ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ರಸ್ತೆ ಗುಣಮಟ್ಟವೂ ಅತ್ಯಗತ್ಯ

Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಉದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಅಪಘಾತವು ಸಾರ್ವಜನಿಕವಾಗಿ ಹಲವಾರು ಚರ್ಚೆಗಳಿಗೆ ಇಂಬು ಕೊಟ್ಟಿದೆ. ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದಿರುವುದೇ ಪ್ರಯಾಣಿಕರ ಸಾವಿಗೆ ಪ್ರಮುಖ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಸೀಟ್ ಬೆಲ್ಟ್ ಧರಿಸುವುದರಿಂದ ಬಹಳಷ್ಟು ಪ್ರಾಣಹಾನಿ, ಗಾಯಗಳ ತೀವ್ರತೆಯನ್ನು ತಗ್ಗಿಸಬಹುದಾದರೂ ಅದೇ ಒಂದು ಪ್ರಮುಖ ಕಾರಣ ಎನ್ನುವುದನ್ನು ಸಂಪೂರ್ಣ ಒಪ್ಪಲಾಗದು. ಕೇಂದ್ರ ರಸ್ತೆ ಸಾರಿಗೆ ಸಚಿವರು ‘ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆ ನಿರ್ಮಿಸಿದ್ದು, ಬಳಕೆದಾರರು ಟೋಲ್ ಪಾವತಿಸಲೇಬೇಕು’ ಎಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಗ್ರಾಮೀಣ ರಸ್ತೆಗಳನ್ನು ಬಿಡಿ, ಅಂತರರಾಷ್ಟ್ರೀಯ ಗುಣಮಟ್ಟದ ಹೆಗ್ಗಳಿಕೆ ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಬಹಳಷ್ಟು ಕಡೆ ಒಂದರಿಂದ ಮೂರು ಅಡಿಯವರೆಗೆ ಗುಂಡಿಗಳು ಬಿದ್ದಿರುವುದನ್ನು ರಸ್ತೆ ಮಾರ್ಗ ಬಳಸುವ ಯಾರಾದರೂ ಗಮನಿಸಬಹುದು. ಗುಂಡಿ ತಪ್ಪಿಸಲು ಹೋಗಿ ರಸ್ತೆ ಬಳಕೆದಾರರು ಪ್ರಾಣ ತೆತ್ತ, ಗಂಭೀರವಾಗಿ ಗಾಯಗೊಂಡ ಪ್ರಕರಣಗಳು ಅಸಂಖ್ಯ.

ಚತುಷ್ಪಥ ರಸ್ತೆಗಳು ಕೆಲವು ಕಡೆ ಏಕಾಏಕಿ ದ್ವಿಪಥವಾಗಿ ಪರಿವರ್ತನೆಯಾಗುತ್ತವೆ, ಸೇತುವೆಗಳು ಕಿರಿದಾಗುತ್ತವೆ, ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಹಾಕಲಾಗಿರುತ್ತದೆ. ಇದನ್ನು ಸಂಕೇತಿಸುವ ಫಲಕಗಳೇ ಇಲ್ಲದೆ ಚಾಲಕರು ಗಲಿಬಿಲಿಗೊಳಗಾಗಿ ಅಪಘಾತಕ್ಕೆ ಈಡಾಗುತ್ತಾರೆ. ಕಾನೂನು ಜಾರಿಗೊಳಿಸುವಾಗ ವಾಹನ ಬಳಕೆದಾರರನ್ನಷ್ಟೇ ಗುರಿಯಾಗಿಸಿಕೊಳ್ಳದೆ, ರಸ್ತೆ ನಿರ್ಮಾಣ, ನಿರ್ವಹಣೆ ಮಾಡುವವರಿಗೂ ದಂಡನೆಯ ಕ್ರಮಗಳು ಅನ್ವಯ ಆಗುವಂತೆ ಮಾಡಬೇಕಿದೆ. ಹಾಗಾದಲ್ಲಿ ರಸ್ತೆ ಸುರಕ್ಷತೆಯ ನಿಯಮಗಳಿಗೆ ಒಂದು ಅರ್ಥ ಬರುತ್ತದೆ.

– ಡಾ. ಚೆನ್ನು ಅ. ಹಿರೇಮಠ,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT