ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮೆಟ್ರೊ ಪಿಲ್ಲರ್‌ ದುರಂತ: ಆಕಸ್ಮಿಕವಲ್ಲ, ಅನಾಹುತ

Last Updated 11 ಜನವರಿ 2023, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಮೆಟ್ರೊ ಪಿಲ್ಲರ್‌ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಅನಾಮತ್ತು ಉರುಳಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿರುವುದು ಕೇವಲ ಆಕಸ್ಮಿಕ ಅಲ್ಲ, ಅನಾಹುತ. ಮೃತರ ಕುಟುಂಬಕ್ಕೆ ಸರ್ಕಾರ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಪರಿಹಾರ ಘೋಷಿಸಿರುವುದು, ನಿರ್ಮಾಣ ಕಾರ್ಯಕರ್ತರ ವಿರುದ್ಧ ತನಿಖೆಗೆ ಮುಖ್ಯಮಂತ್ರಿ ಆದೇಶಿಸಿರುವುದು ಸರಿಯಾದ ಕ್ರಮವೇನೋ ಹೌದು. ಅಪರಾಧ ಸಾಬೀತಾದವರು ಜೈಲಿಗೂ ಹೋಗಬಹುದು. ಇದರಿಂದ ಸಾರ್ವಜನಿಕರಿಗೆ ಏನು ನೆಮ್ಮದಿ? ನಾಳೆ ಇದರ ಹಿಂದಿನ ಕಂಬವೋ ಬೇರಿನ್ನಾವುದಾದರೂ ಕಡೆ ಇರುವ ನಿರ್ಮಾಣ ಹಂತದ ದೈತ್ಯ ರಚನೆಯೋ ವಾಹನನಿಬಿಡ ರಸ್ತೆಯ ಮೇಲೆ ಬೀಳುವುದಿಲ್ಲ ಎಂಬುದಕ್ಕೆ ಖಾತರಿಯೇನು?

ಅದರಲ್ಲೂ ಈಗಿನ ಪ್ರಕರಣದ ಪ್ರತ್ಯಕ್ಷದರ್ಶಿಗಳ ಮಾತಂತೂ, ಇಡೀ ಕಾಮಗಾರಿಯ ಅಡ್ಡಕಸಬಿತನವನ್ನು ಎತ್ತಿ ತೋರಿಸುವಂತಿದೆ. ಈಗಾಗಲೇ ಚಾಲನೆಯಲ್ಲಿರುವ ಮೆಟ್ರೊ ಮಾರ್ಗಗಳಲ್ಲಿ ಕಿಕ್ಕಿರಿದಿರುವ ಜೋಡಿ-ಜೋಡಿ ರೈಲುಗಳು ಏಕಕಾಲದಲ್ಲಿ ನಿಬಿಡ ರಸ್ತೆಗಳ ಮೇಲೇ ಸಮಾನಾಂತರವಾಗಿ ಹೋಗುತ್ತಿರುತ್ತವೆ. ರೈಲು, ರಸ್ತೆ, ಸೇತುವೆ ಎಂಜಿನಿಯರುಗಳಿಗೆ ಇರಬೇಕಾದಂತೆ, ನಗರ ಯೋಜಕರಿಗೂ ದೂರದೃಷ್ಟಿ ಮತ್ತು ಜನವಸತಿ ಪ್ರದೇಶದ ತಾಳಿಕೆ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇರುವುದು ಬೇಡವೇ? ಬೆಂಗಳೂರಿಗೆ ಸಂಬಂಧಪಟ್ಟಂತೆ ಅಂಥದೊಂದು ಜವಾಬ್ದಾರಿಯುತ ವ್ಯವಸ್ಥೆ ಇರುವಂತೆಯೇ ಭಾಸವಾಗುವುದಿಲ್ಲ. ಇಡೀ ರಾಜ್ಯದ ಎಲ್ಲ ಅಭಿವೃದ್ಧಿ ಕಾಮಗಾರಿಗಳೂ, ರಾಷ್ಟ್ರದ ಬಹುತೇಕ ಕಾರ್ಯಯೋಜನೆಗಳೂ ಬೆಂಗಳೂರು ನಗರದಲ್ಲೇ ಸಾಂದ್ರವಾಗಿರಬೇಕೆಂದು ಸರ್ಕಾರ ಭಾವಿಸಿರುವಂತಿದೆ.

-ಆರ್.ಕೆ.ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT