ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡಿಗರ ಮೊದಲ ಧರ್ಮ’ ಬಿಟ್ಟ ಸಂಗತಿಗಳು

ಅಕ್ಷರ ಗಾತ್ರ

ಪ್ರೊ.ಹಂಪನಾ ಅವರ ‘ಕನ್ನಡಿಗರ ಮೊದಲ ಧರ್ಮ’ ಲೇಖನ­ವನ್ನು (ಪ್ರ.ವಾ. ಅಭಿಮತ, ಏ. 25) ಓದಿ ಇದನ್ನು ಬರೆಯ­ಬೇಕೆನಿಸಿತು. ಡಾ. ಎಂ.ಎಂ.ಕಲಬುರ್ಗಿ ಅವರ ಉಪ­ನ್ಯಾ­ಸದ ಕೆಲವು ಅಂಶಗಳ ಕುರಿತು ಹಂಪನಾ ಅವರು ಪ್ರತಿಕ್ರಿಯಿಸಿದ್ದಾರೆ. ಕಲಬುರ್ಗಿಯವರ ಹೇಳಿಕೆಯಲ್ಲಿ ಅನ್ಯ­ಮತ­ವನ್ನು ಚುಚ್ಚುವ ಯಾವುದೇ ಅಂಶಗಳು ಇರಲಿಲ್ಲ. ಅವರ ಅಭಿಪ್ರಾಯವೆಂದರೆ, ಕನ್ನಡ ನೆಲದ್ದೇ ಆಗಿ ಹುಟ್ಟಿದ ಧರ್ಮ ಎಂದರೆ ಲಿಂಗಾಯತ; ಕರ್ನಾಟಕದಲ್ಲಿರುವ ಇತರ ಎಲ್ಲ ಧರ್ಮ­-ಪಂಥಗಳು ಕರ್ನಾಟಕದ ಹೊರಗಿನಿಂದ ಬಂದವುಗಳೇ ಹೊರತು ಕನ್ನಡದ ನೆಲದಲ್ಲಿ ಹುಟ್ಟಿದವುಗಳಲ್ಲ, ಎಂದಷ್ಟೇ. ಆದರೆ, ಹಂಪನಾ ಅವರು ಕಲಬುರ್ಗಿಯವರ ಹೇಳಿಕೆಯನ್ನು ವ್ಯತ್ಯ­ಸ್ತ­ವಾಗಿ ತೆಗೆದುಕೊಂಡು, ಜೈನ, ಬೌದ್ಧ ಧರ್ಮಗಳು ಕನ್ನಡ ನೆಲದಲ್ಲಿ ಪೂರ್ವದಿಂದಲೂ ಇದ್ದ ಧರ್ಮಗಳು ಎಂಬಂತೆ ಹೇಳಿದ್ದಾರೆ. ಹಂಪನಾ ಅವರು ಹೇಳುವಂತೆ ಜೈನ­ಧರ್ಮ ‘ಈ ನೆಲದಲ್ಲಿ ಇದ್ದು ಹಬ್ಬಿದ್ದ ಧರ್ಮ’ ಎಂಬುದು ನಿಜ. ಆದರೆ ಅದು ಇಲ್ಲಿ ಹುಟ್ಟಿದ್ದಲ್ಲ ಮತ್ತು ಆ ಕಾರಣದಿಂದ ಅದು ‘ದೇಸಿ’ ಧರ್ಮ ಆಗುವುದಿಲ್ಲ.

ಹಂಪನಾ ಅವರು ಅಷ್ಟಕ್ಕೇ ನಿಲ್ಲದೆ, ಶೈವ ವೀರಶೈವಗಳು ಜೈನ ಬೌದ್ಧಧರ್ಮಗಳನ್ನು ಹಿಂಸೆಯಿಂದ ಹತ್ತಿಕ್ಕಿದುವೆಂದು ಅನೇಕ ಉದಾ­ಹರ­ಣೆಗಳನ್ನು ಕೊಟ್ಟು ಸಮರ್ಥಿಸಲು ಪ್ರಯತ್ನಿ­ಸಿ­ದ್ದಾರೆ. ಅವರು ಕೊಟ್ಟಿರುವ ಉದಾಹರಣೆಗಳು ವಿವಿಧ ಶೈವ­ಗಳಿಗೆ ಸಂಬಂಧಿಸಿದವೇ ಹೊರತು ಲಿಂಗಾಯತಕ್ಕೆ ಸಂಬಂಧಿ­ಸಿದ­ವು­ಗಳೇ ಅಲ್ಲ. ಉದಾಹರಣೆಗೆ, ಜೈನರನ್ನು ಹಿಂಸಿಸಿದನೆಂದು ಅವರು ಹೇಳುವ ಏಕಾಂತದ ರಾಮಯ್ಯನು ಶೈವನೇ ಹೊರತು ಲಿಂಗಾ­ಯ­ತನಲ್ಲ. ಇದು ಅವನನ್ನು ಕುರಿತ ಶಾಸನದಲ್ಲಿ ಸ್ಪಷ್ಟ­ವಾಗಿದೆ. ಹೀಗಾಗಿ, ಕೆಲವರು ಕವಿಗಳು ಅವನನ್ನು ವೀರಶೈವ­ನೆಂದು ತಿಳಿದು ಬರೆದಿರುವುದು ಅಸಂಗತ ಸಂಗತಿ. ಇಲ್ಲಿ ಇನ್ನೊಂದು ವಿಚಾರವನ್ನೂ ಹೇಳಲೇಬೇಕು: ತನ್ನ ಪಾಡಿಗೆ ತಾನು ಏಕಾಂಗಿಯಾಗಿ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಲಿಂಗ ಪೂಜೆ -ಧ್ಯಾನದಲ್ಲಿ ಮಗ್ನನಾಗುತ್ತಿದ್ದ ಏಕಾಂತದ ರಾಮಯ್ಯ­ನನ್ನು ಸಂಕಗೌಡ ಮುಂತಾದ ಜೈನರು ಗುಂಪಾಗಿ ಬಂದು, ಅವನನ್ನು ಅವನ  ಪಾಡಿಗೆ ಬಿಡದೆ, ಮೂದಲಿಸಿದ್ದು, ಕೆಣ­ಕಿದ್ದು, ಕಾಡಿದ್ದು, ಸವಾಲು ಹಾಕಿದ್ದು ಮುಂದಿನ ಎಲ್ಲ ಅನಾ­ಹು­ತ­ಗಳಿಗೆ ಕಾರಣವಾಯಿತು. ಅವರು ಹಾಗೆ ಮಾಡದೆ ಇದ್ದಿ­ದ್ದರೆ ಆ ಯಾವ ಅನಾಹುತಗಳೂ ಜರುಗುತ್ತಿರಲಿಲ್ಲ ಎಂಬು­ದನ್ನು ಹೇಳಬೇಕಾಗಿಲ್ಲ.

ಅನ್ಯಾಯ ನಡೆದಿರುವುದು ಜೈನರ ಮೇಲಷ್ಟೇ ಅಲ್ಲ, ಅವರ ಜೊತೆಗೆ ಬೌದ್ಧರಿಗೂ ಅನ್ಯಾಯವಾಗಿದೆ ಎಂದು ಹಂಪನಾ ಅವರು ಹೀಗೆ ಬರೆಯು­ತ್ತಾರೆ: ‘ಬೌದ್ಧಧರ್ಮವನ್ನು ನಾಶಪಡಿಸಿ­ದ­ವರು, ಬೌದ್ಧ ವಿಹಾರಗಳನ್ನು ಕೆಡವಿದ­ವರು, ಬೌದ್ಧ ಭಿಕ್ಕುಗಳನ್ನು ಹಿಂಸಿಸಿದವರು ವಿರುಪರಸನ ನೇತೃತ್ವದ ಉಗ್ರಶಿವ­ಭಕ್ತರು’. ಆದರೆ, ಆ ಉಗ್ರಶಿವಭಕ್ತರು ಲಿಂಗಾಯತರಲ್ಲ, ಶೈವರು ಮಾತ್ರ ಎಂಬು­ದನ್ನು ಮರೆಯಬಾರದು. ಅವರು ಹಾಗೇ ಮುಂದೆ, ‘ಧಾರ್ಮಿಕ ದಬ್ಬಾಳಿಕೆ ನಡೆಸಿದ­ವರು ಬೌದ್ಧರಲ್ಲ, ಜೈನರಲ್ಲ. ನರಮೇಧ ನಿ­ರ­ತರು ಯಾರೆಂಬುದನ್ನು ಶಾಸನಗಳೂ ವೀರಶೈವ ಪುರಾಣ­ಗಳೂ ದಾಖಲಿಸಿವೆ’ ಎಂದಿದ್ದಾರೆ. ಅವರು ಹೀಗೆ ಹೇಳುವಾಗ ಶ್ರವಣಬೆಳಗೊಳದ ಶಾಸನಗಳು ನೆನಪಿಗೆ ಬರುತ್ತವೆ. ಬೌದ್ಧ­ರಷ್ಟೇ ಅಲ್ಲ, ಇಂದು ನಾಮಾವಶೇಷ ಮಾತ್ರವಾಗಿರುವ ನೈಯಾ­ಯಿ­ಕರು, ವೈಶೇಷಿಕರು, ಚಾರ್ವಾಕರು, ಮೀಮಾಂಸ­ಕರು, ಸಾಂಖ್ಯರು, ಭೌತಿಕರು, ವಾದಿಗಳು ಇವರನ್ನೆಲ್ಲ ಜೈನರು ಹತ್ತಿಕ್ಕಿದರೆಂಬುದನ್ನು ಜೈನಧರ್ಮದ ಕೇಂದ್ರವಾದ ಶ್ರವಣ­ಬೆಳ­ಗೊಳದ ಅನೇಕ ಶಾಸನಗಳು ಸಾರುತ್ತವೆ (ಎ.ಕ. ಹೊಸ ಸಂಪುಟ ೨, ಚಿಕ್ಕಬೆಟ್ಟದ ಶಾಸನಗಳು ಸಂಖ್ಯೆ ೭೦, ೭೧, ೭೩, ೭೭, ೭೯, ೮೧, ೧೭೩, ೩೬೦). ಅಲ್ಲಿಯ ಶಾಸನವೊಂದು, ಜೈನ ಮುನಿಯೊಬ್ಬನನ್ನು ‘ಬೌದ್ಧಮದವೇದಂಡರುಂ’ ಎಂದು ವರ್ಣಿಸುತ್ತದೆ; ಇನ್ನೊಂದು ಶಾಸನ ‘ಯೋ ಬೌದ್ಧಕ್ಷಿತಿ­ಭೃತ್ಕ­ರಾಳ ಕುಳಿಶಃ’ ಎಂದು ಉಗ್ಗಡಿಸುತ್ತದೆ. ಅಷ್ಟೇ ಅಲ್ಲ, ಮತ್ತೊಂದು ಶಾಸನ ಇನ್ನೊಬ್ಬ ಜೈನ ಮುನಿಯನ್ನು ‘ಚಾರ್ವಾಕ­ಮೇಘಾನಳೋ ಮೀಮಾಂಸಾಮತವರ್ತ್ತಿವಾದಿ ಮದವನ್ಮಾತಂಗಕಣ್ಠೀರವಃ’ ಎಂದು ಕೊಂಡಾಡುತ್ತದೆ. ಹಾಗೇ ಇನ್ನೊಂದು, ‘ನೈಯಾಯಿಕೇಭಸಿಂಹೇ ಮೀಮಾಂಸಕ ತಿಮಿರ­ನಿ­ಕರ ನಿರಸನತಪನಃ ಬೌದ್ಧವನ ದಾವದಹನೋ’ ಎಂದು ಹೊಗಳು­ತ್ತದೆ. ವಾಚಕರಿಗೆ ಇವುಗಳ ಅರ್ಥವನ್ನು ಬಿಡಿಸಿ­ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಇಂಥ ಹಲವಾರು ಶಾಸನ­ಗಳು, ೧೧–-೧೨ನೆಯ ಶತಮಾನದ ಜೈನಸಮಾಜ ಮೇಲೆ ಹೇಳಿದ ರೀತಿ, ಬೌದ್ಧವೂ ಸೇರಿದಂತೆ ಅನ್ಯಮತಪಂಥದ ಅನೇಕ­ರನ್ನು ಹತ್ತಿಕ್ಕುವಲ್ಲಿ ಗಣನೀಯ ಪಾತ್ರ ವಹಿಸಿತ್ತು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತವೆ.

ಹಾಗೆಯೇ ಬ್ರಹ್ಮಶಿವ, ವೃತ್ತವಿಲಾಸ, ನಯಸೇನ ಮುಂತಾದ ಜೈನ ಕವಿಗಳ ಕೃತಿಗಳು ಕೂಡಾ ಸ್ವಮತಪ್ರಶಂಸೆ ಪರಮತ ವಿಡಂಬನೆಯೇ ಪ್ರಧಾನ­ವಾಗಿ­ರುವ ಕೃತಿಗಳೆಂಬುದು ಈಗಾ­ಗಲೇ ಸುವ್ಯಕ್ತವಾಗಿರುವ ಸಂಗತಿ. ಬ್ರಹ್ಮ­ಶಿವ ತನ್ನ ‘ಸಮಯ ಪರೀಕ್ಷ’ ಕೃತಿ­ಯಲ್ಲಿ ಹೀಯಾಳಿಸುವ ಲಿಂಗಿಗಳ್ ‘ಮಾಹೇಶ್ವರರ್’ ‘ಶಿವಭಕ್ತರ್’ ಈ ಪದಗಳು ಶಿವಶರಣರನ್ನು ಕುರಿತಂತೆ ಕಾಣುವುವಾದರೂ, ಅವು ಲಿಂಗ­ಪೂಜ­ಕ­­ರಾಗಿದ್ದ ಲಾಕುಳ ಮತ್ತು ಕಾಳಾ­ಮುಖ ಶೈವರನ್ನು ಕುರಿತವು ಎಂದು ವಿದ್ವಾಂಸರು ಈಗಾಗಲೇ ವಿಮರ್ಶಿಸಿ ಹೇಳಿದ್ದಾರೆ. ನಯಸೇನ ಕವಿ ತನ್ನ ‘ಧರ್ಮಾ­ಮೃತಂ’ ಕೃತಿಯಲ್ಲಿ, ಬ್ರಾಹ್ಮಣರ ಬಗ್ಗೆ ತೀರಾ ಕಟುವಾಗಿ­ಯೇನೂ ಬರೆಯುವುದಿಲ್ಲ. ಆದರೆ, ಅದೇ ಬೌದ್ಧರ ಬಗ್ಗೆ ತೀವ್ರ ಆಕ್ರೋಶದಿಂದ ಬರೆಯುತ್ತಾನೆ. ಬ್ರಾಹ್ಮಣರು ಜೈನರಾಗಿ ಮತಾಂತರಗೊಳ್ಳುವುದು ಅವನಿಗೆ ಪ್ರಿಯವೆನಿಸುವ ಸಂಗತಿ­ಯಾದರೆ, ಅದೇ ಬೌದ್ಧರು ಜೈನರಾಗುವುದು ಅವನಿಗೆ ಸಹನೆಯ ಸಂಗತಿಯಲ್ಲ. ಬೌದ್ಧಭಿಕ್ಷುವನ್ನು ‘ಭಿಕ್ಷು’ ಎಂದು ಹೆಸರಿಸದೆ ‘ಭಿಕ್ಷುಕ’ ಎಂದು ಹೆಸರಿಸಲೂ ಹಿಂದೆಗೆದಿಲ್ಲ.

ಧಾರ್ಮಿಕ ಸಾಮರಸ್ಯದ ಶಾಸನ ಎಂದೇ ಬಿಂಬಿತವಾಗಿರುವ ಶ್ರವಣಬೆಳಗೊಳದ ೧೩೬೮ರ ಬುಕ್ಕರಾಯನ ಶಾಸನದ ಬಗ್ಗೆ ಎರಡು ಮಾತು: ರಾಮಾನುಜ ಸಂಪ್ರದಾಯದ ಶ್ರೀವೈಷ್ಣವ­ರಿಗೂ ಜೈನರಿಗೂ ತಿಕ್ಕಾಟ ತೀವ್ರಸ್ಥಿತಿಗೆ ಹೋದಾಗ, ವಿಜಯ
ನ­ಗ­ರದ ದೊರೆ ಬುಕ್ಕರಾಯ ಅವರಿಬ್ಬರಿಗೂ ಸೌಹಾರ್ದ­ದಿಂದಿರಲು ವ್ಯವಸ್ಥೆ ಮಾಡಿದ್ದನ್ನು ಅದು ಹೇಳುತ್ತದೆ. ಅದ­ರಂತೆ, ಇಡೀ ರಾಜ್ಯದ ಜೈನರು ಪ್ರತಿವರ್ಷ ಪ್ರತಿ ಮನೆಗೆ  ಒಂದು ಕಾಸು ನೀಡಬೇಕು; ಅದರಿಂದ ರಾಜ್ಯದೊಳಗಿನ ಜೈನ ಬಸದಿಗಳ ರಕ್ಷಣೆಗೆ ಶ್ರೀವೈಷ್ಣವರು ನೇಮಿಸಿಕೊಂಡ ೨೦ ಆಳಿನ ವೆಚ್ಚ, ಉಳಿದ ಹಣದಲ್ಲಿ ಬಸದಿಗಳ ಜೀರ್ಣೋದ್ಧಾರ, ಇವನ್ನು ನಿರ್ವಹಿ­ಸಬೇಕು- ಎಂದು ತೀರ್ಮಾನಿಸಿದ್ದು ನೋಡಿ­ದರೆ, ದೊರೆ ಮಾಡಿದ ಸೌಹಾರ್ದದ ವ್ಯವಸ್ಥೆಯಲ್ಲಿ ಜೈನರಿಗೆ ಸಮಾನ­ನ್ಯಾಯ ದೊರೆತಿಲ್ಲದಿರುವುದು ತಿಳಿಯು­ತ್ತದೆ. ಇದನ್ನು ಈಗಾ­ಗಲೇ ಕೆಲವರು ಸಂಶೋಧಕರು ತೋರಿಸಿಕೊಟ್ಟಿದ್ದಾರೆ.

ಮೇಲೆ ಹೇಳಿದ ಶಾಸನವನ್ನು ಶ್ರವಣಬೆಳಗೊಳದಲ್ಲಿ ಹಾಕಿಸುವ ಸುಮಾರು ಒಂದು ತಿಂಗಳ ಮುಂಚೆ ಕಲ್ಲೆಹ (ಈಗಿನ ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು ಕಲ್ಯ ಗ್ರಾಮ) ದಲ್ಲಿ  ಇದೇ ರೀತಿಯ ಶಾಸನವನ್ನು ಹಾಕಿಸಲಾಗಿದೆ. ಶ್ರವಣಬೆಳಗೊಳದ ಶಾಸನದಲ್ಲಿ ಕಾಣಿಸದ ಒಂದು ಕಹಿ ವಿಷಯ ಅಲ್ಲಿದೆ. ಶ್ರೀವೈಷ್ಣವರಿಂದ ಜೈನರ ಕೊಲೆ ಕೂಡಾ ಆಗಿತ್ತು, ಆ ಬಗ್ಗೆ ದೊರೆಯಲ್ಲಿ ಅರಿಕೆ ಮಾಡಲಾಗಿತ್ತು ಎಂಬ ಹೆಚ್ಚಿನ ಸಂಗತಿ ಅಲ್ಲಿದೆ. ಆದರೆ ಬಹುಮುಖ್ಯವಾದ ಈ ಅಂಶ ಶ್ರವಣ­ಬೆಳಗೊಳದ ಶಾಸನ ಹಾಕಿಸುವಾಗ ಸೆನ್ಸಾರ್ ಆಗಿದೆ. ಕಲ್ಯದ ಶಾಸನದಿಂದ ಜೈನರಿಗೆ ಒಂದು ಕಾಲಕ್ಕೆ ದಕ್ಷಿಣ ಕರ್ನಾಟಕ­ದಲ್ಲಿ ಶ್ರೀವೈಷ್ಣವರಿಂದ ಎಂಥ ದಬ್ಬಾಳಿಕೆ ನಡೆದಿತ್ತು ಮತ್ತು ಜೀವ ಬೆದರಿಕೆಯ ಭಯದ ವಾತಾವರಣ ಸೃಷ್ಟಿ­ಯಾ­ಗಿತ್ತು ಎಂದು ವ್ಯಕ್ತವಾಗುತ್ತದೆ. ಇದರಿಂದ ಜೈನರ ಮೇಲೆ ಹಿಂಸೆ­ ನಡೆದದ್ದು ಕೇವಲ ಶೈವರಿಂದ ಅಲ್ಲ ಎಂದು ಶ್ರುತ­ಪಡುತ್ತದೆ.

ಇಂಥ ಇನ್ನೂ ಹಲವು ಉದಾಹರಣೆಗಳನ್ನು ಕೊಡ­ಬಹುದು. ಆದರೆ ಈ ಪ್ರತಿಕ್ರಿಯೆಯ ಉದ್ದೇಶ ಅದಲ್ಲ. ಯಾವ ವಿಷಯ ಎತ್ತಿಕೊಂಡು ಲೇಖಕರು ಲಿಂಗಾಯತರವೆಂದು ಶೈವರ ಉದಾಹರಣೆಗಳನ್ನು ಕೊಡುತ್ತಹೋಗಿದ್ದಾರೋ, ಅಂಥ­ದ್ದನ್ನೇ ಎಸಗಿರುವ ಜೈನರ ಉದಾಹರಣೆಗಳೂ ಇವೆ ಎಂದು ತೋರಿಸುವುದೂ ಅಲ್ಲ. ಹಿಂದಿನ ಕಾಲದಲ್ಲಿ ಬಹುತೇಕ ಮತಪಂಥಗಳು ತಮ್ಮ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ, ಅದೇ ಧರ್ಮದವರ ಪ್ರಭುತ್ವ ಇದ್ದಾಗ ಪ್ರಭಾವವನ್ನು ಹೊಂದಿದ್ದು, ಕೆಲವೊಮ್ಮೆ ವ್ಯತಿರಿಕ್ತ ಮಾರ್ಗಗಳಲ್ಲಿ ನಡೆದಿರ­ಬಹುದು. ಅದು ಅವುಗಳಿಗೆ ಒಂದು ಚಾರಿತ್ರಿಕ ಅನಿವಾರ್ಯ­ವಾಗಿ­ರಲೂಬಹುದು. ಹೀಗೆ ಹಿಂದೆ ಏನೇನೋ ಆಗಿರ­ಬಹುದು. ಈಗ ಅದನ್ನೆಲ್ಲ ಎತ್ತಿಹೇಳುವುದರಿಂದ ಯಾವ ಸತ್ಪರಿಣಾಮವನ್ನು ನಿರೀಕ್ಷಿಸಲೂ ಸಾಧ್ಯವಾಗುವುದಿಲ್ಲ.

೧೨ನೆಯ ಶತಮಾನದಲ್ಲಿ ಬಸವಣ್ಣ ಕೈಗೊಂಡ ಒಂದು ಅಪೂರ್ವ ವಿವಾಹ, ಅಂದಿನ ಯಾವ ಸಮಾಜಕ್ಕೆ ಅಪಥ್ಯ­ವೆನಿ­ಸಿತು? ಆಗ ನಡೆದ ಶರಣ ಹರಳಯ್ಯ ಮತ್ತು ಶರಣ ಮಧುವ­ಯ್ಯರ ಎಳಹೂಟೆಯ ಮರಣದಂಡನೆ, ದೊರೆ ಬಿಜ್ಜಳನ ಕೊಲೆ, ನೂರಾರು ಸಾವಿರಾರು ಅಮಾಯಕ ಶರಣರ ಕಗ್ಗೊಲೆ, ಸಾವಿರಾರು ಶರಣರ ದೇಶಾಂತರಗತಿ, ಇವೆಲ್ಲ ಏಕಾ­ದುವು? ಇದಕ್ಕೆಲ್ಲ ಕಾರಣರು ಯಾರು? ಇದನ್ನೆಲ್ಲ ಬಗೆದು ನೋಡಿ­ದರೆ, ಇತಿಹಾಸದ ಒಳಸುಳಿ ಏನೆಂಬುದು ಮನಸ್ಸಿಗೆ ಬರು­ತ್ತದೆ. ನಿರುಪದ್ರವಿಗಳಾಗಿದ್ದು ಆದರ್ಶ ಸಮಾಜ­ವೊಂದರ ಕನಸು ಕಂಡಿದ್ದ, ಶರಣರ ಚಳವಳಿ ಹೇಗೆ ಹತ್ತಿಕ್ಕಲಾಯಿತು ಎಂಬುದು ಅರಿವಿಗೆ ಬಾರದಿರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT