ಭಾನುವಾರ 24.6.1973
ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಲಾಠಿ, ಅಶ್ರುವಾಯು ಪ್ರಯೋಗ
ಬೆಂಗಳೂರು, ಜೂನ್ 23– ಬೆಲೆ ಏರಿಕೆಯನ್ನು ಪ್ರತಿಭಟಿಸಲು ಸಂಜೆ ವಿಧಾನ ಸೌಧದ ಬಳಿ ಸೇರಿದ್ದ ಭಾರಿ ಕಾರ್ಮಿಕ ಸಮೂಹದ ಒಂದು ಕಡೆ ಕಲ್ಲು ಬಿದ್ದ ನಂತರ ಪೊಲೀಸರು ಲಾಠಿ ಪ್ರಯೋಗ ಮಾಡಿ ಚದುರಿಸಿದರು.
ಲಾಠಿ ಪ್ರಯೋಗ ಆರಂಭವಾದ ನಂತರ ಅದಕ್ಕೆ ಉತ್ತರವಾಗಿ ಉದ್ರಿಕ್ತ ಕಾರ್ಮಿಕರು ಕಲ್ಲುಗಳನ್ನು ತೂರಲು ಆರಂಭಿಸಿದ ಪರಿಣಾಮವಾಗಿ 29 ಪೊಲೀಸರು ಹಾಗೂ ಅನೇಕ ಕಾರ್ಮಿಕರು ಗಾಯಗೊಂಡರು.
ಪೊಲೀಸರು ಒಟ್ಟು 100 ಅಶ್ರು ವಾಯು ಶೆಲ್‌ಗಳನ್ನು ಆಕಾಶದತ್ತ ಹಾರಿಸಿದರು.
ಕಬ್ಬನ್ ಪಾರ್ಕಿನಿಂದ ನಾನಾ ದಿಕ್ಕುಗಳಲ್ಲಿ ಚೆದುರಿದ ಕಾರ್ಮಿಕರು ಹೋದ ರಸ್ತೆಗಳಲ್ಲಿ ಒಟ್ಟು 10 ಬಿ.ಟಿ.ಎಸ್. ಬಸ್ಸುಗಳಿಗೆ ನಷ್ಟವಾದವು.
ಇನ್ನೂ ಮೂರು ತಿಂಗಳು ಅಭಾವ ಪರಿಹಾರ ಕಾರ್ಯ; ಫಸಲು ಬಂದರೆ ನಿಲುಗಡೆ
ಮದರಾಸು, ಜೂನ್ 23– ಮೈಸೂರು ರಾಜ್ಯದ ಅಭಾವ ಪರಿಹಾರ ಕಾಮಗಾರಿಗಳು ಕನಿಷ್ಠ ಇನ್ನು ಮೂರು ತಿಂಗಳಾದರೂ ಮುಂದುವರಿಯುವುದೆಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ಸುದ್ದಿಗಾರರಿಗೆ ತಿಳಿಸಿದರು.
ಅಭಾವ ಪರಿಹಾರಕ್ಕಾಗಿ ಇದುವರೆಗೆ ನಲವತ್ತು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಿದ ಅರಸು ಅವರು, ‘ಎಂಟು ಲಕ್ಷ ಮಂದಿ ಸ್ವಯಂ ಸೇವಕರು ಎಡೆಬಿಡದೆ ಕೆಲಸ ಮಾಡುತ್ತಿದ್ದಾರೆ. ಹೊಸ ಬೆಳೆ ಆಗುವವರೆಗೆ ಕಾಮಗಾರಿಗಳು ನಡೆಯುತ್ತಾ ಇರುತ್ತವೆ’ ಎಂದರು.
ಮೈಸೂರು ರಾಜ್ಯದ ಅಭಾವ ಪರಿಹಾರ ನಿಧಿಗೆ ಕಾಣಿಕೆ ನೀಡಬೇಕೆಂದು ಅವರು ಇಲ್ಲಿನ ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.