ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಂತರಿಕ ವೈಮನಸ್ಸು ಬದಿಗಿಡಿ; ಸಕಾರಾತ್ಮಕ ಧೋರಣೆ ಇರಲಿ’

ಕೆಪಿಸಿಸಿ ಪ್ರಚಾರ ಸಮಿತಿಯ ಮೊದಲ ಸಭೆ; ಹಿರಿಯ ನಾಯಕರ ಸಲಹೆ
Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆಂತರಿಕ ಅಸಮಾಧಾನಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರೆ ಶಿಸ್ತು ಕ್ರಮ ಖಚಿತ’ ಎಂಬ ಎಚ್ಚರಿಕೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ನೀಡಿದ್ದಾರೆ.

ನಗರದಲ್ಲಿ ಬುಧವಾರ ನಡೆದ ಸಮಿತಿಯ ಮೊದಲ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಟಿಕೆಟ್ ಹಂಚಿಕೆ ಕುರಿತು  ಹೈಕಮಾಂಡ್ ತೀರ್ಮಾನಿಸಲಿದೆ. ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಬಹುದು ಎಂಬ ನಕಾರಾತ್ಮಕ ಚಿಂತನೆ ಬಿಟ್ಟು, ನಾವೇ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂಬ ಸಕಾರಾತ್ಮಕ ಧೋರಣೆಯಿಂದ ಕೆಲಸ ಮಾಡುವಂತೆ ಕಿವಿಮಾತು ಹೇಳಿರುವುದಾಗಿ ತಿಳಿಸಿದರು.

ಪ್ರತಿ ಬೂತ್‌ನಲ್ಲೂ ಪ್ರಚಾರ ಸಮಿತಿ ರಚಿಸಲಾಗಿದೆ. ಒಡೆದು ಆಳುವ ಬಿಜೆಪಿ ಸರ್ಕಾರದ ನೀತಿ ವಿರುದ್ಧ ತಳಮಟ್ಟದಿಂದಲೇ ಪ್ರಚಾರ ನಡೆಸಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಮತ್ತು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಡಬೇಕು ಎಂದೂ ತಿಳಿಸಲಾಗಿದೆ ಎಂದು ಶಿವಕುಮಾರ್‌ ವಿವರಿಸಿದರು.

ಸರ್ಕಾರ ಮತ್ತು ಪಕ್ಷದ ವತಿಯಿಂದ 170 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಆಯಾ ಕ್ಷೇತ್ರಗಳ ಸಮಸ್ಯೆ ಮತ್ತು ಯೋಜನೆಯ ಕುರಿತು ಬೂತ್ ಮಟ್ಟದಿಂದಲೇ ಪ್ರಚಾರ ಮಾಡಲಾಗುವುದು ಎಂದರು.

ಕೇಂದ್ರ ಬಜೆಟ್ ಗುರುವಾರ ಮಂಡನೆಯಾಗುತ್ತಿರುವ ಕಾರಣ ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ವೀರಪ್ಪ ಮೊಯಿಲಿ ಸಭೆಗೆ ಬಂದಿಲ್ಲ. ಮಾಗಡಿಯಲ್ಲಿ ಕಾರ್ಯಕ್ರಮ ಇದ್ದುದರಿಂದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಗೈರಾದರು. ಉಳಿದಂತೆ, ಎಲ್ಲ ಸಂಸದರು ಮತ್ತು ಸಚಿವರು ಬಂದಿದ್ದರು. ಆ ಮೂಲಕ ಒಗ್ಗಟ್ಟು ಪ್ರದರ್ಶನ ಆಗಿದೆ ಎಂದೂ ಶಿವಕುಮಾರ್‌ ತಿಳಿಸಿದರು.

ಮುಖ್ಯಮಂತ್ರಿ ಆಕ್ರೋಶ:
ಇದಕ್ಕೂ ಮೊದಲು, ಬಿಜೆಪಿ ನಾಯಕರು ಅತಿರೇಕದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೆಲವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಜನರೇ ಅವರಿಗೆ ಪಾಠ ಕಲಿಸುತ್ತಾರೆ’ ಎಂದರು.

‘ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ಪ್ರತಾಪ್‌ಸಿಂಹ ಗೊಂದಲ ಹುಟ್ಟಿಸುತ್ತಿದ್ದಾರೆ. ಬಿಜೆಪಿಯವರ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಿಳಿಸಿ. ಬಿಜೆಪಿಯಲ್ಲೇ ಒಡಕಿದೆ, ಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆಯೇ ಕಚ್ಚಾಟ ಇದೆ. ಅವರು ಅಧಿಕಾರಕ್ಕೆ ಬಂದರೆ ತಾನೇ ಮುಖ್ಯಮಂತ್ರಿ ವಿಚಾರ ಬರುವುದು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಡಿ.ಕೆ. ಶಿವಕುಮಾರ್ ಕಹಳೆ ಊದಿ ಸಭೆಗೆ ಚಾಲನೆ ನೀಡಿದರು.

ರಮ್ಯಾಗೆ ಮುಖ್ಯಮಂತ್ರಿ, ಶಿವಕುಮಾರ್‌ ಪಾಠ!

ವೇದಿಕೆಗೆ ಕರೆದರೂ ಬರಲು ಹಿಂಜರಿದ ಎಐಸಿಸಿ ಸಾಮಾಜಿಕ ಜಾಲತಾಣಗಳ ಘಟಕದ ಮುಖ್ಯಸ್ಥೆ ರಮ್ಯಾ ವಿರುದ್ಧ ಡಿ.ಕೆ. ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ವೇದಿಕೆಗೆ ಬರುವಂತೆ ರಮ್ಯಾಗೆ ಶಿವಕುಮಾರ್ ಆಹ್ವಾನ ನೀಡಿದರು. ಮೊದಲ ಬಾರಿ ಕರೆದಾಗ ಹೋಗದ ರಮ್ಯಾ ಎರಡನೇ ಬಾರಿ ಕರೆದಾಗ ವೇದಿಕೆ ಏರಿದರು.

ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗುವಂತೆ ರಮ್ಯಾಗೆ ಮುಖ್ಯಮಂತ್ರಿ ಮತ್ತು ಶಿವಕುಮಾರ್ ಸಲಹೆ ನೀಡಿದರು. ‘ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾದರೆ ಸಾಕಾಗುವುದಿಲ್ಲ. ಅದರ ಜೊತೆಗೆ ಜನರ ಜೊತೆಗೂ ಇರಬೇಕು. ಒಬ್ಬ ನಾಯಕ ಇಲ್ಲವೇ ನಾಯಕಿ ಬೆಳೆಯುವುದು ಜನರಿಂದ ಮಾತ್ರ’ ಎಂದು ಇಬ್ಬರು ನಾಯಕರೂ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT