ಶುಕ್ರವಾರ, ಜನವರಿ 27, 2023
18 °C

ವಾಚಕರ ವಾಣಿ: ಹೀಗೂ ಮಾಡಬಹುದು ನೇತಾರರ ಸ್ಮರಣೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶದ ಅಂಬೇಡ್ಕರ್‌ ನಗರ ಜಿಲ್ಲೆಯಲ್ಲಿ ಕಿಡಿಗೇಡಿಗಳು ಡಾ. ಅಂಬೇಡ್ಕರ್‌ ಪ್ರತಿಮೆಯನ್ನು ವಿರೂಪ ಗೊಳಿಸಿದ್ದನ್ನು ಪ್ರತಿಭಟಿಸುತ್ತಿದ್ದ ಭೀಮ್‌ ಆರ್ಮಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಓದಿ ಹಿಂದಿನಂತೆ ಮನಸ್ಸು ಖೇದಗೊಳ್ಳಲಿಲ್ಲ. ಏಕೆಂದರೆ ಪದೇ ಪದೇ ನಡೆಯುತ್ತಿರುವ ಇಂಥ ಘಟನೆಗಳನ್ನು ಕೇಳಿ ಕೇಳಿ ಮನಸ್ಸು ಕಲ್ಲಾಗಿದೆ. ಅವಿಸ್ಮರಣೀಯರ ನೆನಪಿಗಾಗಿ ಪರ್ಯಾಯ ವ್ಯವಸ್ಥೆಯ ಕುರಿತು ಸರ್ಕಾರಗಳಾಗಲೀ ಸಾರ್ವಜನಿಕರಾಗಲೀ ಏಕೆ ಯೋಚಿಸುತ್ತಿಲ್ಲ ಎಂಬುದೇ ವಿಷಾದದ ಸಂಗತಿ.

ಗಾಂಧಿ, ಅಂಬೇಡ್ಕರ್ ಅವರಂಥ ಅಪ್ರತಿಮ ದೇಶಭಕ್ತರ ಸ್ಮಾರಕಗಳು ಜಗತ್ತಿನ ಎಲ್ಲೆಡೆಯಲ್ಲಿ ವಿರೂಪಗೊಳ್ಳುತ್ತಿದ್ದು, ಇದನ್ನು ಎಸಗಿದವರು ತಮ್ಮ ಯಾವುದೋ ಸಿಟ್ಟನ್ನು ಇಂಥ ಸ್ಮಾರಕಗಳ ಮೇಲೆ ತೀರಿಸಿಕೊಳ್ಳುತ್ತಿರುವ ಅವಿವೇಕಿಗಳು. ಇಂಥವರಿಗೆ ದೇಶಭಕ್ತಿಗಿಂತ ವೈಯಕ್ತಿಕ ಕಾರಣಗಳೇ ಮುಖ್ಯವಾಗುತ್ತಿರಬಹುದು. ಇಂಥವರನ್ನು ಪತ್ತೆ ಹಚ್ಚುವು ದಾದರೂ ಹೇಗೆ? ವಿರೂಪಗೊಳಿಸಿದ ಸುದ್ದಿಯನ್ನು ಕೇಳಿದ ಯಾರಿಗಾದರೂ ಆಗುವ ನೋವು ತೀವ್ರವಾದದ್ದು. ಜನರ ನೋವಿಗೆ ಸ್ಪಂದಿಸಿ ಪರ್ಯಾಯ ವ್ಯವಸ್ಥೆಯನ್ನು ಮಾಡುವಷ್ಟು ಸ್ಪಂದನಶೀಲ ಸರ್ಕಾರಗಳಾಗಲೀ ಸಾರ್ವಜನಿಕ ಸಂಘ ಸಂಸ್ಥೆಗಳಾಗಲೀ ನಮ್ಮಲ್ಲಿ ಇವೆಯೇ? ವಿರೂಪಗೊಳಿಸುವಂಥ ಕುಕೃತ್ಯಗಳಿಗೆ ಪರಿಹಾರೋಪಾಯಗಳು ಇವೆ. ಕೋಟಿಗಟ್ಟಲೆ ಖರ್ಚು ಮಾಡಿ ಅವಿಸ್ಮರಣೀಯರ ಪ್ರತಿಮೆಯನ್ನು ನಿಲ್ಲಿಸುವುದರ ಬದಲು, ಅವರ ಹೆಸರಿನಲ್ಲಿ ಶಾಲೆ ಗಳನ್ನು ಕಟ್ಟಬಹುದು, ಗ್ರಂಥಾಲಯಗಳನ್ನು ಸ್ಥಾಪಿಸಬಹುದು, ಸಾರ್ವಜನಿಕ ತೋಟಗಳನ್ನು ನಿರ್ಮಿಸಬಹುದು ಹಾಗೂ ಆಟದ ಮೈದಾನಗಳನ್ನು ಅನಾವರಣಗೊಳಿಸಬಹುದು ಅಲ್ಲವೇ? ಇಂಥ ಕ್ರಮಗಳಿಂದ ಸಾರ್ವಜನಿಕರಿಗೆ ಆಗುವ ಪ್ರಯೋಜನಗಳು ಅಪಾರ. ಈ ದಿಸೆಯಲ್ಲಿ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಿದೆ.

-ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು