ಮಂಗಳವಾರ, ಜನವರಿ 31, 2023
26 °C

ವಾಚಕರ ವಾಣಿ| ಸೂಕ್ಷ್ಮ ವಿಚಾರಗಳಲ್ಲಿ ರಾಜಕಾರಣ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದಿಂದ ಬರುವ ಬಸ್ ಪ್ರಯಾಣಿಕರಿಗೆ ಗಡಿಯಲ್ಲಿ ಗುಲಾಬಿ ಹೂವು ನೀಡಿ ಸ್ವಾಗತ ಕೋರಿದ ಕರ್ನಾಟಕ ಪೊಲೀಸರ ನಡೆ ಶ್ಲಾಘನೀಯ. ಕರ್ನಾಟಕದ ಬಸ್‌ಗಳಿಗೆ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಮಸಿ ಬಳಿಯುವುದು, ಕಲ್ಲು ಎಸೆಯುವುದನ್ನು ಅಲ್ಲಿನ ಕೆಲ ಪುಂಡರು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಲ್ಲಿನ ಬದಲು ಹೂವು ನೀಡಿ ನಮ್ಮವರು ಸ್ವಾಗತ ನೀಡಿರುವುದು ಕನ್ನಡಿಗರ ಹೃದಯ ವೈಶಾಲ್ಯಕ್ಕೆ ಸಾಕ್ಷಿ. ದೇಶದ ಯಾವುದೇ ಒಬ್ಬ ನಾಗರಿಕ ದೇಶದ ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ಸಂಚರಿಸುವ, ವಾಸಿಸುವ, ವ್ಯಾಪಾರ ಮಾಡುವ ಸವಲತ್ತನ್ನು ನಮ್ಮ ಸಂವಿಧಾನ ಕೊಟ್ಟಿದೆ.

ಹಿಂದೊಮ್ಮೆ ಶರದ್‌ ಪವಾರ್‌ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಗ ಅಲ್ಲಿನ ವಿರೋಧ ಪಕ್ಷಗಳು ತಮ್ಮಲ್ಲಿಂದ ಕರ್ನಾಟಕಕ್ಕೆ ವಿದ್ಯುತ್ ಪೂರೈಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದವು. ಆಗ ಮುಖ್ಯಮಂತ್ರಿ, ‘ಕರ್ನಾಟಕವೇನು ಪಾಕಿಸ್ತಾನದ ಪ್ರಾಂತ್ಯವಲ್ಲ, ಅದು ನಮ್ಮದೇ ದೇಶದ ಒಂದು ಭಾಗ. ವಿದ್ಯುತ್ ಸರಬರಾಜು ನಿಲ್ಲಿಸುವುದು ಸಾಧ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದರು. ಇಂತಹ ಮನೋಭಾವವನ್ನು ಅಲ್ಲಿ ಈಗ ಪುಂಡಾಟಿಕೆಯಲ್ಲಿ ತೊಡಗಿರುವ ಪಕ್ಷಗಳ ಮುಖಂಡರು ಬೆಳೆಸಿಕೊಳ್ಳಬೇಕು. ಗಡಿವಿವಾದ, ಜಲವಿವಾದದಂತಹ ಸೂಕ್ಷ್ಮ ವಿಚಾರಗಳಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ರಾಜಕಾರಣಿಗಳು ಮಾಡಬಾರದು.

- ಗುರುರಾಜ ಪಾಟೀಲ ನಾದ, ಇಂಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು