ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಹಣ ಒದಗಿಸದು: ಸಚಿವ ಪೈ ವಿವರಣೆ
ಮಂಗಳೂರು, ಆ. 4– ಕೇಂದ್ರ ಸರ್ಕಾರ ಪ್ರವಾಹ ಮತ್ತು ಕ್ಷಾಮಪೀಡಿತ ಪ್ರದೇಶಗಳ ಜನರಿಗೆ ಪರಿಹಾರ ಒದಗಿಸಲು ಹಣ ನೀಡುವುದನ್ನು ನಿಲ್ಲಿಸಿದೆ ಎಂದು ಕೇಂದ್ರ ಸಚಿವ ಟಿ.ಎ. ಪೈ ಅವರು ಇಂದು ಇಲ್ಲಿ ತಿಳಿಸಿದರು.
‘ಪರಿಹಾರಕ್ಕಾಗಿ ಕೊಟ್ಟ ಹಣದ ಸರಿಯಾದ ವಿನಿಯೋಗ ಮತ್ತು ಉಸ್ತುವಾರಿ ಕಷ್ಟಕರ. ಇಂತಹ ಕಷ್ಟಸ್ಥಿತಿ ಒದಗಿದಾಗ ಸಮಾಜ ಮುಂದೆ ಬಂದು ಸಂತ್ರಸ್ತರಿಗೆ ನೆರವು ನೀಡಬೇಕು’ ಎಂದು ಅವರು ಹೇಳಿದರು.
ಬಜಪೆ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬಂದಿಳಿದ ಸಚಿವ ಪೈ ಅವರು, ಪ್ರವಾಹದಿಂದಾಗಿರುವ ಕಷ್ಟಸ್ಥಿತಿ ಮತ್ತು ಪರಿಹಾರ ಕಾರ್ಯಕ್ರಮ ಕುರಿತು ಮುಖಂಡರು ಮತ್ತು ಅಧಿಕಾರಿಗಳೊಡನೆ ಚರ್ಚಿಸಿದರು.
ರಾಜ್ಯದ ಸಂಪತ್ ಸಾಧನ ಬಳಸಿ ಕಾಳಿ ಯೋಜನೆ ಪೂರೈಕೆ
ಚಿತ್ರದುರ್ಗ, ಆ. 4– ರಾಜ್ಯ ಸರ್ಕಾರ ತನ್ನಲ್ಲಿರುವ ಎಲ್ಲ ಸಂಪತ್ ಸಾಧನಗಳಿಂದಲೇ ಕಾಳಿ ನದಿ ಜಲವಿದ್ಯುತ್ ಯೋಜನೆಯನ್ನು ನಿಲ್ಲಿಸದೆ ಮುಂದುವರಿಸಿಕೊಂಡು ಹೋಗುವುದಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಹೊಳಲ್ಕೆರೆಯಲ್ಲಿ ಹೇಳಿದರು.
ಹಿಂದಿನ ಸರ್ಕಾರಗಳಂತಲ್ಲದ ಪ್ರಸ್ತುತ ಸರ್ಕಾರ ತನ್ನ ಸಂಪತ್ತನ್ನು ಉತ್ಪಾದನಾ ಮತ್ತು ಸಂಪತ್ ಗಳಿಕೆಯ ಕಾರ್ಯಗಳಿಗಾಗಿ ಮಾತ್ರ ವೆಚ್ಚ ಮಾಡುತ್ತಿದೆಯೆಂದು ಹೇಳಿ, ಎಲ್ಲ ಕಾಮಗಾರಿಗಳಿಗೂ ಸಿಮೆಂಟ್ ಮತ್ತು ಕಬ್ಬಿಣವನ್ನೇ ಬಯಸುತ್ತಿರುವ ಇಂದಿನ ಎಂಜಿನಿಯರ್‌ಗಳ ಮನೋಭಾವನೆ ಬಗ್ಗೆ ಕಟುವಾಗಿ ಟೀಕಿಸಿದರು.