ಸೋಮವಾರ, ಮೇ 16, 2022
24 °C

ಅಭಿವ್ಯಕ್ತಿ ಸ್ವಾತಂತ್ರ್ಯ: ಕಡಿವಾಣವಿಲ್ಲದ ಕುದುರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತಿ ಕೆ.ಎಸ್‌.ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ವಿದ್ಯಮಾನಕ್ಕೆ, ‘ವಿಷಯವನ್ನು ಒಪ್ಪದವರು ವಿಮರ್ಶಿಸಲಿ’ ಎಂಬ ಕೆಲವು ವಿಚಾರವಾದಿಗಳ ಅಭಿಪ್ರಾಯವು (ವಾ.ವಾ., ಫೆ. 10) ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುವಂತಿದೆ. ಭಗವಾನ್ ಅವರ ಮುಖಕ್ಕೆ ವಕೀಲೆಯೊಬ್ಬರು ಮಸಿ ಬಳಿದದ್ದು ಸರಿಯಾದ ಪ್ರತಿಕ್ರಿಯೆ ಅಲ್ಲ. ಸಾಹಿತ್ಯಕ್ಕೆ ಸಾಹಿತ್ಯದಿಂದ ಉತ್ತರಿಸುವುದು ಯೋಗ್ಯಮಾರ್ಗ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತರವಲ್ಲ. ಆದರೆ ಭಗವಾನ್ ಅವರ ಅಭಿಪ್ರಾಯವು ಮಸಿ ಬಳಿಯುವಂತಹ ಆಕ್ರೋಶ ಭರಿಸುವಷ್ಟು ಕಠೋರವಾಗಿತ್ತು ಎಂಬುದು ಅಷ್ಟೇ ವಿವೇಚನೆಗೆ ಇಂಬು ಕೊಡುತ್ತದೆ.

ಇಂದು ಕೆಲವರಿಗೆ ಅಭಿಪ್ರಾಯ ಸ್ವಾತಂತ್ರ್ಯ ಎಂಬುದು ಕಡಿವಾಣವಿಲ್ಲದ ಕುಣಿಯುವ ಕುದುರೆಯಂತಾಗಿದೆ. ಮನಸೋಇಚ್ಛೆ ಏನನ್ನೋ ಬರೆದು ದಿಢೀರನೆ ಹೆಸರು ಗಳಿಸಬೇಕೆಂಬ ಸ್ವೇಚ್ಛಾ ಮನೋಭಾವ ಎದ್ದುಕಾಣುತ್ತದೆ. ಭಾವನೆಗಳನ್ನು ವೃಥಾ ಕೆದಕಿ, ಅದರಿಂದ ಬರುವ ವಿರೋಧದಿಂದ ರಕ್ಷಣೆ ಪಡೆಯಲು ಅಭಿಪ್ರಾಯ ಸ್ವಾತಂತ್ರ್ಯ ಎಂಬುದನ್ನು ಇಲ್ಲವೇ ಪೊಲೀಸರ ರಕ್ಷಣೆಯನ್ನು ಪಡೆದು ಬದುಕುವ ಪರಿ ಅನುಕಂಪವನ್ನು ಹುಟ್ಟಿಸುತ್ತದೆ. ಅಭಿಪ್ರಾಯ ಸ್ವಾತಂತ್ರ್ಯವನ್ನು ಸಂವಿಧಾನಪ್ರದತ್ತ ಹಕ್ಕು ಎಂದುಕೊಂಡವರು ಇನ್ನೊಬ್ಬರ ಭಾವನೆಗಳಿಗೆ ಭಂಗ ಬಾರದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಬದ್ಧತೆ, ತನ್ನ ಇತಿಮಿತಿಗಳ ಅರಿವು ಮತ್ತು ಸೂಕ್ಷ್ಮ ಸಂವೇದನಾಶೀಲ ಗುಣಗಳು ಸಮಾಜದಲ್ಲಿ ಪರಿವರ್ತನೆಯನ್ನು ತಂದುಕೊಡಬಲ್ಲವು.

- ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು