ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವೋಪೇತ ಮದುವೆ ಇಬ್ಬರಿಗೂ ಅಪಥ್ಯ

ಅಕ್ಷರ ಗಾತ್ರ

ಕೊರೊನಾದ ಈ ಕಾಲಘಟ್ಟದಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ಮದುವೆಗಳಿಗೆ ಸ‍‍‍ರ್ಕಾರವೇ ಕಡಿವಾಣ ಹಾಕಿದೆ. ಇದಲ್ಲದೆ ಭಾರತೀಯ ಸಮಾಜದ ಮದುವೆಗಳ ಅವಿಭಾಜ್ಯ ಅಂಗವೇ ಆಗಿರುವ ಚಿನ್ನದ ಬೆಲೆ ಗಗನಮುಖಿಯಾಗಿದೆ. ಆಹಾರ ಪದಾರ್ಥಗಳ ಬೆಲೆಯೂ ಅನಿರೀಕ್ಷಿತವಾಗಿ ಹೆಚ್ಚಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಕೊರೊನಾ ಸೋಂಕಿನ ಭಯವೂ ಜನರನ್ನು ಕಾಡುತ್ತಿದೆ. ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ವಾಸ್ತವದಲ್ಲಿ ಮದುವೆಗಳ ಸಂಖ್ಯೆ ಕಡಿಮೆಯಾಗಬೇಕಿತ್ತು. ಆದರೆ ಇಷ್ಟೆಲ್ಲಾ ಅನನುಕೂಲಗಳ ಹೊರತಾಗಿಯೂ ಮದುವೆಗಳ ಸಂಖ್ಯೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಮದುವೆಗಳು ಹೆಚ್ಚಾಗಿ ಜರುಗುತ್ತಿವೆ. ಇದಕ್ಕೆ ಪೂರಕವೆಂಬಂತೆ ಘಟನೆಯೊಂದನ್ನು ಉದಾಹರಿಸುತ್ತೇನೆ.

ಪತಿಯನ್ನು ಕಳೆದುಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕಳೆದ ವರ್ಷದ ಮಧ್ಯಭಾಗದಲ್ಲಿ ನನ್ನನ್ನು ಭೇಟಿಯಾಗಿ, ತಮ್ಮ ಇಬ್ಬರು ಹೆಣ್ಣು ಮಕ್ಕಳಲ್ಲಿ ಪದವಿ ಮುಗಿಸಿರುವ ಮೊದಲನೆಯ ಮಗಳಿಗೆ ಮದುವೆ ಮಾಡಬಯಸಿದ್ದು, ಸೂಕ್ತ ವರ ಇದ್ದರೆ ತಿಳಿಸುವಂತೆ ಕೇಳಿದರು. ಕೆಲ ದಿನಗಳ ನಂತರ, ನನಗೆ ಪರಿಚಯವಿದ್ದ ಅನುಕೂಲಸ್ಥ ಕುಟುಂಬವೊಂದರ ವರನ ಬಗ್ಗೆ ಪ್ರಸ್ತಾಪಿಸಿದಾಗ, ‘ನನ್ನ ಮಗಳು ಈಗಲೇ ಮದುವೆ ಬೇಡವೆನ್ನುತ್ತಿದ್ದಾಳೆ. ಕೆಲಸಕ್ಕೆ ಸೇರಿ ಕುಟುಂಬಕ್ಕೆ ಆಸರೆಯಾಗಬೇಕೆಂದಿದ್ದಾಳೆ. ಹಾಗಾಗಿ ಇನ್ನೂ ಎರಡು ವರ್ಷ ಮದುವೆ ಮಾಡುವುದಿಲ್ಲ’ ಎಂದು ತಿಳಿಸಿದರು. ಕೆಲ ದಿನಗಳ ಹಿಂದೆ ಮತ್ತೆ ಭೇಟಿಯಾದ ಅದೇ ಮಹಿಳೆ, ಮಗಳ ಮದುವೆ ಮಾಡಿದ್ದಾಗಿ ಹರ್ಷದಿಂದ ಹೇಳಿದರು. ಕಾರಣ ಕೇಳಿದಾಗ, ‘ಅನುಕೂಲಸ್ಥ ಮನೆಯ ಹುಡುಗನಿಗೆ ಮದುವೆ ಮಾಡಿಕೊಟ್ಟರೆ ಅವರ ಬೇಡಿಕೆಗಳೂ ಹೆಚ್ಚು, ಖರ್ಚೂ ಹೆಚ್ಚು, ಹೀಗಾಗಿ ಕೊರೊನಾ ಸಮಯದಲ್ಲಿ ಹೆಚ್ಚು ವೆಚ್ಚವಿಲ್ಲದೆ ಮನೆಯ ಬಳಿಯೇ ಸರಳವಾಗಿ ಮದುವೆ ಮಾಡಿ ಮುಗಿಸಿಬಿಟ್ಟೆ’ ಎಂದರು. ಇದರಿಂದ ದೊಡ್ಡ ಹೊರೆಯೊಂದು ಇಳಿದಂತಾಗಿದ್ದು, ಕೊರೊನಾದಿಂದ ತನ್ನಂಥ ಹಲವರಿಗೆ ಅನುಕೂಲವೇ ಆಗಿದೆ ಎಂದರು.

ಜೀವಮಾನದ ಉಳಿತಾಯವನ್ನೆಲ್ಲಾ ಕರಗಿಸಿ, ಸಾಲಸೋಲ ಮಾಡಿ, ಎಲ್ಲರ ಆಶೋತ್ತರಗಳಿಗೆ ಸ್ಪಂದಿಸಿ ಮದುವೆ ಮಾಡಿದ ಹೊರತಾಗಿಯೂ ಟೀಕೆ ಟಿಪ್ಪಣಿಗಳಿಗೆ, ಕುಹಕದ ನುಡಿಗಳಿಗೇನೂ ಕಮ್ಮಿಯಿರುವುದಿಲ್ಲ. ಸರಳ ಮದುವೆ ಮಾಡಿಯೂ ಈ ಯಾವುದೇ ಅಪವಾದಗಳಿಗೆ ಗುರಿಯಾಗದಿರುವ ಅವಕಾಶವನ್ನಂತೂ ಕೊರೊನಾ ಸಮಯ ನೀಡಿದೆ. ಆದರೆ ಸರಳ ಮದುವೆಯ ಹೆಸರಿನಲ್ಲಿ ನಡೆದಿರುವ ಕೆಲವು ಬಾಲ್ಯ ವಿವಾಹಗಳು ಕಪ್ಪುಚುಕ್ಕೆಗಳಾಗಿವೆ. ದುಂದುವೆಚ್ಚದ ಮದುವೆಗಳು ವರನ ಕುಟುಂಬದವರಿಗೂ ಹೊರೆಯಾಗಿರುತ್ತವೆ. ವರನ ಕುಟುಂಬದವರ ಸಹಕಾರವಿಲ್ಲದೆ ಸರಳ ಮದುವೆಗಳು ಅಸಾಧ್ಯ. ಹೀಗಾಗಿ ವೈಭವದ ಮದುವೆ ವಾಸ್ತವವಾಗಿ ಎರಡು ಕುಟುಂಬಗಳಿಗೂ ಅಪಥ್ಯವೇ ಆಗಿರುತ್ತದೆ ಎಂಬ ಸತ್ಯವನ್ನು ಸಹ ಕೊರೊನಾ ಸಮಯ ಹೊರಗೆಡವಿದೆ.

– ಶರತ್ ಸುಬ್ಬೇಗೌಡ, ಗಂಡಸಿ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT