ನಾಲ್ಕು ಗೋಡೆಗಳ ನಡುವೆ ವಿದ್ಯೆ ಕಲಿಸುವ ಸ್ಥಳಕ್ಕೆ ಶಾಲೆ ಎನ್ನಬಹುದಲ್ಲವೇ? ಯಾಕೆಂದರೆ, ಇಂದಿನ ಮಕ್ಕಳು ಈ ನಾಲ್ಕು ಗೋಡೆಗಳಿಗೇ ಸೀಮಿತಗೊಂಡಂತೆ ತೋರುತ್ತಿದೆ. ಪಟ್ಟಣಗಳಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮೆಣಸಿನಕಾಯಿ, ಏಲಕ್ಕಿ ಎಲ್ಲಿ ಬೆಳೆಯುತ್ತದೆ? ಆಮೆ ಎಲ್ಲಿರುತ್ತದೆ ಎಂಬ ಪ್ರಶ್ನೆಗಳನ್ನು ಕೇಳಿ ನೋಡಿ. ಅವರು ಥಟ್ಟನೆ ನೀಡುವ ಉತ್ತರಗಳು ನಮ್ಮನ್ನು ಚಕಿತಗೊಳಿಸುವುದಲ್ಲದೆ ನಮ್ಮಲ್ಲೇ ಕೆಲ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.

ಮೇಲಿನ ಪ್ರಶ್ನೆಗಳಿಗೆ ನಮ್ಮ ಮುದ್ದು ಮಕ್ಕಳು ನೀಡುವ ಉತ್ತರಗಳೆಂದರೆ, ‘ಮೆಣಸಿನಕಾಯಿ, ಏಲಕ್ಕಿ ಮರದಲ್ಲಿ ಬೆಳೆಯುತ್ತವೆ. ಆಮೆ ಬೇಲಿಯ ಸಂಧಿಯಲ್ಲಿ ಇರುತ್ತದೆ’ ಎನ್ನುವುದು! ಇದು ಇಂದಿನ ಶಿಕ್ಷಣದ ಪ್ರಭಾವಳಿ ಹೇಗಿದೆ ಎಂಬುದಕ್ಕೆ ಉದಾಹರಣೆಯಷ್ಟೇ.

ನಮ್ಮ ಬದುಕಿನಲ್ಲಿ ದಿನನಿತ್ಯ ಉಪಯೋಗಿಸುವ ತರಕಾರಿ ಹಾಗೂ ಪ್ರಾಣಿ-ಪಕ್ಷಿಗಳು, ಪರಿಸರ, ಆಹಾರ ಪದಾರ್ಥಗಳ ಬಗ್ಗೆ ಕೇಳಿ ನೋಡಿ. ಅವರಿಗೆ ಅವುಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇರುವುದಿಲ್ಲ. ಇವರನ್ನು ನೋಡಿದಾಗ ಅಯ್ಯೋ ಅನ್ನಿಸದಿರದು. ಯಾಕೆಂದರೆ, ನಮ್ಮ ಶೈಕ್ಷಣಿಕ ವ್ಯವಸ್ಥೆ ಅವರನ್ನು ಹೀಗೆ ಮಾಡುತ್ತಿದೆ. ಅಡಿಪಾಯ ಗಟ್ಟಿಯಾಗಿದ್ದರೆ ಮನೆಯನ್ನು ಸುಂದರವಾಗಿ ಕಟ್ಟಲು ಸಾಧ್ಯ. ಆದರೆ, ಅದೇ ಸರಿ ಇಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಪುಸ್ತಕದ ಬದನೆಕಾಯಿ ಬಗ್ಗೆ ಮಾತ್ರ ಮಾಹಿತಿ ನೀಡಲಾಗುತ್ತಿದೆ. ಯಾವುದೇ ವಿಷಯದ ಬಗ್ಗೆ ಆಳವಾಗಿ, ಸ್ಪಷ್ಟವಾಗಿ ತಿಳಿಸಿಕೊಡುವ ಪ್ರಯತ್ನ ಆಗುತ್ತಿಲ್ಲ.

ಪೊಳ್ಳು ಪ್ರತಿಷ್ಠೆಗೆ ಗಂಟುಬಿದ್ದಿರುವ ನಾವು, ನಮ್ಮ ಆಲೋಚನೆಗಳನ್ನು ಪಠ್ಯಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವೆ. ಮೆದುಳಿಗೆ ಕೆಲಸ ನೀಡುವುದನ್ನು ಮರೆ ಯುತ್ತಾ, ನಮ್ಮೊಳಗೆ ಹಾಗೂ ಅದರಾಚೆಗೂ ಯಾಂತ್ರೀಕರಣಗೊಳ್ಳುತ್ತಿದ್ದೇವೆ. ಇದು ನಮ್ಮನ್ನು ಸ್ಥಿರವಾಗಿ ನಿಲ್ಲುವಂತೆ ಮಾಡಿದೆ ಹೊರತು, ನದಿಯಂತೆ ಸರಾಗವಾಗಿ, ಮುಕ್ತವಾಗಿ ಹರಿಯಲು ಬಿಡುತ್ತಿಲ್ಲ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮಾತ್ರ ದೂರುವುದಕ್ಕಿಂತ ಮಕ್ಕಳನ್ನು ಇಂಥ ಪರಿಸ್ಥಿತಿಗೆ ದೂಡಿದ ಪೋಷಕರನ್ನು ತಪ್ಪಿತಸ್ಥರನ್ನಾಗಿ ನಿಲ್ಲಿಸಬೇಕಾಗುತ್ತದೆ. ಕಾರಣ ಪ್ರತಿಷ್ಠೆ, ಗೌರವದ ಸೋಗಿನೊಳಗೆ ತಾವೂ ಬಂದಿಯಾಗಿ, ತಮ್ಮ ಮಕ್ಕಳ ಭವಿಷ್ಯವನ್ನೂ ಬಲಿ ಕೊಡುತ್ತಿದ್ದಾರೆ.

ಇಂದು ಬೀದಿಗೊಂದರಂತೆ ಶಾಲೆಗಳು ಜನ್ಮ ತಾಳಿವೆ. ಹೀಗೆ ಹುಟ್ಟಿಕೊಂಡಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆಯೇ ಎಂಬ ಬಗ್ಗೆ ಪೋಷಕರು ಯೋಚಿಸಬೇಕು. ಬರೀ ಅಲ್ಲಿನ ಸೌಲಭ್ಯ, ಶಿಸ್ತು, ಕಟ್ಟಡಕ್ಕೆ ಮಾರುಹೋಗಿ ದುಡ್ಡು ಸುರಿಯುತ್ತಿರುವುದು ವಿಪರ್ಯಾಸ. ಒಟ್ಟಿನಲ್ಲಿ ಅವರಿಗೆ ತಮ್ಮ ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಾರೆ ಎಂಬುದೇ ಮುಖ್ಯವಾದ ಸಂಗತಿಯಾಗಿದೆ.

ಶಿಕ್ಷಣವೆಂಬುದು ಸರಕಾಗಿ ವ್ಯಾವಹಾರಿಕ ಸ್ವರೂಪ ಪಡೆದಿದೆ. ಇಂಥ ಸಮಯದಲ್ಲಿ ಸರ್ಕಾರವು, ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಪರಿಸರಕ್ಕೆ ಪೂರಕವಾದ, ಮಕ್ಕಳಲ್ಲಿ ಪ್ರತಿ ಕ್ಷಣವೂ ಹೊಸ ಕಲಿಕೆಗೆ ರಹದಾರಿಯಾಗುವ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದರೆ ಖಾಸಗಿ ಶಾಲೆಗಳ ಶಿಕ್ಷಣವನ್ನು ಮೀರಿಸುವಂತಹ ಶಿಕ್ಷಣವನ್ನು ಬಡ ಮಕ್ಕಳಿಗೂ ನೀಡಬಹುದಿತ್ತು.

ಈ ನಿಟ್ಟಿನಲ್ಲಿ ಸರ್ಕಾರ ಕೆಲವು ಉಪಕ್ರಮಗಳನ್ನು ಜಾರಿಗೆ ತಂದಿದೆಯಾದರೂ ಅವು ಪರಿಣಾಮಕಾರಿಯಾಗಿಲ್ಲ. ಎಲ್ಲೋ ಕೆಲವೆಡೆ ಉತ್ತಮ ರೀತಿಯಲ್ಲಿ ಪಾಠ, ಪ್ರವಚನ ನಡೆಯುತ್ತಿರಬಹುದು. ಹಲವಾರು ಹಳ್ಳಿಗಳಲ್ಲಿ ಇಂದಿಗೂ ಯಾವುದೇ ಮೂಲ ಸೌಲಭ್ಯಗಳಿಲ್ಲದ ಶಾಲೆಗಳಿವೆ ಎಂಬುದನ್ನು ಮರೆಯಬಾರದು.

ಖಾಸಗೀಕರಣ ಎಲ್ಲ ಕ್ಷೇತ್ರಗಳಿಗೂ ಹರಡುತ್ತಿದೆ. ಇದರಿಂದ ಶಿಕ್ಷಣ ಕ್ಷೇತ್ರವೂ ಹೊರಗಿಲ್ಲ. ಇಂದು ಮೂಲ ಸೌಕರ್ಯಗಳೂ ಲಾಭದ ದೃಷ್ಟಿಯ ಲೆಕ್ಕಾಚಾರದೊಳಗೆ ಸೇರುತ್ತಿವೆ. ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದೇ ಇರದು. ಸಮಾನತೆ ಬಯಸುವುದಾಗಿ ಹೇಳುವ ಸರ್ಕಾರ, ತನ್ನ ಸುಪರ್ದಿಯ ಶಾಲೆಗಳ ಬಗ್ಗೆ ಮುತುವರ್ಜಿ ವಹಿಸುವುದನ್ನು ಮರೆತಿರುವುದು ವಿಪರ್ಯಾಸ.

ಮುಖ್ಯವಾಗಿ ನಾವು ಯೋಚಿಸಬೇಕಾಗಿರುವುದು ಇಂದು ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ಉಪಯುಕ್ತವಾಗಿದೆಯೇ ಎಂಬ ಕುರಿತು. ಪ್ರಸ್ತುತ ಶಿಕ್ಷಣ ಎನ್ನುವುದು ನಮ್ಮಲ್ಲಿ ಯಾವ ರೀತಿಯ ಆಲೋಚನೆಗಳನ್ನು ಹುಟ್ಟು ಹಾಕುತ್ತಿದೆ ಎಂಬುದರ ಬಗ್ಗೆ ಯೋಚಿಸಿದಾಗ ಭಯವಾಗುತ್ತದೆ. ಪಠ್ಯಪುಸ್ತಕಕ್ಕೆ ಸೀಮಿತಗೊಂಡಿರುವ ಶಿಕ್ಷಣ, ವಿದ್ಯಾರ್ಥಿಗಳಲ್ಲಿ ವಿಪರೀತ ಅನ್ನಿಸುವ ಮಟ್ಟಕ್ಕೆ ಸ್ಪರ್ಧಾ ಮನೋಭಾವ ಬೆಳೆಸುತ್ತಿದೆ. ಹಣ ಗಳಿಕೆಯೇ ಪ್ರಧಾನ ಧ್ಯೇಯವಾಗುತ್ತಿದೆ. ಅದು ದಕ್ಕದೆ ಹೋದಾಗ ಸಣ್ಣ ವಯಸ್ಸಿಗೇ ಖಿನ್ನತೆಗೆ ಒಳಗಾಗುವಂಥ ಸ್ಥಿತಿಗೆ ಅವರನ್ನು ದೂಡುತ್ತಿದ್ದೇವೆ. ಇಂಥ ನ್ಯೂನತೆಗಳ ಬಗ್ಗೆ ಚಿಂತಿಸಬೇಕಾದ ಅನಿವಾರ್ಯ ನಮ್ಮೆದುರಿದೆ.

ಮಕ್ಕಳ ಸುತ್ತ ಯಾವ ರೀತಿಯ ಪರಿಸರವಿದ್ದರೆ ಅವರ ಬೌದ್ಧಿಕ ಮಟ್ಟ ಹೆಚ್ಚಿಸಬಹುದು, ಕಲ್ಪನೆಗಳನ್ನು ಗರಿಗೆದರಿಸಬಹುದು, ಸವಾಲುಗಳನ್ನು ಎದುರಿಸಲು ಅಣಿಗೊಳಿಸಬಹುದು ಎಂಬುದರ ಬಗ್ಗೆ ಅಧ್ಯಯನಗಳು ಆಗಬೇಕು. ಅದಕ್ಕೆ ಸರ್ಕಾರವೇ ಅವಕಾಶ ಕಲ್ಪಿಸಬೇಕು. ಮುಕ್ತ ವಾತಾವರಣದೊಳಗೆ ಪರಿಸರದ ಬಗ್ಗೆ ಆಸಕ್ತಿ, ಕುತೂಹಲ, ಪ್ರೀತಿ ಬೆಳೆಸುತ್ತಾ, ಪ್ರಕೃತಿದತ್ತ ಸಂಪನ್ಮೂಲಗಳು, ಉಪಕಸುಬುಗಳು, ಕೃಷಿ, ಪ್ರಾಣಿ-ಪಕ್ಷಿ ಸಂಕುಲಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಬೇಕು. ಪಠ್ಯೇತರ ಚಟುವಟಿಕೆಗೂ ಆದ್ಯತೆ ದೊರೆಯಬೇಕು.

ಶಿಕ್ಷಣ ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗಬಾರದು. ಅದು ನಮ್ಮನ್ನು ಬದಲಾವಣೆಯತ್ತ ಕರೆದೊಯ್ಯುವಂತಿರಬೇಕು. ಪಠ್ಯಕ್ರಮದಲ್ಲಿನ ಅಕ್ಷರಗಳಿಗೆ ಅಂಟಿಕೊಂಡು ಅವುಗಳೇ ನಮ್ಮ ಬದುಕು ರೂಪಿಸುತ್ತವೆ ಎಂಬ ನಂಬಿಕೆ ನಮ್ಮ ತಲೆಯೊಳಗೆ ಬೇರುಬಿಟ್ಟಿದೆ. ಇದರಿಂದಲೇ ವಿದ್ಯಾವಂತ ಯುವಪೀಳಿಗೆ ಇಂದು ನಿರುದ್ಯೋಗಿಗಳಾಗಿ, ಯಾವುದರಲ್ಲೂ ಆಸಕ್ತಿ ಇಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತಿದೆ. ನೌಕರಿ ಗಿಟ್ಟಿಸುವುದೇ ಹೆಚ್ಚಿನವರಿಗೆ ಅಂತಿಮ ಗುರಿ ಎಂಬಂತಾಗಿದೆ. ಅದರ ಹೊರತಾದ ದಾರಿಗಳು ಕಾಣಿಸುತ್ತಲೇ ಇಲ್ಲ. ಅಂಥ ದಾರಿಗೆ ದೀವಿಗೆಯಾಗುವ ಸಮುದಾಯ ರೂಪಿತ ಶಿಕ್ಷಣ ನಮ್ಮ ಇಂದಿನ ಅಗತ್ಯ. ಅದಕ್ಕೆ ನೆರವಾಗುವ ಕೈಗಳ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.