲಿಸಿದಾಗ ರಾಜ್ಯದಲ್ಲಿ ಮಾನವ ಸಂಪನ್ಮೂಲಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡುವ ಅವಶ್ಯಕತೆ ಇರುತ್ತದೆ. ಆರೋಗ್ಯ, ಶಿಕ್ಷಣ, ನೈರ್ಮಲ್ಯ, ಕೌಶಲ ತರಬೇತಿ ಮುಂತಾದವುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಮಾನವ ಅಭಿವೃದ್ಧಿಯಲ್ಲಿ ಕರ್ನಾಟಕವು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗಿಂತ ಹಿಂದುಳಿದಿರುವುದು ಅಂಕಿ ಸಂಖ್ಯೆಗಳಿಂದ ವ್ಯಕ್ತವಾಗುತ್ತದೆ.

ಸರ್ಕಾರದ ಸಮೀಕ್ಷೆಯಂತೆಯೇ ರಾಜ್ಯದಲ್ಲಿ ಅಸಮಾನತೆಯ ಹಿನ್ನೆಲೆಯಿಂದಾಗಿ ಮಾನವ ಅಭಿವೃದ್ಧಿ ಸಾಧನೆಯಲ್ಲಿ ಶೇ 30 ರಷ್ಟು ನಷ್ಟವನ್ನು ಅನುಭವಿಸಿರುವುದು ವಿಷಾದದ ಸಂಗತಿ. ರಾಜ್ಯದ ವಿವಿಧ ಜನಾಂಗ ಮತ್ತು ಪ್ರದೇಶಗಳ ಜನರ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯು ಸಹ ಈ ಹಿಂದುಳಿದಿರುವಿಕೆಗೆ ಕಾರಣವಾಗಿರುವುದು ಸ್ಪಷ್ಟ. ಬಹುಕಾಲದಿಂದ ನಿರೀಕ್ಷಿತ ಮಾನವ ಅಭಿವೃದ್ಧಿ ಆಗದಿರುವುದಕ್ಕೆ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿನ ಲೋಪದೋಷಗಳು ಮುಖ್ಯ  ಕಾರಣ ಎಂಬುದನ್ನು ಪರಿಗಣಿಸುವುದು ಮುಖ್ಯ.

ಹಿಂದಿನ ಮುಖ್ಯಮಂತ್ರಿ ಮಂಡಿಸಿರುವ ಆಯವ್ಯಯದ ಕೆಲವು ಮುಖ್ಯಾಂಶಗಳನ್ನು ಅವಲೋಕಿಸಿದಾಗ ರಾಜ್ಯದ ಆರ್ಥಿಕ ಬೆಳವಣಿಗೆಯ ಶೇ 5.9ರ ನಿರೀಕ್ಷೆಯಲ್ಲಿ ಕೈಗಾರಿಕಾ ವಲಯದ ಬೆಳವಣಿಗೆ ಶೇ 2.4ರಷ್ಟೆಂದು ಅಂದಾಜಿಸಲಾಗಿದೆ. ಆದುದರಿಂದ ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವೆ ಹೊಂದಾಣಿಕೆ ಮತ್ತು ಪರಸ್ಪರ ಪೂರಕ ಬೆಳವಣಿಗೆ ಅಗತ್ಯವಿದೆ. ಇದರಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಯಾ ಪ್ರದೇಶದ ಕೃಷಿ ಉತ್ಪನ್ನಗಳ ಆಧಾರದ ಮೇಲೆ ಆಹಾರ ಸಂಸ್ಕರಣ ಸಮೂಹ ಕೈಗಾರಿಕಾ ಘಟಕಗಳನ್ನು ಸಹಕಾರ, ಖಾಸಗಿ ಮತ್ತು ಜಂಟಿ ಕ್ಷೇತ್ರಗಳ ವ್ಯವಸ್ಥೆಯೊಡನೆ ಸ್ಥಾಪಿಸಿದಲ್ಲಿ ಆಯಾ ಪ್ರದೇಶಗಳಲ್ಲಿ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಜೊತೆಗೆ ಉದ್ಯೋಗ ಮತ್ತು ವ್ಯಾಪಾರ ವಹಿವಾಟುಗಳು ಅಭಿವೃದ್ಧಿಗೊಳ್ಳುತ್ತವೆ. ಜೊತೆಗೆ ನಿರ್ದಿಷ್ಟ ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ರಪ್ತು ವ್ಯಾಪಾರವನ್ನೂ ಹೆಚ್ಚಿಸಬಹುದು.

ಉದಾ: ದ್ರಾಕ್ಷಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಕ್ಷೇತ್ರದಲ್ಲಿ ವೈನ್ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ರಪ್ತು ವ್ಯಾಪಾರವನ್ನು ಅಭಿವೃದ್ಧಿಪಡಿಸಬಹುದು. 

ಆದರೆ ರಾಜ್ಯದ ಇಂಧನ ಮತ್ತು ವಿದ್ಯುತ್ ವಲಯಗಳ ಅಗತ್ಯ ಮತ್ತು ಪೂರೈಕೆಗಳನ್ನು ಗಮನಿಸಿದಾಗ ಸರ್ಕಾರವು ಈ ಕೊರತೆಯನ್ನು ನೀಗಿಸಲು ಸದ್ಯದಲ್ಲೇ ಅಪಾರ ಹಣದ ಹೊರೆಯನ್ನು ಭರಿಸಬೇಕಾಗುತ್ತದೆ.  ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ದೀರ್ಘಕಾಲಿಕ ಯೋಜನೆಗಳನ್ನು ಪ್ರಾರಂಭಿಸಿ ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಲು ಆಯವ್ಯಯದಲ್ಲಿ ಆದ್ಯತೆ ನೀಡಬೇಕಾಗಿದೆ. ಇದೇ ರೀತಿ ನೀರು ಪೂರೈಕೆ, ರಸ್ತೆ ಮತ್ತು ಚರಂಡಿ, ನೈರ್ಮಲ್ಯ, ವಸತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಗತ್ಯವನ್ನು ಮನಗಂಡು ಈ ಇಲಾಖೆಗಳಿಗೆ ನೀಡುವ ಅನುದಾನವು ಗುಣಾತ್ಮಕ ಬೆಳವಣಿಗೆಗಾಗಿ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕಾಗಿದೆ.

ಈಗಾಗಲೇ ಮುಖ್ಯಮಂತ್ರಿಯವರು ತಿಳಿಸಿರುವಂತೆ ನಮ್ಮ ನೀರಿನ ಹಕ್ಕನ್ನು ಬಳಕೆ ಮಾಡಿಕೊಳ್ಳಲು ಜಲಸಂಪನ್ಮೂಲ ಇಲಾಖೆಗೆ ಪ್ರಸಕ್ತ ವರ್ಷದಲ್ಲಿ ಕನಿಷ್ಠ ರೂ 10 ರಿಂದ 15 ಸಾವಿರ ಕೋಟಿ ಅಗತ್ಯವಿದೆ.  ಬಡವರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗಾಗಿ ಸಮಗ್ರ ಯೋಜನೆಗಳು ಬೇಕಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT