ಶುಕ್ರವಾರ, ಜನವರಿ 22, 2021
19 °C

ಸಂವೇದನೆಯ ಕೊರತೆ ಗೋಚರ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರೈತರಿಗೆ ಸಲ್ಲಬೇಕಾದ ಬೆಳೆ ವಿಮೆ ಪಾವತಿಸಲು ವಿಳಂಬ ಮಾಡಿರುವುದಕ್ಕೆ ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿರುವುದು (ಪ್ರ.ವಾ., ಜ. 14) ಸರಿಯಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು 2016ರಲ್ಲಿ ಪ್ರಾರಂಭವಾಗಿದ್ದರೂ ಜಿಲ್ಲಾ ಮಟ್ಟದ ಕುಂದುಕೊರತೆಗಳ ಪರಿಹಾರ ಸಮಿತಿ ರಚನೆಯಾಗಿರುವುದು 2019ರಲ್ಲಿ. ಅಂದರೆ ಮೂರು ವರ್ಷಗಳ ನಂತರ! ಅಷ್ಟು ಸಾಲದೆಂಬಂತೆ, 189 ರೈತರ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿರುವ ಕಾರಣ ಬೆಳೆ ವಿಮೆ ಪರಿಹಾರ ನೀಡಿಕೆ ಸಾಧ್ಯವಾಗಿಲ್ಲವಂತೆ! ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸರ್ಕಾರವೇ ತಿಳಿಸಿದೆ.

ವಿಮಾ ಪರಿಹಾರ ಬಿಡುಗಡೆಯಾಗದ 2016ರಿಂದ ಈವರೆಗಿನ ಅವಧಿಯಲ್ಲಿ, ರೈತರ ಅಭಿವೃದ್ಧಿಯೇ ದಿವ್ಯ ಮಂತ್ರವೆಂದು ಸದಾ ಪಠಿಸುವ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ನೇತೃತ್ವದ ಸರ್ಕಾರಗಳು ಆಡಳಿತ ನಡೆಸಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಸಂವೇದನೆಯಿಂದ ಕಾರ್ಯನಿರ್ವಹಿಸದಿರುವುದು ಸ್ಪಷ್ಟವಾಗುತ್ತದೆ. ತಾಂತ್ರಿಕವಾಗಿ ಶರವೇಗದಲ್ಲಿ ಮುಂದುವರಿಯುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ರೈತರ ನಿಷ್ಕ್ರಿಯ ಖಾತೆಗಳನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಕಾರ್ಯನಿರ್ವಹಿಸುವವರಿಗೆ ಬದ್ಧತೆ ಮತ್ತು ಕ್ರಿಯಾಶೀಲತೆ ಜೊತೆಗೆ ಸಾರ್ವಜನಿಕರ ಬಗೆಗೆ ಸೂಕ್ಷ್ಮ ಸಂವೇದನೆಯೂ ಇರಬೇಕು. ಇಲ್ಲವಾದಲ್ಲಿ, ಬಹು ಅಬ್ಬರದೊಡನೆ ಸರ್ಕಾರಗಳು ಘೋಷಿಸುವ ಕಲ್ಯಾಣ ಕಾರ್ಯಕ್ರಮಗಳ ಫಲ ಉದ್ದೇಶಿತರಿಗೆ ತಲುಪದೇ ವಿಫಲವಾಗುತ್ತವೆ.

– ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.