ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಂಗ್‌: ತೆರೆದಿದೆ ಆಯ್ಕೆಯ ಸ್ವಾತಂತ್ರ್ಯದ ಬಾಗಿಲು

ಅಕ್ಷರ ಗಾತ್ರ

ಕಿರುತೆರೆಯಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳ ಪ್ರಸಾರವನ್ನು ಕೆಲವು ಗಣ್ಯರು ವಿರೋಧಿಸಿದ್ದಾರೆ (ವಾ.ವಾ., ಜುಲೈ 18). ಹಲವಾರು ವರ್ಷಗಳಿಂದ ಡಬ್ಬಿಂಗ್ ಇಲ್ಲದೆ ರಾಜ್ಯದ ಹಿರಿತೆರೆಯು ಪರಭಾಷೆ ಚಿತ್ರಗಳ ಹಾವಳಿ, ರೀಮೇಕ್ ಹಾವಳಿಗಳಿಂದ ನಲುಗಿದೆ. ಅದೇ ಸಂಸ್ಕೃತಿಯು ಕನ್ನಡ ಕಿರುತೆರೆಗೂ ಬಂದಿತ್ತು. ಪ್ರಸಾರವಾಗುತ್ತಿದ್ದ ಬಹಳಷ್ಟು ಧಾರಾವಾಹಿಗಳು ಹಿಂದಿ, ತಮಿಳು, ಮರಾಠಿ ಧಾರಾವಾಹಿಗಳ ರೀಮೇಕ್ ಆಗಿದ್ದು, ಅಲ್ಲಿಂದ ಉಡುಪು, ಸಂಪ್ರದಾಯಗಳನ್ನೂ ನಕಲು ಮಾಡಲಾಗುತ್ತಿತ್ತು. ಹಾಗಾಗಿ ಇಲ್ಲಿ ಕನ್ನಡ ಸಂಸ್ಕೃತಿಯ ಕಾಳಜಿಯು ವಿರೋಧಾಭಾಸದಿಂದ ಕೂಡಿದೆ. ಇನ್ನು ಮಹಾಭಾರತದಂತಹ ಧಾರಾವಾಹಿಗಳನ್ನು ಕನ್ನಡ ಪ್ರೇಕ್ಷಕ ನೋಡಲು ಸಾಧ್ಯವಾಗಿಸಿದ್ದು ಈ ಡಬ್ಬಿಂಗ್. ವೀಕ್ಷಕರಿಗೆ ಕಿರಿಕಿರಿಯೆನಿಸಿದಲ್ಲಿ ಟಿಆರ್‌ಪಿ ಬಿದ್ದುಹೋಗಿ ವಾಹಿನಿಗಳು ತಾವೇ ಪ್ರಸಾರ ನಿಲ್ಲಿಸಬೇಕಾಗುತ್ತದೆ.

ಶಂಕರನಾಗ್ ಅವರು ನಿರ್ಮಿಸಿದ ‘ಮಾಲ್ಗುಡಿ ಡೇಸ್’ ಇಷ್ಟು ವರ್ಷ ಕನ್ನಡದಲ್ಲಿ ನೋಡಲು ಸಾಧ್ಯವಿಲ್ಲದಿದ್ದುದು ವಿಪರ್ಯಾಸವಾಗಿತ್ತು. ಈಗ ಅದು ಕನ್ನಡದಲ್ಲಿ ಪ್ರಸಾರವಾಗುತ್ತಿರುವುದು ನಮಗೆ ಖುಷಿ ತಂದಿದೆ. ಇದರಿಂದ ಕನ್ನಡ ಪ್ರೇಕ್ಷಕನಿಗೆ ಹೊಸ ಆಯ್ಕೆಯ ಸ್ವಾತಂತ್ರ್ಯದ ಬಾಗಿಲು ತೆರೆದಿದೆ. ಪರಭಾಷೆ ಮೇಲೆ ಅವಲಂಬನೆ ಆಗಬೇಕಾದ ಅನಿವಾರ್ಯವನ್ನು ಡಬ್ಬಿಂಗ್ ಹೋಗಲಾಡಿಸಿದೆ. ಆದ್ದರಿಂದ ಕನ್ನಡ ಸಂಸ್ಕೃತಿ, ಜಾಯಮಾನ ಎಂಬುದನ್ನು ಒಂದಿಷ್ಟೇ ಜನರು ತೀರ್ಮಾನಿಸುವುದು ಅಸಾಂವಿಧಾನಿಕವಾಗುತ್ತದೆ ಮತ್ತು ‘ನಾವು ಕೊಟ್ಟಿದ್ದನ್ನೇ ನೋಡಬೇಕು’ ಎನ್ನುವ ಏಕಮುಖ ಧೋರಣೆಯಿಂದ ವೀಕ್ಷಕನ ಆಯ್ಕೆ ಸ್ವಾತಂತ್ರ್ಯ ಹರಣವಾದಂತಾಗುತ್ತದೆ. ‌

ಈಗ ಕೊರೊನಾ ಕಾರಣದಿಂದ ಶೂಟಿಂಗ್ ಸ್ಥಗಿತವಾಗಿ ಮೂಲ ಕನ್ನಡ ಕಾರ್ಯಕ್ರಮಗಳ ಕೊರತೆಯಿಂದ ತಾತ್ಕಾಲಿಕವಾಗಿ ಡಬ್ಬಿಂಗ್ ಕಾರ್ಯಕ್ರಮಗಳು ಹೆಚ್ಚು ಪ್ರಸಾರವಾಗುತ್ತಿರಬಹುದು. ವಾಹಿನಿಗಳಿಗೂ ಇದು ಕೆಲಕಾಲ ಅನಿವಾರ್ಯವಾಗಿದೆ ಮತ್ತು ಪ್ರೇಕ್ಷಕರೂ ಅದಕ್ಕೆ ಸ್ಪಂದಿಸಿದ್ದಾರೆ. ಇದರಿಂದ ಪಾಠ ಕಲಿತಾದರೂ ಮುಂದೆ ಕನ್ನಡ ಸಿನಿಮಾ ಮತ್ತು ಧಾರಾವಾಹಿ ತಯಾರಕರು ಕನ್ನಡ ಸೊಗಡಿನ, ಕನ್ನಡ ನೆಲದ ಕತೆಗಳು, ಪಾತ್ರಗಳನ್ನುಳ್ಳ ಉತ್ತಮ ಧಾರಾವಾಹಿಗಳ ನಿರ್ಮಾಣಕ್ಕೆ ಗಮನಹರಿಸಬಹುದು. ಕಲಾವಿದರು, ನಿರ್ಮಾಪಕರು ಮತ್ತು ವಾಹಿನಿಗಳು ಚರ್ಚಿಸಿ ಒಂದು ಹಾದಿಯನ್ನು ಕಂಡುಕೊಂಡರೆ, ನಮ್ಮ ಅಸ್ಮಿತೆಗೆ ಡಬ್ಬಿಂಗ್ ಯಾವುದೇ ತೊಂದರೆ ಕೊಡುವುದಿಲ್ಲ.

– ವಿಕಾಸ್ ಹೆಗಡೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT