ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜಯದ ಶಿಲ್ಪಿ’ಯ ನೆನೆಯಬೇಕಾದವರು ಯಾರು?

Last Updated 19 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

1971ರ ‘ಬಾಂಗ್ಲಾ ಯುದ್ಧ’ ವಿಜಯದ 50ನೇ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ, ಆ ವಿಜಯದ ಶಿಲ್ಪಿ ಎನಿಸಿದ್ದ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೆನೆಯದಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸಿರುವ ಸುದ್ದಿಯನ್ನು ಓದಿ ಅಳಬೇಕೋ ನಗಬೇಕೋ ಗೊತ್ತಾಗುತ್ತಿಲ್ಲ. ಏಕೆಂದರೆ ತಮ್ಮ ಶತ್ರುಪಾಳಯಕ್ಕೆ ಒಂದು ಸಣ್ಣ ರಾಜಕೀಯ ಅನುಕೂಲವೂ ಆಗದಂತೆ ಎಚ್ಚರಿಕೆ ವಹಿಸಿ ತಮ್ಮ ರಾಜಕಾರಣವನ್ನು ಅತಿದಕ್ಷ ಚುನಾವಣಾ ರಾಜಕಾರಣವನ್ನಾಗಿ ಪರಿವರ್ತಿಸಿರುವ ಮೋದಿಯವರಿಂದ ಇಂತಹ ಉದಾರತೆಯನ್ನು ಇನ್ನೂ ನಿರೀಕ್ಷಿಸುತ್ತಿರುವುದು ಕಾಂಗ್ರೆಸ್ ಬಗ್ಗೆ ಸಹಾನುಭೂತಿಗಿಂತ ಹೆಚ್ಚಾಗಿ ಮರುಕವನ್ನು ಹುಟ್ಟಿಸುವಂತಿದೆ.

ಈ ಯುದ್ಧದ ಸಂಬಂಧವಾಗಿ ಇತ್ತೀಚೆಗೆ ಪ್ರಕಟವಾಗಿರುವ ನೆನಪುಗಳ ಪುಸ್ತಕಗಳಲ್ಲಿ ಈ ಯುದ್ಧದಲ್ಲಿ ಭಾರತದ ಅಪೂರ್ವ ಗೆಲುವು ಸಾಧ್ಯವಾದದ್ದಕ್ಕೆ ಸೇನಾ ಶಕ್ತಿಯ ಜೊತೆಗೆ ರಾಯಭಾರ ಚಾಕಚಕ್ಯತೆ ಮತ್ತು ರಾಜಕೀಯ ಪ್ರಬುದ್ಧತೆಗಳು ಮುಖ್ಯ ಕಾರಣಗಳಾಗಿದ್ದು, ಈ ಮೂರೂ ಕಾರಣಗಳ ಸಂಗಮ ಬಿಂದು ಪ್ರಧಾನಿ ಇಂದಿರಾ ಅವರೇ ಆಗಿದ್ದರು ಎಂದು ಅಭಿಪ್ರಾಯಪಡಲಾಗಿದೆ. ಹಾಗಾಗಿಯೇ ಅಂದಿನ ವಿರೋಧ ಪಕ್ಷದ ಮುಖಂಡರಾದ ಭಾರತೀಯ ಜನಸಂಘದ (ಇಂದಿನ ಬಿಜೆಪಿಯ ಪೂರ್ವ ಆವೃತ್ತಿ) ಅಟಲ್ ಬಿಹಾರಿ ವಾಜಪೇಯಿಯವರು ಯಾವ ರಾಜಕೀಯ ಪರಿಗಣನೆಗಳನ್ನೂ ಲೆಕ್ಕಿಸದೆ ಇಂದಿರಾ ಅವರನ್ನು ದುರ್ಗೆಯ ರೂಪವೆಂದು ಶ್ಲಾಘಿಸಿದ್ದರು. ವಸ್ತುಸ್ಥಿತಿ ಹೀಗಿರುವಾಗ, ಕಾಂಗ್ರೆಸ್ ಪಕ್ಷ ತನ್ನ ಅನುಪಮ ರಾಜಕೀಯ ಸಾಧನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದ್ದ 1971ರ ಈ ವಿಜಯದ ನೆನಪೇ ಇಲ್ಲದಂತೆ ಆ ಸಂಬಂಧದ ಒಂದು ಸಣ್ಣ ಆಚರಣೆಯನ್ನಾದರೂ ಆಯೋಜಿಸಿ ಜನರಿಗೆ ತನ್ನ ಭವ್ಯ ಚರಿತ್ರೆಯನ್ನು ಮನದಟ್ಟು ಮಾಡುವ ಪ್ರಯತ್ನವನ್ನೇ ಮಾಡದೆ ಮೋದಿಯವರನ್ನು ಟೀಕಿಸಿರುವುದರ ಬಗ್ಗೆ ಏನು ಹೇಳುವುದು? ಚರಿತ್ರೆ ಗೊತ್ತಿಲ್ಲದವರಿಗೆ ಭವಿಷ್ಯವೂ ಇರಲಾರದೆಂದು ಅದಕ್ಕೇ ಬಲ್ಲವರು ಹೇಳುವುದು.

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಪಾಕಿಸ್ತಾನದ ಒಂದು ಸಣ್ಣ ದುಸ್ಸಾಹಸವೆನಿಸಿದ್ದ ಕಾರ್ಗಿಲ್ ಯುದ್ಧದ ವಿಜಯವನ್ನು ಈಗಲೂ ಪ್ರತಿವರ್ಷ ‘ವಿಜಯ ದಿವಸ’ವೆಂದು ಆಚರಿಸುವ ಬಿಜೆಪಿಯ ರಾಜಕೀಯ ಮಾದರಿಯನ್ನಾದರೂ ನೋಡಿ ಕಾಂಗ್ರೆಸ್ ಒಂದಿಷ್ಟು ಪಾಠ ಕಲಿಯಬಹುದಿತ್ತು. ಆದರೆ ಇದಕ್ಕೆಲ್ಲ ಬೇಕಾದ ರಾಜಕೀಯ ಮುನ್ನೋಟವನ್ನೇ ಕಾಂಗ್ರೆಸ್ ಕಳೆದುಕೊಂಡಂತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹಿಂದೂ ಮತ್ತು ಹಿಂದುತ್ವದ ನಡುವಣ ವ್ಯತ್ಯಾಸಗಳ ಬಗ್ಗೆ ತಮ್ಮ ಅರಿವಿಗೆ ದಕ್ಕಿದಷ್ಟು ಮಟ್ಟಿಗೆ ಮಾತನಾಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘ ಪರಿವಾರದ ಕೆಲ ಮುಖಂಡರು ರಾಹುಲ್ ಅವರ ತಂದೆಯ ಮೂಲಧರ್ಮವನ್ನೇ ಪ್ರಶ್ನಿಸಿ, ಇಂಥವರಿಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಹತ್ತಾರು ತಲೆಮಾರುಗಳ ಹಿಂದೆ ಅನ್ಯಮತಗಳಿಗೆ ಮತಾಂತರವಾದವರನ್ನು ತಮ್ಮ ‘ಘರ್‌ವಾಪಸಿ’ ಮೂಲಕ ಹಿಂದೂ ಧರ್ಮಕ್ಕೆ ಮರಳಿ ಕರೆತರಬಯಸಿರುವವರನ್ನು ಇವರು ಹೇಗೆ ನೋಡಬಹುದೆಂದು ಸುಲಭವಾಗಿ ಊಹಿಸಬಹುದಾಗಿದೆ.

-ಡಿ.ಎಸ್.ನಾಗಭೂಷಣ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT