ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಹುತೇಕ ಕೇಂದ್ರದ ಅಸ್ತು ಕಲ್ಬುರ್ಗಿಯಲ್ಲಿ ಪ್ರಧಾನಿ ಇಂಗಿತ
ಕಲ್ಬುರ್ಗಿ, ಮಾರ್ಚ್ 10– ರಾಜ್ಯದ ಉತ್ತರ ಜಿಲ್ಲೆಗಳ ಬಹುತೇಕ ಭಾಗವನ್ನು ಶಾಶ್ವತವಾಗಿ ಕ್ಷಾಮ ಶಾಪದಿಂದ ವಿಮೋಚನೆಗೊಳಿಸುವ 200 ಕೋಟಿ ರೂಪಾಯಿಗಳ ವೆಚ್ಚದ ಕೃಷ್ಣಾ ಮೇಲ್ದಂಡೆ ಯೋಜನೆ ಬಹುತೇಕ ಮಟ್ಟಿಗೆ ರಾಜ್ಯಕ್ಕೆ ದೊರಕಿದಂತಾಗಿದೆ.
ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಈ ವಿಷಯವನ್ನು ಇಂದು ಕಲ್ಬುರ್ಗಿಯಲ್ಲಿ ನೇರವಾಗಿ ಪ್ರಕಟಿಸದೇ ಹೋದರೂ, ‘ಭರವಸೆ ಮುಖ್ಯ ಅಲ್ಲ ಕಾರ್ಯ ಮುಖ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಹೇಳಿದ ಮಾತಿನ ಅರ್ಥ ಇದೆ ಎಂಬುದಾಗಿ ಅಧಿಕೃತ ವಲಯಗಳು ಅಭಿಪ್ರಾಯಪಟ್ಟಿವೆ.
ತಲೆ ಮೇಲೆ ಮಲ ಹೊರುವ ಪದ್ಧತಿ ನಿಲ್ಲಿಸಲು ನಿರ್ಧಾರ
ಮೈಸೂರು, ಮಾರ್ಚ್ 10– ಈ ವರ್ಷದ ಆಗಸ್ಟ್ 15ನೇ ತಾರೀಖಿನ ನಂತರ ಪುರಸಭೆಗಳ ಕಸ ಗುಡಿಸುವ ಸಿಬ್ಬಂದಿಯವರು ಕಕ್ಕಸುಗಳನ್ನು ತೊಳೆದು ಶುದ್ಧಿ ಮಾಡಲು ತಾವು ಅವಕಾಶ ನೀಡುವುದಿಲ್ಲವೆಂದು ಪೌರಾಡಳಿತ ಮತ್ತು ಗೃಹನಿರ್ಮಾಣ ಖಾತೆ ಸಚಿವ ಶ್ರೀ ಬಿ.ಬಸವಲಿಂಗಪ್ಪ ಅವರು ಪಾಯಖಾನೆ ಅಥವಾ ಒಳಚರಂಡಿ ವ್ಯವಸ್ಥೆ ಇಲ್ಲದ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಇಂದು ಅಂತಿಮ ಎಚ್ಚರಿಕೆ ನೀಡಿದರು.
ತಿಂಗಳೊಳಗಾಗಿ ಆಂಧ್ರ ವಿಭಜನೆ: ಇಲ್ಲವೆ ತೀವ್ರ ಚಳವಳಿ
ನವದೆಹಲಿ, ಮಾರ್ಚ್ 10– ಆಂಧ್ರ ಪ್ರದೇಶ ವಿಭಜನೆಯ ಬೇಡಿಕೆಯನ್ನು ಇನ್ನೊಂದು ತಿಂಗಳೊಳಗೆ ಒಪ್ಪಿ, ಇಲ್ಲವೆ ತೀವ್ರತರ ಚಳವಳಿಯನ್ನು ಎದುರಿಸಿ ಎಂದು ಪ್ರತ್ಯೇಕತಾವಾದಿ ಆಂಧ್ರ ಕಾಂಗ್ರೆಸ್ ನಾಯಕ ಶ್ರೀ ಬಿ.ವಿ. ಸುಬ್ಬಾರೆಡ್ಡಿ ಅವರು ಇಂದು ಕೇಂದ್ರ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದರು.
ಪ್ರತ್ಯೇಕವಾಗಬೇಕೆಂಬ ಆಂಧ್ರ ವಿಭಾಗದ ಜನರ ಬೇಡಿಕೆ ವಿಷಯದಲ್ಲಿ ಕೇಂದ್ರ ನಾಯಕರು ಯಾರೂ ಒಪ್ಪಿಕೊಂಡೂ ಇಲ್ಲ, ನಿರಾಕರಿಸಿಯೂ ಇಲ್ಲ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.