ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ನಡೆಯುವ ಹೋರಾಟಕ್ಕೆ ನೊಬೆಲ್ ಶಾಂತಿ ಪ್ರಶಸ್ತಿಯ ಮೂಲಕ ಜಾಗತಿಕ ಮನ್ನಣೆ ಸಿಕ್ಕಿದರೂ, ರಾಜ್ಯದ ರಾಜಧಾನಿಯ ಸರ್ಕಾರಿ ಬಾಲಮಂದಿರಗಳ ಸ್ಥಿತಿ ಮಾತ್ರ ಶೋಚನೀಯವಾಗಿಯೇ ಉಳಿದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಈ ಬಾಲಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ. ಇವು ಮೂಲಸೌಲಭ್ಯಗಳಿಂದ ವಂಚಿತವಾಗಿ ಸಮಸ್ಯೆಯ ಗೂಡುಗಳಾಗಿದ್ದರೂ ವಿಧಾನಸೌಧದ ಒಳಗಿರುವವರಿಗೆ ಮಾತ್ರ ಇದು ಅರಿವಿಗೇ ಬರುತ್ತಿಲ್ಲ.

೧೯೮೯ರಲ್ಲಿ ವಿಶ್ವಸಂಸ್ಥೆಯಲ್ಲಿ ಘೋಷಣೆಯಾದ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಇದೀಗ ೨೫ ವರ್ಷ ತುಂಬಿದೆ. ಆದರೂ ಮಕ್ಕಳ ಹಕ್ಕುಗಳ ರಕ್ಷಣೆ ಆಗದಿರುವುದು ವಿರೋಧಾಭಾಸವೇ ಸರಿ. ೧೯೯೨ರಲ್ಲಿ ಭಾರತ ಈ ಒಡಂಬಡಿಕೆಗೆ ಸಹಿ ಹಾಕಿ ಮಕ್ಕಳ ಹಕ್ಕುಗಳನ್ನು ಕಾಪಾಡುವ ಪಣ ತೊಟ್ಟಿದೆ. ಆದರೆ, ಮಕ್ಕಳ ಹಕ್ಕುಗಳ ರಕ್ಷಣೆಗೆಂದು ಸ್ಥಾಪನೆಯಾದ ಬಾಲಮಂದಿರಗಳೇ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿರುವುದು ಇಲಾಖೆಯ ನಿಷ್ಕಾಳಜಿಯನ್ನು ತೋರುತ್ತದೆ.

ಬೆಂಗಳೂರಿನ ನಿಮ್ಹಾನ್ಸ್ ಬಳಿ ಇರುವ ಬಾಲಮಂದಿರ ಇದಕ್ಕೆ ಒಂದು ನಿದರ್ಶನ. ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಇಲ್ಲಿನ ಮಕ್ಕಳು ಹಿಂಸೆ ಅನುಭವಿಸುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲದೆ ಬಿಹಾರ, ಪಶ್ಚಿಮ ಬಂಗಾಳ, ರಾಜಸ್ತಾನ, ಆಂಧ್ರ ಪ್ರದೇಶಕ್ಕೆ ಸೇರಿದ ೧೯೮ ಮಕ್ಕಳು ಈಗ (ಇದೇ ಅ. ೨೧ರ ಪ್ರಕಾರ) ಬಾಲಕರ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದಾರೆ. ಭಿಕ್ಷೆ ಬೇಡುತ್ತಿದ್ದವರು, ಬಾಲ ಕಾರ್ಮಿಕರು, ಮದ್ಯವ್ಯಸನಿಗಳು, ಮನೆ ಬಿಟ್ಟು ಓಡಿಬಂದವರು, ಅನಾಥರು ಈ ಗುಂಪಿನಲ್ಲಿದ್ದಾರೆ. ರೈಲು, ಬಸ್ ನಿಲ್ದಾಣಗಳಿಂದ ಈ ಮಕ್ಕಳನ್ನು ತಂದು ಇಲ್ಲಿ ಕೂಡಿ ಹಾಕಲಾಗಿದೆ. ಇಷ್ಟು ಮಕ್ಕಳ ಪುನರ್ವಸತಿ ಮಾಡುವುದಾದರೂ ಹೇಗೆ?

ಮಗುವಿಗೆ ಚಿತ್ರಹಿಂಸೆ ಕೊಟ್ಟ ಆರೋಪದಡಿ ಸಂಸ್ಥೆಯ ಅಧೀಕ್ಷಕರನ್ನು ಅಮಾನತಿನಲ್ಲಿ ಇಡಲಾಗಿದೆ. ಈ ಹುದ್ದೆಗೆ ಬರಲು ಸಾಮಾನ್ಯವಾಗಿ ಇಲಾಖೆಯ ಯಾವುದೇ ಅಧಿಕಾರಿ ಇಷ್ಟಪಡುವುದಿಲ್ಲ. ಮಕ್ಕಳಿಗೆ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ಈ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವವರು ಇಲಾಖೆಯಲ್ಲಿ ಅಪರೂಪ. ಬಾಲಮಂದಿರದಲ್ಲಿ ಬಹಳ ಮುಖ್ಯ ಪಾತ್ರ ವಹಿಸಬೇಕಾದ ಆಪ್ತ ಸಮಾಲೋಚಕರ ಹುದ್ದೆ ತೆರವಾಗಿ ಒಂದು ವರ್ಷವಾಗಿದೆ. ಕನಿಷ್ಠ ನಾಲ್ವರು ಆಪ್ತ ಸಮಾಲೋಚಕರ ಅಗತ್ಯ ಇರುವ ಕಡೆ ಈಗ ಇರುವುದು ಪ್ರಭಾರ ಆಪ್ತ ಸಮಾಲೋಚಕಿ ಮಾತ್ರ. ಆಪ್ತ ಸಮಾಲೋಚನೆ ಮಾಡುವವರಿಗೆ ಕೆಲಸದ ಒತ್ತಡ ಇದ್ದರೆ ಅವರು ಮಾಡಬೇಕಾದ ಸೇವಾ ಕಾರ್ಯಕ್ಕೆ ತೊಡಕುಂಟಾಗುತ್ತದೆ. ಮಕ್ಕಳ ಭವಿಷ್ಯ ನಿರ್ಧಾರ ಆಗುವಂತಹ ಪ್ರಮುಖ ಹಂತ ಆಪ್ತ ಸಮಾಲೋಚನೆ. ಆದರೆ, ಇಲಾಖೆ ಈ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ.

ಬಾಲಕರ ಬಾಲಮಂದಿರದ ಒಳ ಹೊಕ್ಕರೆ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ. ನೊಣಗಳು ಮುತ್ತಿಕೊಳ್ಳುತ್ತವೆ. ಮಕ್ಕಳ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಜೈಲನ್ನು ಹೋಲುವ ಕೊಠಡಿಯೊಳಗೆ ಮಕ್ಕಳನ್ನು ಕೂಡಿ ಹಾಕಿರುತ್ತಾರೆ. ಅನೇಕ ಮಕ್ಕಳು ಮೈ ಕೆರೆಯುತ್ತಾ ಕುಳಿತಿರುತ್ತಾರೆ. ಕೆಲವರು ಪರಸ್ಪರ ಹೊಡೆದಾಡಿಕೊಂಡು ಕಾಲ ಕಳೆಯುತ್ತಾರೆ. ಮಕ್ಕಳನ್ನು ಮಾತನಾಡಿಸಿದರೆ ದೂರುಗಳ ಮಹಾಪೂರವೇ ಹರಿದುಬರುತ್ತದೆ. ‘ನಾವು ಬಂದು ಒಂದು ತಿಂಗಳಾಯಿತು, ನಮ್ಮ ಬಿಡುಗಡೆ ಯಾವಾಗ?’, ‘ಇಲ್ಲಿ ಹೊಡೀತಾರೆ ಸಾರ್’, ‘ನಾನು ಅಮ್ಮನನ್ನು ನೋಡಬೇಕು’, ‘ನನಗೆ ೧೮ ವರ್ಷ ಆಗಿದೆ. ಆದರೂ ಹೊರಗೆ ಬಿಡ್ತಾ ಇಲ್ಲ ಸರ್’, ‘ನನಗೆ ಬದಲಾಯಿಸೋಕ್ಕೆ ಬೇರೆ ಬಟ್ಟೆ ಕೊಟ್ಟಿಲ್ಲ’... ಹೀಗೆ ಅನೇಕ ಆಕ್ಷೇಪಗಳು ಮಕ್ಕಳಿಂದ ಕೇಳಿ ಬರುತ್ತವೆ. ಸಂಬಂಧಪಟ್ಟವರು ಯಾರೂ ಮಕ್ಕಳ ಬಳಿ ಹೋಗುತ್ತಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

ಇದನ್ನು ನೋಡಿದರೆ ರಾಜಧಾನಿಯಲ್ಲಿ ಸರ್ಕಾರದ ಪ್ರಾಯೋಜಕತ್ವದಲ್ಲೇ ಮಕ್ಕಳಿಗೆ ಒಂದು ನರಕ ಸೃಷ್ಟಿಯಾಗಿದೆಯೇನೋ ಎನಿಸುತ್ತದೆ. ಸೃಜನಶೀಲರೂ, ಸದಾ ಚಟುವಟಿಕೆಯಿಂದಲೂ ಇರುವ ಮಕ್ಕಳನ್ನು ೨೪ ಗಂಟೆ ಹೀಗೆ ಕೂಡಿ ಹಾಕುವುದು ನ್ಯಾಯವೇ? ೧೫ ಮಕ್ಕಳು ಈ ನರಕದಿಂದ ಪರಾರಿಯಾದದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಬಾಲಕಿಯರ ಬಾಲಮಂದಿರದಲ್ಲಿ ೮೮ ಮಕ್ಕಳಿದ್ದಾರೆ. ಸಾಮಾನ್ಯ ಮಕ್ಕಳೊಂದಿಗೆ ಬುದ್ಧಿಮಾಂದ್ಯರು, ಮೂರ್ಛೆ ಬಾಧೆಗೆ ಒಳಗಾದ ಮಕ್ಕಳಿಗೂ ಇಲ್ಲಿ ಪುನರ್ವಸತಿ ಕಲ್ಪಿಸಲಾ ಗಿದೆ. ಇದಲ್ಲದೆ, ಗರ್ಭಿಣಿಯರಾಗುವ ಅನಾಥ ಬಾಲಕಿಯರನ್ನೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಕಳುಹಿಸಲಾಗುತ್ತದೆ. ಸಾಮಾನ್ಯ ಮಕ್ಕಳು ವಿಶೇಷ ಸಮಸ್ಯೆಗಳಿರುವ ಮಕ್ಕಳೊಂದಿಗೆ ಇರುವುದರಿಂದ ಅದು ಅವರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಆದರೆ, ಸಂಬಂಧಪಟ್ಟವರು ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಮಕ್ಕಳ ಕಲ್ಯಾಣ ಸಮಿತಿಯ ಮೂರು ವಿಭಾಗೀಯ ಘಟಕಗಳು ಕಳೆದ ಜುಲೈನಿಂದ ಕಾರ್ಯ ನಿರ್ವಹಿಸುತ್ತಿವೆ. ಅವೆಲ್ಲವೂ ಈ ಸಮಸ್ಯೆಗಳ ಮುಂದೆ ಸ್ತಬ್ಧವಾಗಿ ನಿಂತಿವೆ. ಮ್ಯಾಜಿಸ್ಟೀರಿಯಲ್ ಅಧಿಕಾರ ಹೊಂದಿರುವ ಸಮಿತಿಯು ಹೊಣೆಗೇಡಿ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು; ತಪ್ಪಿತಸ್ಥರ ಮೇಲೆ ಮೊಕದ್ದಮೆ ಹೂಡಬಹುದು. ಮಕ್ಕಳ ಹಿತ ಕಾಪಾಡಲು ಅದು ತೆಗೆದುಕೊಳ್ಳುವ ಯಾವುದೇ ಕ್ರಮವೂ ಬಾಲನ್ಯಾಯ ಕಾಯ್ದೆಯಡಿ ನ್ಯಾಯಸಮ್ಮತವಾದದ್ದು. ಆದರೂ ಸಮಿತಿ ಮೂಕಪ್ರೇಕ್ಷಕನಂತೆ ಇರುವುದು ದುರ್ದೈವ.

ಸಾವಿರ ಕೋಟಿ ರೂಪಾಯಿ ಮೊತ್ತದ ‘ಸಮಗ್ರ ಮಕ್ಕಳ ರಕ್ಷಣಾ ಯೋಜನೆ’ಯು (ಐ.ಸಿ.ಪಿ.ಎಸ್) ಎರಡು ವರ್ಷದಿಂದ ಜಾರಿಯಲ್ಲಿದ್ದರೂ ನಮ್ಮ ಬಾಲಮಂದಿರಗಳು ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಡಿ.ಸಿ.ಪಿ.ಯು) ಪ್ರಾರಂಭವಾಗಿದೆ. ಮಕ್ಕಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಅವರ ಅಭಿವೃದ್ಧಿಗಾಗಿ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದು ಈ ಘಟಕದ ಕರ್ತವ್ಯ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಸಹಕಾರದಿಂದ ಮಕ್ಕಳ ಉತ್ತಮ ಭವಿಷ್ಯಕ್ಕೆ ಶ್ರಮಿಸಬೇಕಾದ ಈ ಘಟಕಗಳು ಸರಿಯಾದ ಮಾರ್ಗದರ್ಶನ ಇಲ್ಲದೆ ಹೆಸರಿಗೆ ಮಾತ್ರ ಎಂಬಂತೆ ಇವೆ. ಹಿಂದೆ ಬೆಂಗಳೂರು ಬಾಲಮಂದಿರಕ್ಕೆ ಹಲವು ಸಂಘ ಸಂಸ್ಥೆಗಳು ಉಚಿತ ಸೇವೆ ನೀಡುತ್ತಿದ್ದವು. ಆದರೆ, ಈಗ ಒಂದೆರಡು ಸಂಸ್ಥೆಗಳನ್ನು ಹೊರತುಪಡಿಸಿ ಇತರ ಸಂಸ್ಥೆಗಳು ಬಾಲಮಂದಿರದ ಕಡೆ ಮುಖ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಅಲ್ಲಿನ ಮಕ್ಕಳು ಚಟುವಟಿಕೆ ಮತ್ತು ಮಾರ್ಗದರ್ಶನ ಇಲ್ಲದೆ ನರಳುವಂತಾಗಿದೆ.

ಈ ಮಕ್ಕಳನ್ನು ಸುಧಾರಿಸುವುದು ಬಹಳ ಕಷ್ಟ ಎನ್ನುವುದು ಸಿಬ್ಬಂದಿಯ ಆಕ್ಷೇಪ. ಅನ್ಯಾಯ, ಶೋಷಣೆ, ಚಿತ್ರಹಿಂಸೆ, ನಿರ್ಲಕ್ಷ್ಯ, ವಂಚನೆ, ಅವಮಾನ, ಕಿರುಕುಳ, ಹಸಿವು, ಅನಕ್ಷರತೆ, ಅನಾಥ ಸ್ಥಿತಿ, ಬೈಗುಳದಂತಹ ಸಮಾಜದ ಎಲ್ಲ ಪಿಡುಗುಗಳಿಗೂ ಬಲಿಪಶುಗಳಾಗಿ ಬಾಲಮಂದಿರ ಸೇರುವ ಮಕ್ಕಳಿಗೆ ಎಷ್ಟು ಪ್ರೀತಿ, ವಾತ್ಸಲ್ಯ ತೋರಿದರೂ ಸಾಲದು. ಅವರಲ್ಲಿ ಒಡೆದುಹೋಗಿರುವ ನಂಬಿಕೆ ಮತ್ತೆ ಹುಟ್ಟುವಂತೆ ಮಾಡಬೇಕಾಗಿದೆ. ಆ ಭರವಸೆಯಲ್ಲೇ ಹೊಸ ಬದುಕಿನ ಕನಸನ್ನು ಬಿತ್ತಬೇಕಾಗಿದೆ. ಇದು ಬಾಲಮಂದಿರದ ಸಿಬ್ಬಂದಿಯ ಮುಂದಿರುವ ಸವಾಲು. ಮಕ್ಕಳ ಮೇಲೆ ನಿಜವಾದ ಪ್ರೀತಿ ಮತ್ತು ಕಾಳಜಿ ಇದ್ದರೆ ಈ ಕೆಲಸ ಕಷ್ಟವಾಗಲಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.