ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರದ ಪರಮಾಧಿಕಾರಕ್ಕೆ ಧಕ್ಕೆ!

Last Updated 21 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಕೇರಳದ ಮೀನುಗಾರರ ಹತ್ಯೆ  ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಸುಪ್ರೀಂಕೋರ್ಟ್‌ನ ತೀರ್ಪು ಸ್ವಾಗತಾರ್ಹವಾದದ್ದು. 1961 ರ ವಿಯೆನ್ನಾ ಒಪ್ಪಂದ ಮತ್ತು ಯುನೆಸ್ಕೊ ಶಾಂತಿ ಸಮ್ಮೇಳನದ (1946) ಅನ್ವಯ ರಾಜತಾಂತ್ರಿಕರಿಗೆ ಯಾವುದೇ ದೇಶದ ಕಾನೂನು ಕಟ್ಟಳೆಗಳಿಂದ ವಿನಾಯಿತಿ ನೀಡಲಾಗಿರುವುದು ಹಾಗೂ  ಅವರ ವಿರುದ್ಧ ಯಾವುದೇ ಮೊಕದ್ದಮೆ ಹೂಡಲು ಅವರ  ಸ್ವಂತ ರಾಷ್ಟ್ರಕ್ಕೆ ಹೊರತಾಗಿ  ಮತ್ತಾವುದೇ ರಾಷ್ಟ್ರಗಳಿಗೆ ಸಾಧ್ಯವಿಲ್ಲವೆಂಬುದು ಸತ್ಯ ಸಂಗತಿಯೇ ಹೌದು.

 ಆದರೆ ಮೇಲಿನ  ಎರಡು ನಿಯಮಗಳಲ್ಲಿ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಪರಮಾಧಿಕಾರಕ್ಕೆ ಗೌರವ ಸಲ್ಲಿಸಬೇಕು. ಯಾವುದೇ ರಾಷ್ಟ್ರದ ರಾಯಭಾರಿ ನಿಯೋಜಿತ ರಾಷ್ಟ್ರದ ಪರಮಾಧಿಕಾರಕ್ಕೆ ಧಕ್ಕೆ ತಗುಲುವಂತಹ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ನಿಯೋಜಿತ ದೇಶದಲ್ಲಿ ರಾಯಭಾರಿ ಆ ರಾಷ್ಟ್ರದ ಗೌಪ್ಯ ಸ್ಥಳಗಳಿಗೆ ಭೇಟಿ ನೀಡುವುದನ್ನು ಪ್ರತಿಬಂಧಿಸಲಾಗಿದೆ.

ಉದಾಹರಣೆ ಮಿಲಿಟರಿ ವ್ಯಾಪ್ತಿ, ರಕ್ಷಣಾ ವಲಯ ಇತ್ಯಾದಿ. ಈ ಪ್ರಕರಣದಲ್ಲಿ ಡೇನಿಯಲ್ ಮಾನ್ಸಿನಿ ಹಾಗೂ ಇಟಲಿ ಸರ್ಕಾರ ಸ್ವತಃ ವಿಯೆನ್ನಾ  ಹಾಗೂ ಯುನೆಸ್ಕೋ ಶಾಂತಿ ಒಪ್ಪಂದವನ್ನು ಮುರಿದಿದ್ದಾರೆ. ವಿಶ್ವ ಸಂಘಟನೆಗಳ ನಿಯಮಗಳಾದಿಯಾಗಿ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಪರಮಾಧಿಕಾರಕ್ಕೆ ಚ್ಯುತಿ ತರುವಂತಿಲ್ಲ. ಹಾಗಾದಲ್ಲಿ ಆ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಮತ್ತು ನಿಯಮಗಳೆಲ್ಲವೂ ಮುರಿದುಬೀಳುತ್ತವೆ.

ಈ ಪ್ರಕರಣದಲ್ಲಾದದ್ದು ಅದೇ. ಇದರ ಜೊತೆಗೆ ಎಲ್ಲ ಒಪ್ಪಂದ ಹಾಗೂ ನಿಯಮಗಳನುಸಾರ ರಾಯಭಾರಿಯ ಸಕ್ರಮ ನಡಾವಳಿಗೆ ಮಾತ್ರ ವಿನಾಯಿತಿ ಎಂದು ನಿರ್ಬಂಧ ವಿಧಿಸಲಾಗಿದೆ  ಪ್ರಸ್ತುತ ಇಟಲಿಯ ರಾಯಭಾರಿ ಯಾವುದೇ ಪ್ರಮಾದಗಳನ್ನು ಎಸಗದಿರುವುದು ನಿಜವೇ ಆಗಿದ್ದರು, ಭಾರತದ ನ್ಯಾಯಿಕ ವಿಧಾನದಲ್ಲಿ ಕೊಲೆ ಮಾಡುವುದು ಎಷ್ಟು ಅಪರಾಧವೋ, ಕೊಲೆ ಮಾಡಿದವರಿಗೆ ಸಹಾಯ ನೀಡುವುದು ಅಷ್ಟೇ ಅಪರಾಧ.

ಮಾನ್ಸಿನಿಯವರು ಕೊಲೆ ಮಾಡಿದ ಆರೋಪಿಗಳನ್ನು ವಾಪಸ್ ಕರೆಸುವ ಲಿಖಿತ ಪ್ರಮಾಣ ಪತ್ರದ ಭರವಸೆಯನ್ನು ಈ ರಾಷ್ಟ್ರದ ಉನ್ನತ ನ್ಯಾಯಾಲಯಕ್ಕೆ ನೀಡಿ, ಅದರಂತೆ ನಡೆಯದಿರುವುದು ಸ್ಪಷ್ಟ ಅಪರಾಧ. ಈ ಹಿನ್ನೆಲೆಯಲ್ಲಿ ಆತ ಶಿಕ್ಷೆಗೆ ಅರ್ಹ. ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಇಟಲಿಯ  ರಾಯಭಾರಿಗೆ ವಿಶ್ವ ಒಪ್ಪಂದಗಳಂತೆ ಗೌರವ ನೀಡಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ವಿಶ್ವ ನಿಯಮಗಳನ್ನು ಮೊದಲು ಮೀರಿದ್ದು ಮಾನ್ಸಿನಿ ಮತ್ತು  ಇಟಲಿಯೇ ಎಂಬುದು ಇಡೀ ವಿಶ್ವ ಸಮುದಾಯಕ್ಕೆ ಗೊತ್ತಿರುವ ಸತ್ಯ. ಈ ದಿಸೆಯಲ್ಲಿ ಯಾವುದೇ ಚರ್ಚೆ ಒಪ್ಪಂದ ನಡೆದರು, ಅದು ಭಾರತದ ನಡೆಯ ಪರವಾಗಿಯೇ ಸಂರಚಿತವಾಗುತ್ತದೆ.

ರಾಷ್ಟ್ರದ ಪರಮಾಧಿಕಾರದ ತುಣಿಕಿಗೆ, ರಾಯಭಾರಿ ಸೇರಿದಂತೆ ಯಾವುದೇ ವ್ಯಕ್ತಿಯಿಂದ ಧಕ್ಕೆಯಾದರೆ  ಆತ ಭಾರತದ ನ್ಯಾಯಿಕ ಕ್ಷೇತ್ರದಡಿಯಲ್ಲಿ ಶಿಕ್ಷೆಗೆ ಅರ್ಹ. ಭಾರತದ  ಏಕತೆಯನ್ನು ಕೆಣಕುವವರಿಗೆ ಈ ಪ್ರಕರಣದ ಮೂಲಕ ಸೂಕ್ತ ಉತ್ತರವನ್ನೆ ನೀಡಬೇಕಾದ ಅನಿವಾರ್ಯತೆ ಇದೆ. ಅಂತರರಾಷ್ಟ್ರೀಯ ನೀತಿ ನಿಯಮಗಳನ್ನು ಉಲ್ಲಂಘಿಸಿದ ಇಟಲಿಯನ್ನು ವಿಶ್ವಸಂಸ್ಥೆ ತನ್ನ 194 ಸದಸ್ಯ ರಾಷ್ಟ್ರಗಳ ಗುಂಪಿನಿಂದ ಕೈಬಿಡಬೇಕಿದೆ.

ವಿಶ್ವದ ಶಾಂತಿ ಕದಡುವ ಯಾವುದೇ ರಾಷ್ಟ್ರವನ್ನು ವಿಶ್ವಸಂಸ್ಥೆ ಮಾನ್ಯ ಮಾಡದಿರುವುದು ಒಳಿತು. ವಿಶ್ವ ಶಾಂತಿ ಕಾಪಾಡಲೆಂದೇ ಭಾರತ ವಿಶ್ವಸಂಸ್ಥೆಗೆ ಕೋಟ್ಯಂತರ ರೂಪಾಯಿಗಳನ್ನು ದೇಣಿಗೆ ರೂಪದಲ್ಲಿ ನೀಡುತ್ತಿರುವುದರಿಂದ ಭಾರತದ ಹಿತ ಕಾಪಾಡುವುದು ಆದ್ಯ ಕರ್ತವ್ಯ. ಯೂರೋಪ್ ಖಂಡದ ಅನೇಕ ರಾಷ್ಟ್ರಗಳಲ್ಲಿ ನ್ಯಾಯಾಂಗ ಎರಡನೇ ಸ್ಥಾನದಲ್ಲಿರುತ್ತದೆ. ಉದಾಹರಣೆಗೆ  ಬ್ರಿಟನ್. ಆದರೆ ಭಾರತದಲ್ಲಿ ನ್ಯಾಯಾಂಗ ಮೊದಲನೇ ಸ್ಥಾನದಲ್ಲಿದೆ.

ರಾಷ್ಟ್ರದ ಸಂವಿಧಾನ ಮತ್ತು ಪರಮಾಧಿಕಾರವನ್ನು ರಕ್ಷಿಸುವ ಹಾಗೂ ಮರುವ್ಯಾಖ್ಯಾನಿಸುವ ಅಧಿಕಾರವಿರುವುದು ಸುಪ್ರೀಂ ಕೋರ್ಟ್‌ಗೆ ಮಾತ್ರ. ವಾಗ್ದಾನದಂತೆ ಆರೋಪಿಗಳನ್ನು ಭಾರತಕ್ಕೆ ಕರೆತರದೆ, ಮಾನ್ಸಿನಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಆದ್ದರಿಂದ ಅವರಿಗೆ ಸಿಗುವ ವಿಶೇಷ ವಿನಾಯಿತಿಗಳು ತಾನಾಗಿಯೇ ರದ್ದಾಗುತ್ತವೆ.

ಈ ಹಿನ್ನೆಲೆಯಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಮಾನ್ಸಿನಿ  ಹಾಗೂ ಇಟಲಿ ತಲೆಬಾಗಲೇ ಬೇಕಿದೆ.  ಭಾರತ ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡರೆ ವಿಶ್ವ ಅಧಿಪತ್ಯದಲ್ಲಿ ಭಾರತದ ಪರಮಾಧಿಕಾರದ ಆಯಾಮಗಳು ಶಿಥಿಲಗೊಳ್ಳುವುದರಲ್ಲಿ ಸಂದೇಹವಿಲ್ಲ. ಭಾರತದ ಮಾನವೀಯತೆ ದುರುಪಯೋಗಪಡಿಸಿಕೊಂಡ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸುವುದು ಅನಿವಾರ್ಯ ನಡಾವಳಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT