ಸೋಮವಾರ, ಆಗಸ್ಟ್ 26, 2019
27 °C

ದಿಟ್ಟ ನಿರ್ಧಾರ ತಳೆದದ್ದು ಸ್ವಾರ್ಥಕ್ಕಲ್ಲ

Published:
Updated:

ಜಮ್ಮು–ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಸರ್ಕಾರ ಅನುಸರಿಸಿದ ಮಾರ್ಗವನ್ನು ಡಾ. ಸಿ.ಎನ್.ರಾಮಚಂದ್ರನ್ ಟೀಕಿಸಿದ್ದಾರೆ (ವಾ.ವಾ., ಆ. 9). ಆ ಸಂದರ್ಭದಲ್ಲಿ ಅಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಿ, ನಾಯಕರನ್ನು ಗೃಹಬಂಧನದಲ್ಲಿ ಇರಿಸದಿದ್ದರೆ ಅವರು ಗಲಭೆಗೆ ಪ್ರಚೋದನೆ ನೀಡದೆ ಸುಮ್ಮನಿರುತ್ತಿದ್ದರೇ? ರಾಜ್ಯಪಾಲರ ವರದಿಯನ್ನೇ ಕಾಶ್ಮೀರಿಗರ ಸಮ್ಮತಿಯೆಂದು ಪರಿಗಣಿಸಲಾಗಿದೆ ಎಂದಿದ್ದಾರೆ. ಆದರೆ ಸಂವಿಧಾನದಲ್ಲಿ, ವಿಶೇಷ ಸ್ಥಾನಮಾನ ರದ್ದುಗೊಳಿಸಲು ಕಾಶ್ಮೀರ ಸರ್ಕಾರದ ಸಮ್ಮತಿ ಪಡೆಯಬೇಕು ಎಂದಿದೆಯೇ ಹೊರತು ಚುನಾಯಿತ ಸರ್ಕಾರದ ಸಮ್ಮತಿ ಎಂದು ಹೇಳಿಲ್ಲ. ಹಾಗೊಂದು ವೇಳೆ ಚುನಾಯಿತ ಸರ್ಕಾರದ ಸಮ್ಮತಿ ಪಡೆಯಬೇಕೆಂದಿದ್ದಲ್ಲಿ ಅದು ಸಾಧ್ಯವಿತ್ತೇ?

ಇತರ ಕೆಲ ರಾಜ್ಯಗಳ ವಿಶೇಷ ಸ್ಥಾನಮಾನ ಆ ಭಾಗಗಳ ಅಭಿವೃದ್ಧಿಗೆ ಪೂರಕವಾಗಿದೆಯೇ ಹೊರತು ಮಾರಕವಾಗಿಲ್ಲ. ಸುಮಾರು ಏಳು ದಶಕಗಳ ಕಾಲ ಕಾಶ್ಮೀರದಲ್ಲಿ ರಕ್ತ ಹರಿದದ್ದು, ಭೂಲೋಕದ ಸ್ವರ್ಗವು ಅಲ್ಲಿನ ರಾಜಕಾರಣಿಗಳ ಸ್ವಾರ್ಥದಿಂದ, ಪ್ರತ್ಯೇಕತಾವಾದಿಗಳ ಅಟಾಟೋಪದಿಂದ ನಿತ್ಯ ನರಕವಾಗುವಂತೆ ಆಗಿದ್ದು, ನೆರೆರಾಷ್ಟ್ರವು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಾ ಬಂದದ್ದು ಎಲ್ಲಕ್ಕೂ ಸಂವಿಧಾನದ 370ನೇ ವಿಧಿ ಕಾರಣವಾಯಿತಲ್ಲವೇ? ದಿಟ್ಟ ನಿರ್ಧಾರ ತಳೆದದ್ದು ಯಾವ ಸ್ವಾರ್ಥಕ್ಕೂ ಅಲ್ಲ ಎನ್ನುವುದನ್ನು ಟೀಕಾಕಾರರು ಮರೆಯಬಾರದು.

– ರಾಜಕುಮಾರ ಉಪಾಸೆ, ಬೆಂಗಳೂರು

Post Comments (+)