ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ವಿಶ್ವಕಪ್‌ | ಸೋಲನ್ನು ಸ್ವೀಕರಿಸೋಣ

Last Updated 12 ಜುಲೈ 2019, 19:45 IST
ಅಕ್ಷರ ಗಾತ್ರ

ಕ್ರಿಕೆಟ್‌ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪ್ರದರ್ಶನವು ನಮಗೆ ಹಲವು ಪಾಠಗಳನ್ನು ಹೇಳುವಂತಿತ್ತು.

ಸರಣಿಯುದ್ದಕ್ಕೂ ಉತ್ತಮ ಆಟವಾಡಿ, ವಿಶ್ವದಾಖಲೆಯ ಮೊತ್ತ ಪೇರಿಸಿದ ರೋಹಿತ್ ಶರ್ಮಾ ಹಾಗೂ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಸೆಮಿಫೈನಲ್ ಪಂದ್ಯದಲ್ಲಿ ತಲಾ ಒಂದು ರನ್‌ ಗಳಿಸಿ ಔಟಾದದ್ದು, ‘ಮನುಷ್ಯನೊಬ್ಬ ಜೀವನದ ಯಾವ ಕ್ಷಣದಲ್ಲಾದರೂ ಎಡವಬಹುದು’ ಎಂಬುದನ್ನು ತಿಳಿಸಿತು. ಶಿಖರ್‌ ಧವನ್‌ ಅವರು ಗಾಯಗೊಂಡಿದ್ದರಿಂದ ತೆರವಾದ ಸ್ಥಾನಕ್ಕೆ ರಿಷಭ್‌ ಪಂತ್‌ ಆಯ್ಕೆಯಾದರು. ಇದು, ‘ಅವಕಾಶ ಯಾವಾಗ ಬೇಕಾದರೂ ಬಂದು ಬಾಗಿಲು ಬಡಿಯಬಹುದು’ ಎಂಬುದನ್ನು ಪ್ರತಿಪಾದಿಸಿತು. ಭಾರತವು ಪಂದ್ಯವನ್ನು ಹೀನಾಯವಾಗಿ ಸೋಲುತ್ತದೆ ಎಂಬ ಭಾವನೆ ಮೂಡಿದ್ದ ಸಂದರ್ಭದಲ್ಲಿ ಮೈದಾನಕ್ಕೆ ಬಂದ ರವೀಂದ್ರ ಜಡೇಜ ಅವರು ‘ಜೀವನದಲ್ಲಿ ಎಲ್ಲವೂ ಮುಗಿಯಿತು’ ಎಂದು ಕುಳಿತಂತಹವರಿಗೆ ಸ್ಫೂರ್ತಿಯಾಗುವಂಥ ಆಟವಾಡಿದರು. ಗಪ್ಟಿಲ್ ಅವರು ಎಸೆದ ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿದು, ತಾಳ್ಮೆಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಔಟಾದರು. ಅದೃಷ್ಟವು ಎಲ್ಲಾ ಸಮಯದಲ್ಲೂ ಜೊತೆಗಿರುವುದಿಲ್ಲ ಎಂಬುದಕ್ಕೆ ಇದು ಉದಾಹರಣೆಯಾಯಿತು.

ಒಟ್ಟಿನಲ್ಲಿ, ಕ್ರೀಡೆ ಎಂಬುದು ಹೇಗೆಲ್ಲ ನಮಗೆ ಪಾಠವಾಗಬಲ್ಲದು ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಯಿತು. ಸೋಲು– ಗೆಲುವು ಏನೇ ಇರಲಿ, ಆಟವನ್ನು ಕ್ರೀಡಾ ಸ್ಫೂರ್ತಿಯಿಂದ ನೋಡಬೇಕು. ಒಂದು ಪಂದ್ಯವನ್ನು ಸೋತ ಮಾತ್ರಕ್ಕೆ ಒಬ್ಬ ಆಟಗಾರನನ್ನು ನಿಂದನೆಗೆ ಗುರಿಯಾಗಿಸುವುದು ಸರಿಯಲ್ಲ.

–ಶರಣಬಸವ ಆರ್. ಪತ್ತಾರ,ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT