ನವದೆಹಲಿ, ಆ. 18– ಕಳ್ಳಸಾಗಾಣಿಕೆ ತಪ್ಪಿಸಿ ಭಾರಿ ಕಳ್ಳಸಾಗಾಣಿಕೆಕೋರರನ್ನು ದಂಡಿಸುವುದಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆಯೆಂದು ಹಣಕಾಸು ಶಾಖೆ ರಾಜ್ಯ ಸಚಿವ ಕೆ.ಆರ್. ಗಣೇಶ್ ಅವರು ಇಂದು ಇಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯೊಂದರಲ್ಲಿ ಮಾತ ನಾಡಿದ ಗಣೇಶ್ ಅವರು, ಕಳ್ಳಸಾಗಾಣಿಕೆ ತೀವ್ರ ಪ್ರಮಾಣ ತಳೆದು ಈಗಾಗಲೇ ಕಠಿಣ ವಾಗಿರುವ ರಾಷ್ಟ್ರೀಯ ಹಣಕಾಸು ಸ್ಥಿತಿಯ ಹಿತಕ್ಕೆ ತೊಂದರೆ ಒಡ್ಡುತ್ತಿದೆಯೆಂದರು.
ಕಳ್ಳಸಾಗಾಣಿಕೆಕೋರರು ವಿಪರೀತ ಆಸ್ತಿಪಾಸ್ತಿ ಮಾಡಿಕೊಂಡು ಸಮಾಜದಲ್ಲಿ ಗಣ್ಯಸ್ಥಾನ ಸ್ಥಾಪಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಅಧೀನದಲ್ಲಿರುವ ವಲಯಗಳಲ್ಲಿ ಸ್ವತಃ ಒಂದು ಸರ್ಕಾರದಂತೆಯೇ ಇದ್ದಾರೆ. ಅವರ ಬಗೆಗೆ ಪರಿಣಾಮಕಾರಕವಾಗಿ ವರ್ತಿಸುವುದು ಸುಲಭದ ಕೆಲಸವೇನಲ್ಲ ಎಂದರು.
ವರ್ಷಕ್ಕೆ ಐದು ಲಕ್ಷ ಗಡಿಯಾರ ತಯಾರಿಕೆ: ಎಚ್‌ಎಂಟಿಗೆ ಆದೇಶ
ಬೆಂಗಳೂರು, ಆ. 18– ಇನ್ನು ಐದು ವರ್ಷಗಳ ಕಾಲಾವಧಿಯಲ್ಲಿ ಎಚ್.ಎಂ.ಟಿ. ಕೈಗಡಿಯಾರ ಕಾರ್ಖಾನೆಗಳು ವರ್ಷಕ್ಕೆ ಐದು ಲಕ್ಷ ಕೈಗಡಿಯಾರಗಳನ್ನು ಉತ್ಪಾದಿಸಲಿವೆ.
ಇಂದು ಬೆಳಿಗ್ಗೆ ಹೆಗಡೆ ಮತ್ತು ಗೋಲೆ ಕಂಪನಿ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವ ಟಿ.ಎ.ಪೈ ಅವರು, ವರ್ಷಕ್ಕೆ ಐದು ಲಕ್ಷ ಕೈಗಡಿಯಾರಗಳನ್ನು ಉತ್ಪಾದಿಸುವ ಯೋಜನೆಯನ್ನು ಕೈಗೊಳ್ಳಲು ಎಚ್ಎಂಟಿ ಆಡಳಿತ ವರ್ಗಕ್ಕೆ ಕೇಂದ್ರ ಸರ್ಕಾರ ಆದೇಶ ನೀಡಿದೆ ಎಂದು ತಿಳಿಸಿದರು.
ಈ ಯೋಜನೆಯ ಜೊತೆಗೆ ರಾಷ್ಟ್ರದಲ್ಲಿರುವ ಕೈಗಡಿಯಾರ ಉತ್ಪಾದನಾ ಕಾರ್ಖಾನೆಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ಎಚ್‌ಎಂಟಿ ಉತ್ಪಾದಿಸಲಿದೆ ಎಂದರು.