ನವದೆಹಲಿ, ಆ. 29– ಏಳು ಪಕ್ಷಗಳ ಸಂಯುಕ್ತ ವಿರೋಧ ಸಂಸ್ಥೆ ‘ಭಾರತೀಯ ಲೋಕದಳ’ ಇಂದು ಉದಯಿಸಿತು.
ಈಗಿನ ಕ್ಲಿಷ್ಟ ಪರಿಸ್ಥಿತಿಯಲ್ಲಿ ಆಡಳಿತ ಪಕ್ಷಕ್ಕೆ ರಾಷ್ಟ್ರೀಯ ಪ್ರತಿಪಕ್ಷವೊಂದನ್ನು ಒದಗಿಸುವುದೇ ಈ ವಿಲೀನದ ಉದ್ದೇಶವೆಂದು ವ್ಯವಸ್ಥಾಪಕರು ಹೇಳಿದ್ದಾರೆ.
ಭಾರತೀಯ ಕ್ರಾಂತಿ ದಳದ (ಬಿ.ಕೆ.ಡಿ) ಅಧ್ಯಕ್ಷ ಚರಣ್ ಸಿಂಗ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಚುನಾಯಿಸಲಾಯಿತು.
ಬಿ.ಕೆ.ಡಿ, ಸ್ವತಂತ್ರ ಪಕ್ಷ, ಉತ್ಕಲ ಕಾಂಗ್ರೆಸ್, ರಾಷ್ಟ್ರೀಯ ಲೋಕತಾಂತ್ರಿಕ ದಳ, ಸಂಯುಕ್ತ ಸಮಾಜವಾದಿ ಪಕ್ಷ, ಕಿಸಾನ್ ಮಜ್ದೂರ್ ಪಕ್ಷ ಮತ್ತು ಪಂಜಾಬ್ ಬಿ.ಬಿ.ಜೆ ಸಂಘ ಈ ಏಳು ಸಂಸ್ಥೆಗಳ ವಿಲೀನದಿಂದ
ಲೋಕದಳವನ್ನು ರಚಿಸಲಾಗಿದೆ.
ಹೈದರಾಬಾದಿನ ಎಚ್.ಎಂ.ಟಿಯಲ್ಲಿ ಬಲ್ಬು ತಯಾರಿಕೆ
ನವದೆಹಲಿ, ಆ. 29– ಎಚ್.ಎಂ.ಟಿ ಕಾರ್ಖಾನೆಯ ಹೈದರಾಬಾದ್ ಘಟಕದಲ್ಲಿ ವಿದ್ಯುತ್ ಬಲ್ಬು, ಫಿಲಮೆಂಟುಗಳನ್ನು ಉತ್ಪಾದಿಸಲು ಯೋಜಿಸಲಾಗಿದೆ. ಇದರ ಜತೆಗೆ ಗಾಜಿನ ವಸ್ತುಗಳನ್ನೂ, ಬಲ್ಬಿನ ಟೋಪಿ, ಟಂಗ್‌ಸ್ಟನ್ ತಂತಿ, ಲ್ಯಾಂಪ್ ತಯಾರಿಸುವ ಯಂತ್ರೋಪಕರಣ ಮುಂತಾದವನ್ನೂ
ಉತ್ಪಾದಿಸಲಾಗುವುದು ಎಂದು ಭಾರಿ ಉದ್ಯಮಗಳ ಸಚಿವ ಶ್ರೀ ಟಿ.ಎ.ಪೈ ಇಂದು ಲೋಕಸಭೆಗೆ ತಿಳಿಸಿದರು.
ಆರನೇ ವರ್ಷದ ವೇಳೆಗೆ 3 ಕೋಟಿ 30 ಲಕ್ಷ ಬಲ್ಬುಗಳನ್ನು ತಯಾರಿಸುವ ಉದ್ದೇಶ ಇದೆಯೆಂದೂ, ಸರ್ಕಾರ ಇನ್ನೂ ಬಂಡವಾಳದ ಬಗ್ಗೆ ನಿರ್ಧಾರ ಕೈಗೊಂಡಿಲ್ಲವೆಂದೂ ಪೈ ಹೇಳಿದರು.