ಭಾನುವಾರ, ಅಕ್ಟೋಬರ್ 25, 2020
28 °C

ಕಾಡುಗೊಲ್ಲ ನಿಗಮ: ರೂಪುರೇಷೆ ಸಿದ್ಧಗೊಳ್ಳಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕಾಡುಗೊಲ್ಲ ಬುಡಕಟ್ಟು ಸಮುದಾಯದ ಬಹುವರ್ಷಗಳ ಹೋರಾಟದ ಫಲವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸ್ವಾಗತಾರ್ಹ. ಕಾಡುಗೊಲ್ಲ ಸಮುದಾಯವು ಈ ನೆಲಮೂಲದ ಅಚ್ಚಕನ್ನಡದ ಅಲೆಮಾರಿ ಬುಡಕಟ್ಟಾಗಿದೆ. ತನ್ನದೇ ಆದ ಸಾಂಸ್ಕೃತಿಕ, ಸಾಮಾಜಿಕ ಅಸ್ಮಿತೆ, ಅನನ್ಯತೆಯನ್ನು ಹೊಂದಿರುವ ಈ ಸಮುದಾಯಕ್ಕೆ ತಬ್ಬುವ ಕೈಗಳಿಗಿಂತ, ಆಸೆ ತೋರಿಸಿ ತಳ್ಳುವ ಕೈಗಳೇ ಹೆಚ್ಚಾಗಿವೆ.

ಆದರೆ ನಿಗಮದ ಸ್ಥಾಪನೆಯ ಹಿಂದೆ, ನೂರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿರುವ ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರುವ ದೃಷ್ಟಿಕೋನವಿರಬೇಕೇ ವಿನಾ ಅದೊಂದು ಚುನಾವಣಾ ತಂತ್ರವಾಗಬಾರದು. ನಿಗಮದ ರೂಪುರೇಷೆಗಳನ್ನು ಸಿದ್ಧಪಡಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಕೂಡಲೇ ಚಾಲನೆ ನೀಡಬೇಕು. ಅದಕ್ಕೆ ಮುನ್ನ ಕಾಡುಗೊಲ್ಲ ಬುಡಕಟ್ಟಿನ ಮುಖಂಡರು, ಸಂಸ್ಕೃತಿ ಚಿಂತಕರು, ಅಭಿವೃದ್ಧಿ ಮೀಮಾಂಸಕರು, ಕಾಡುಗೊಲ್ಲ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆದು ಮುಕ್ತ ಸಮಾಲೋಚನೆ ನಡೆಸುವುದು ಅತ್ಯವಶ್ಯಕ.

ಇದರೊಂದಿಗೆ ಈಗಾಗಲೇ ಕೇಂದ್ರ ಸರ್ಕಾರದಲ್ಲಿ ಬಹುವರ್ಷಗಳಿಂದ ನನೆಗುದಿಗೆ ಬಿದ್ದಿರುವ, ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವಕ್ಕೆ ಅನುಮೋದನೆ ಸಿಗುವಂತೆ ರಾಜ್ಯ ಸರ್ಕಾರ ಒತ್ತಡ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ದೂರಗಾಮಿ ಶಾಶ್ವತ ಯೋಜನೆಗಳನ್ನು ರೂಪಿಸಿ ಕಾರ್ಯಾನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು. ಆಗ ಮಾತ್ರ ಅಭಿವೃದ್ಧಿ ನಿಗಮದ ಸ್ಥಾಪನೆ ಸಾರ್ಥಕವಾಗುತ್ತದೆ.

- ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ದಾವಣಗೆರೆ, ಡಾ. ಜಿ.ಕೆ.ಪ್ರೇಮ, ಶಿವಮೊಗ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು