ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಧ್ವನಿ ಎತ್ತಿ ‘ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ಗೆ ಸಹಿ ಹಾಕಿದ ಭಾರತದ ಸ್ಥಿತಿ ವಿಳಾಸವಿಲ್ಲದೇ ಬರೆದ ಪತ್ರದಂತಾಗಿದೆ ಎನಿಸುತ್ತಿದೆ. ಉತ್ತಮ ಕಾನೂನುಗಳಿದ್ದರೂ ಅವುಗಳನ್ನು ಮಾನವೀಯತೆಯೊಂದಿಗೆ ಮೇಳೈಸಿ, ಅನುಷ್ಠಾನಕ್ಕೆ ತರುವ ಕಾನೂನು ಸುವ್ಯವಸ್ಥೆ ನಮಗೆ ಇಂದು ಬೇಕಾಗಿದೆ.

ಅಂತರರಾಷ್ಟ್ರೀಯ ಮಾನ್ಯತೆ ಹಾಗೂ ರಾಜಕೀಯ ಬದ್ಧತೆಯ ಕಾರಣದಿಂದ ನಮ್ಮ ದೇಶ ಇತರ ಪ್ರಗತಿಪರ ರಾಷ್ಟ್ರಗಳ ಜೊತೆ ಸೇರಿ ‘ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ಗೆ ಸಹಿ ಹಾಕಿ ಎರಡು ದಶಕಗಳೇ ಕಳೆದುಹೋಗಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಈ ಒಡಂಬಡಿಕೆಗೆ ಸಹಿ ಹಾಕಿದ್ದು 1992ರಲ್ಲಿ. ಆದರೆ ನಂತರದ ಅವಧಿಯಲ್ಲೂ ಮಕ್ಕಳ ಶೋಷಣೆಯನ್ನು ಹತ್ತಿಕ್ಕಲಾಗದ ಈ ಸಹಿ ಮಕ್ಕಳ ಪಾಲಿಗೆ ‘ಸಿಹಿ’ ಆಗದೇ ಇರುವುದು ನಾಗರಿಕ ಸಮಾಜಕ್ಕೆ ಭ್ರಮನಿರಸನವನ್ನು ಉಂಟುಮಾಡಿದೆ. ದೇಶದ ಒಟ್ಟಾರೆ ಮಕ್ಕಳ ಅಂಕಿ-ಅಂಶವನ್ನು ಬದಿಗಿಟ್ಟು, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಹೇಳುವುದಾದರೆ, ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 34.6ರಷ್ಟು ಮಕ್ಕಳಿದ್ದಾರೆ.

ಇವರಲ್ಲಿ ಬಹುತೇಕರು ಇಂದಿಗೂ ಹಲವಾರು ಶೋಚನೀಯ ಪರಿಸ್ಥಿತಿಗಳಲ್ಲಿ ನಲುಗಿ ಹೋಗುತ್ತಿದ್ದಾರೆ. ಕಡ್ಡಾಯ ಶಿಕ್ಷಣ ಪದ್ಧತಿ ಜಾರಿಯಾಗಿದ್ದರೂ ಶೇ 18ರಷ್ಟು ಮಕ್ಕಳು ಪ್ರಾಥಮಿಕ ಶಾಲೆಯನ್ನು ಮುಗಿಸಿ, ಮಾಧ್ಯಮಿಕ ಶಾಲೆಯನ್ನು ಪ್ರವೇಶಿಸುತ್ತಿಲ್ಲ. ಅಲ್ಲದೆ ದೇಶದಲ್ಲಿ ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವ 8ನೇ ರಾಜ್ಯವೆಂಬ ಕುಖ್ಯಾತಿ ಸಹ ಇದ್ದು, ಈ ಕಳಂಕವನ್ನು ತೊಳೆದುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಅಂಕಿ–ಅಂಶಗಳಿಂದ ತಿಳಿದುಬರುತ್ತದೆ.
ಅಪರಾಧ ದಾಖಲೆ ಬ್ಯೂರೊ ಪ್ರಕಾರ, ರಾಜ್ಯದಲ್ಲಿ ಪ್ರತಿನಿತ್ಯ 10 ಮಕ್ಕಳು ವಿವಿಧ ಕಾರಣಗಳಿಗೆ ನಾಪತ್ತೆಯಾಗುತ್ತಿದ್ದಾರೆ. ಹುಟ್ಟುವ ಸಾವಿರ ಮಕ್ಕಳಲ್ಲಿ ಒಂದು ವರ್ಷ ಪೂರೈಸುವುದರೊಳಗೆ 29 ಮಕ್ಕಳು ಮೃತರಾಗುತ್ತಿದ್ದಾರೆ. ಚಿಕ್ಕ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು, ವೇಶ್ಯಾವಾಟಿಕೆ ಜಾಲ, ಭ್ರೂಣಹತ್ಯೆ, ಶಿಶುಹತ್ಯೆ, ಕುಟುಂಬಗಳಲ್ಲಿನ ಶೋಷಣೆ, ಮನೆ, ಗ್ಯಾರೇಜು, ಹೋಟೆಲು ಉದ್ದಿಮೆಗಳಲ್ಲಿನ ಜೀತ ಹಾಗೂ ಬಿಟ್ಟಿ ಚಾಕರಿ ರಾಜ್ಯದ ಉದ್ದಗಲಕ್ಕೂ ವ್ಯಾಧಿಯಾಗಿ ಬಾಧಿಸುತ್ತಿವೆ. ಇವು ಪ್ರತಿನಿತ್ಯ ವರದಿಯಾಗುವ ಪ್ರಕರಣಗಳಾಗಿ ನಾಗರಿಕರ ಸಂವೇದನೆಯೇ ಹಂತಹಂತವಾಗಿ ಕ್ಷೀಣಿಸುತ್ತಿದೆಯೇನೋ ಎಂದು ಭಾಸವಾಗುತ್ತಿದೆ.

ಇದಲ್ಲದೆ ಬೃಹತ್ ಮಟ್ಟದಲ್ಲಿ ಕಾಣೆಯಾಗುತ್ತಿರುವ ಮಕ್ಕಳ ಅಂಕಿ–ಅಂಶ ಕೂಡ ‘ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ ನಮ್ಮ ದೇಶದಲ್ಲಿ ಇನ್ನೂ ಶೈಶವಾವಸ್ಥೆಯಲ್ಲೇ ತೆವಳುತ್ತಿದೆ ಎಂಬ ಮಾತಿಗೆ ಪುಷ್ಟಿ ನೀಡುವಂತಿದೆ (5 ವರ್ಷಗಳ ಅವಧಿಯಲ್ಲಿ ಸರ್ಕಾರಿ ಬಾಲಮಂದಿರಗಳಿಂದ ಕಾಣೆಯಾಗಿರುವ ಮಕ್ಕಳ ಸಂಖ್ಯೆ -2,112). ಭ್ರೂಣ ವ್ಯವಸ್ಥೆಯಲ್ಲಿ ಹಾಗೂ ಹುಟ್ಟಿದೊಡನೆ ಲಿಂಗ ತಾರತಮ್ಯದ ಕಾರಣದಿಂದ, ಬೆಳಕು ಕಾಣುವ ಮುನ್ನವೇ ತನ್ನವರಿಂದಲೇ ಚಿವುಟಿ ಹೋಗುತ್ತಿರುವ ಅದೆಷ್ಟೋ ಎಳೆಯ ಆತ್ಮಗಳ ಸಂಖ್ಯೆ ದಾಖಲೆಗೆ ಸಿಗುತ್ತಿಲ್ಲ. ಈ ಮಕ್ಕಳನ್ನು ಇನ್ನಿಲ್ಲವೆನಿಸಿದ ‘ಸಭ್ಯ ಕೊಲೆಗಡುಕರು’ ಮಾತ್ರ ಕಾನೂನಿನ ಕುಣಿಕೆಯಿಂದ ಸರಾಗವಾಗಿ ಪಾರಾಗುತ್ತಿದ್ದಾರೆ.

ಮಕ್ಕಳ ಪಾಲನೆ, ಪೋಷಣೆ, ಸಂರಕ್ಷಣೆಗಾಗಿ ಅನುಷ್ಠಾನದಲ್ಲಿರುವ ಕಾನೂನುಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಬಾಲಕಾರ್ಮಿಕ ನಿಷೇಧ ಕಾಯ್ದೆ -1986, ಪೋಷಣೆ- ರಕ್ಷಣೆ ಕಾಯ್ದೆ -2000, ಬಾಲನ್ಯಾಯ ಕಾಯ್ದೆ -2005, ಮಕ್ಕಳ ಮೂಲಭೂತ ಹಕ್ಕೆಂದು ಪರಿಗಣಿಸಲಾಗಿರುವ ಶಿಕ್ಷಣದ ಹಕ್ಕು, ಅಲ್ಲದೆ ಇತ್ತೀಚೆಗೆ ಜಾರಿಗೆ ಬಂದ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (POCSO)- 2012’ ಇವೆಲ್ಲವೂ ಮಕ್ಕಳನ್ನು ಸಂತುಷ್ಟಿಯಿಂದ ಇಡಬಹುದಾಗಿತ್ತೇನೋ. ಆದರೆ ರಾಜಕೀಯ ಇಚ್ಛಾಶಕ್ತಿ, ಬದ್ಧತೆಯ ಕೊರತೆ ಮತ್ತು ಭ್ರಷ್ಟ ವ್ಯವಸ್ಥೆಯಿಂದಾಗಿ ಆ ಆಶಯ ಮಾಸಲಾಗುತ್ತಿದೆ.

ಮಕ್ಕಳ ಹಕ್ಕುಗಳ ಸಂರಕ್ಷಣೆ ಮತ್ತು ನ್ಯಾಯ ವಿತರಣೆಗಾಗಿ ಅನುಷ್ಠಾನಕ್ಕೆ ಬಂದಿರುವ ನ್ಯಾಯಿಕ ಸಂಸ್ಥೆಗಳಾದ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿಗಳಲ್ಲೂ ರಾಜಕೀಯ ಪ್ರಭಾವದ ಗಾಳಿ ಬೀಸುತ್ತಿದೆ. ಮಕ್ಕಳ ಸಂರಕ್ಷಣೆ ಸಲುವಾಗಿ ಎಂದೂ ಯಾವ ಕೆಲಸವನ್ನೂ ಮಾಡದ ಹಲವರು ಕೇವಲ ತಮ್ಮ ವೈಯಕ್ತಿಕ ಘನತೆಗಾಗಿ ಈ ಮಂಡಳಿಗಳಿಗೆ ಆಯ್ಕೆಯಾಗುತ್ತಿರುವುದು ಮಕ್ಕಳ ದುರದೃಷ್ಟವೇ ಸರಿ. ಇದಕ್ಕೆ ಒಂದೆರಡು ಘಟನೆಗಳನ್ನು ಉದಾಹರಿಸುವುದು ಸೂಕ್ತ-.

ಘಟನೆ -1
ಭಿಕ್ಷೆ ಬೇಡುತ್ತಿದ್ದ ಒಬ್ಬ ಬಾಲಕಿಯನ್ನು ಮಕ್ಕಳ ವಿಶೇಷ ಪೊಲೀಸ್ ಘಟಕದವರು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಕರೆತಂದರು. ಸಮಿತಿ ಆಶ್ರಯ ನೀಡುವಂತೆ ತಿಳಿಸಿ ಅವಳನ್ನು ಬಾಲಮಂದಿರದ ಸಿಬ್ಬಂದಿಗೆ ವಹಿಸಿತು. ಸೂಕ್ತ ಸಿಬ್ಬಂದಿ ಕೊರತೆ, ಮನಶಾಸ್ತ್ರಜ್ಞರು ಹಾಗೂ ವಿಶೇಷ ತರಬೇತುದಾರರ ಕೊರತೆಯಿಂದಾಗಿ ಬಾಲಕಿಗೆ ಬಾಲಮಂದಿರ ನರಕವಾಗತೊಡಗಿತು. ಅಲ್ಲಿಂದ ಆಕೆ ಕಣ್ಮರೆಯಾದಳು. ಬಾಲಮಂದಿರದ ಪ್ರಕಾರ ಬಾಲಕಿ ಓಡಿಹೋದಳು! ಹಾಗಾಗಿ ಪೊಲೀಸರು ಎಫ್ಐಆರ್ ದಾಖಲಿಸಿದರು. ಈ ವಿಚಾರ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೂ ಬಂತು. ಅಲ್ಲಿಗೆ ಪೊಲೀಸರು, ಬಾಲಮಂದಿರದ ಮೇಲ್ವಿಚಾರಕರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯವರ ಕೆಲಸವೆಲ್ಲ ಮುಗಿಯಿತು!

ಮತ್ತೊಂದು ಆರು ತಿಂಗಳ ನಂತರ ಹದಿನಾಲ್ಕು ವರ್ಷದ ಅದೇ ಬಾಲಕಿ ಆರು ತಿಂಗಳ ಗರ್ಭಿಣಿಯಾಗಿ, ಆಶ್ರಯ ಬೇಡಿ ಮತ್ತೆ ಅದೇ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದಳು! ಸಿಬ್ಬಂದಿಯ ಕೊರತೆಯಿಂದ ಗರ್ಭಿಣಿಯನ್ನು ನೋಡಿಕೊಳ್ಳಲು ಸಾಧ್ಯವಾಗದು ಎಂದು ಬಾಲಮಂದಿರದ ಸಿಬ್ಬಂದಿ ಸಮಿತಿಗೆ ತಿಳಿಸಿದರು. ಬಳಿಕ ಮಗುವನ್ನು ಬೇರೊಂದು ಸಂಸ್ಥೆಗೆ ಕಳುಹಿಸಿಕೊಡಲಾಯಿತು ಹಾಗೂ ಆಕೆಯನ್ನು ಆ ಸ್ಥಿತಿಗೆ ತಂದ ಮತ್ತೊಬ್ಬ ಭಿಕ್ಷುಕನನ್ನು ಜೈಲಿಗೆ ಅಟ್ಟಲಾಯಿತು.

ಈ ಘಟನೆಯನ್ನು ಗಮನಿಸಿದಾಗ, ಬೇಜವಾಬ್ದಾರಿ ವರ್ತನೆಗಳು ಹಾಗೂ ಸಂಕಷ್ಟದಲ್ಲಿರುವವರನ್ನು ಸಂರಕ್ಷಿಸಲಾಗದಂತಹ ಸ್ಥಿತಿಯಲ್ಲಿರುವ ಸರ್ಕಾರಿ ವ್ಯವಸ್ಥೆ ಯಾವುದೇ ಕಾನೂನಿನ ಚೌಕಟ್ಟಿಗೂ ಒಳಪಡದಿರುವುದು ಸ್ಪಷ್ಟವಾಗುತ್ತದೆ. ಕೇವಲ ಕಾನೂನುಗಳು ಮಕ್ಕಳ ಬದುಕನ್ನು ಹಸನುಗೊಳಿಸಲಾರವು. ಅವರ ಬದುಕನ್ನು, ಕನಸುಗಳನ್ನು, ಶಿಕ್ಷಣವನ್ನು, ಸೌಜನ್ಯವನ್ನು, ಒಟ್ಟಾರೆ ವಿಕಾಸವನ್ನು ಕಾಪಾಡಬೇಕಾದಂತಹ ಒಂದು ಮಾನವೀಯ ವ್ಯವಸ್ಥೆಯನ್ನು ನಾವೀಗ ನಿರ್ಮಾಣ ಮಾಡಬೇಕಾಗಿದೆ.

ಘಟನೆ- 2
ಅವೆರಡು ಮುದ್ದು ಮಕ್ಕಳು ಹುಟ್ಟುತ್ತಲೇ ಸಮಸ್ಯೆಯನ್ನು ಹೊತ್ತು ತಂದಿದ್ದವು. ಅಪ್ಪನಿಗೆ ಮಕ್ಕಳು ಬೇಡ, ತಾಯಿಗೆ ಮಕ್ಕಳನ್ನು ಕಂಡರೆ ಬಿಟ್ಟಿರಲಾರದ ಪ್ರೀತಿ. ಅವು ಮಾನಸಿಕ, ದೈಹಿಕ ನ್ಯೂನತೆಯಿರುವ ವಿಶೇಷ ಮಕ್ಕಳು. ಅವರನ್ನು ನೋಡಿಕೊಳ್ಳುವುದು ಕಷ್ಟ. ಕೈ ಹಿಡಿಯಬೇಕಾದ ಬಂಧುಬಳಗದವರು ಬಡತನದ ರೇಖೆಗಿಂತಲೂ ಕೆಳಗಿದ್ದಾರೆ. ಸಾವನ್ನರಸಿ ಹೊರಟ ತಾಯಿ ಮಕ್ಕಳನ್ನು ಯಾರೋ ಬದುಕಿಸಿದರು. ಸಮಾಜದಿಂದ ದೂರವಾದ ಆ ತಾಯಿಗೆ ಸಂಸ್ಥೆಯೊಂದು ಆಶ್ರಯ ನೀಡಿತು. ಆದರೆ ಹೀಗೆ ಬದುಕಿ ಬಂದ ತಾಯಿ ಮಕ್ಕಳ ಯೋಗಕ್ಷೇಮಕ್ಕೆ, ಆರೋಗ್ಯ ಸಂರಕ್ಷಣೆಗೆ ನಿರಂತರವಾಗಿ ಹಣ ಬೇಕು. ಎಲ್ಲಿಂದ ತರುವುದು? ಸರ್ಕಾರಿ ಘಟಕಗಳಲ್ಲಿ ಇವರಿಗೆ ಉತ್ತರ ನೀಡುವವರಿಲ್ಲ.

ರಾಜ್ಯದ ಜಿಲ್ಲೆಗಳಲ್ಲಿ ಮಾನಸಿಕ, ದೈಹಿಕ ಅಂಗವಿಕಲರನ್ನು ನೋಡಿಕೊಳ್ಳಲು ಸೂಕ್ತ ಜಾಗಗಳಿಲ್ಲ. ಈ ಎಲ್ಲ ಕಾರಣಗಳಿಂದ, ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಧ್ವನಿ ಎತ್ತಿ ‘ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ’ಗೆ ಸಹಿ ಹಾಕಿದ ಭಾರತದ ಸ್ಥಿತಿ ವಿಳಾಸವಿಲ್ಲದೇ ಬರೆದ ಪತ್ರದಂತಾಗಿದೆ ಎನಿಸುತ್ತಿದೆ. ಉತ್ತಮ ಕಾನೂನುಗಳಿದ್ದರೂ ಅವುಗಳನ್ನು ಮಾನವೀಯ ಮೌಲ್ಯಗಳೊಡನೆ ಮೇಳೈಸಿ, ವಿವೇಚನೆಯೊಡನೆ ಅನುಷ್ಠಾನಕ್ಕೆ ತರುವ ಕಾನೂನು ಸುವ್ಯವಸ್ಥೆ ನಮಗೆ ಇಂದು ಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಬಾಯಿಗೆ ಬೀಗ ಜಡಿದುಕೊಂಡು ಜಡವಾಗಿ ಕುಳಿತಿರುವ ಸುಸಂಸ್ಕೃತರು ಇನ್ನಾದರೂ ಬಾಯ್ತೆರೆಯಬೇಕಾಗಿದೆ. ಮರಗಳ, ಪ್ರಾಣಿಗಳ ಹಕ್ಕುಗಳ ಪ್ರತಿಪಾದಕರು ನಮ್ಮಲ್ಲಿರುವಾಗ ಮಕ್ಕಳು ಬೆಳಗಬೇಕು ಎನ್ನುವ ಜನಸಮುದಾಯ ಹೆಚ್ಚಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.