ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರಗಳಿಗೆ ಇಷ್ಟೊಂದು ಮಹತ್ವ ಬೇಕಿರಲಿಲ್ಲ

Last Updated 19 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಈ ಬಾರಿ ನಡೆದ ಕೃಷಿ ಮೇಳಕ್ಕೆ ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ಹೋಗಿದ್ದೆ. ಆದರೆ ಅಲ್ಲಿ ಯಂತ್ರಗಳದ್ದೇ ಕಾರುಬಾರನ್ನು ನೋಡಿ ಬೇಸರವೆನಿಸಿತು. ಎಲ್ಲಿ ನೋಡಿದರಲ್ಲಿ ಯಂತ್ರಗಳು ಪೈಪೋಟಿಗೆ ನಿಂತಂತೆ ಸದ್ದು ಮಾಡುತ್ತಿದ್ದವು. ರೈತರು ಮೂಗಿನ ಮೇಲೆ ಬೆರಳಿಟ್ಟುಕೊಂಡು ಯಂತ್ರಗಳನ್ನು ನೋಡುತ್ತಿದ್ದರು. ಇವೆಲ್ಲವನ್ನೂ ನೋಡಿ, ‘ಇಂಥ ಯಂತ್ರಗಳನ್ನು ಇಟ್ಟುಕೊಂಡವರು ಮಾತ್ರ ಅಭಿವೃದ್ಧಿ ಹೊಂದುತ್ತಾರೆ’ ಎಂಬ ಭಾವನೆ ರೈತರಲ್ಲಿ ಮೂಡಿದರೆ ಅಚ್ಚರಿ ಇಲ್ಲ. ಆ ಎಲ್ಲ ಯಂತ್ರಗಳು ಕೃಷಿಗೆ ಅಥವಾ ರೈತರ ಅಭಿವೃದ್ಧಿಗೆ ಪೂರಕವಾಗಿದ್ದವೇ?

ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದ ‘ಔಷಧ ಸಿಂಪಡಿಸುವ ಡ್ರೋನ್’ ಬಹುಪಾಲು ರೈತರ ಗಮನಸೆಳೆದದ್ದು ನಿಜ. ಆದರೆ ಇದರ ತಯಾರಿಕೆಗೆ ಮಾಡಿದ ವೆಚ್ಚ ₹ 12 ಲಕ್ಷ. ಇಂಥ ಯಂತ್ರವು ಯಾವ ರೈತರ ಕೈಗೆಟಕುತ್ತದೆ? ಸಣ್ಣ ಅಥವಾ ಮಧ್ಯಮ ವರ್ಗದ ರೈತರು ಇಂಥ ಯಂತ್ರ ಖರೀದಿಸುವ ಬಗ್ಗೆ ಕನಸಿನಲ್ಲೂ ಯೋಚಿಸಲಾರರು.

ಅದಿರಲಿ, ಇಂಥ ಯಂತ್ರದಿಂದ ಆಗಬಹುದಾದ ಅನಾಹುತಗಳನ್ನಾದರೂ ತಿಳಿಯಬೇಡವೇ? ಈ ಹಿಂದೆ ಕರಾವಳಿ ಭಾಗದಲ್ಲಿ ಗೇರು (ಗೋಡಂಬಿ) ಕೃಷಿಗೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್‌ ಸಿಂಪಡಿಸಲಾಗಿತ್ತು. ಅದರ ಪರಿಣಾಮ ಏನಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಅಂಥದ್ದೇ ಯಂತ್ರಗಳನ್ನು ಹೊಂದುವುದು ಅಭಿವೃದ್ಧಿಯ ಸಂಕೇತವೆಂದು ಭಾವಿಸಬಹುದೇ? ಕೃಷಿ ಮೇಳದಲ್ಲಿ ಯಂತ್ರಗಳಿಗೆ ಇಷ್ಟೊಂದು ಪ್ರಾಶಸ್ತ್ಯ ಕೊಟ್ಟಿದ್ದು ಸರಿ ಕಾಣಿಸುವುದಿಲ್ಲ. ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡುಕೊಳ್ಳುತ್ತಿರುವ ಈಗಿನ ಸಂದರ್ಭದಲ್ಲಿ, ರೈತರಿಗೆ ಧೈರ್ಯ ತುಂಬುವ, ಹೆಚ್ಚಿನ ವೆಚ್ಚವಿಲ್ಲದೆಯೂ ಸ್ವಾವಲಂಬನೆ ಸಾಧಿಸುವ ವಿಧಾನವನ್ನು ತಿಳಿಸಿಕೊಡುವತ್ತ ಗಮನಹರಿಸಿದ್ದರೆ ಕೃಷಿ ಮೇಳ ರೈತರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು.

ಪ್ರಣಾಮ್ ಶೆಟ್ಟಿ ಕಲ್ಲಡ್ಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT