ಭಾರ ಇಳಿಸಲು ಉಪಾಯ

7
ಮುಚ್ಚು

ಭಾರ ಇಳಿಸಲು ಉಪಾಯ

Published:
Updated:

ಭಾರ ಇಳಿಸಲು ಉಪಾಯ

ಅವಕಾಶ ಸಿಕ್ಕಾಗ, ಶಾಲೆಗಳಲ್ಲಿ ‘ಚೀಲರಹಿತ ದಿನ’ (ಬ್ಯಾಗ್‌ಲೆಸ್‌ ಡೇ) ಆಚರಿಸಬೇಕೆಂದು ಶಾಲೆಗಳಿಗೆ ಶಿಕ್ಷಣ ಇಲಾಖೆ ಸಲಹೆ ನೀಡಿರುವುದು ಸ್ವಾಗತಾರ್ಹ.

ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತಿದ್ದರೂ ಮಕ್ಕಳ ಬ್ಯಾಗ್‌ಗಳ ಭಾರವನ್ನು ಇಳಿಸಲು ಸಾಧ್ಯವೇ ಆಗುತ್ತಿಲ್ಲ. ಯೋಜನಾರಹಿತ ಬೋಧನಾ ಕ್ರಮ, ಇಲಾಖೆ ಅಧಿಕಾರಿಗಳ ಅಧ್ಯಯನ ಹೀನತೆ, ಸರ್ವ ವಿಷಯ ಶಿಕ್ಷಕರನ್ನು ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳದ ಮುಖ್ಯಸ್ಥರು... ಹೀಗೆ ಇದಕ್ಕೆ ಕಾರಣ ಹಲವು.

ಶಿಕ್ಷಕ ವೃತ್ತಿಯಲ್ಲಿ ನನ್ನ 33 ವರ್ಷಗಳ ಅನುಭವದ ಹಿನ್ನೆಲೆಯಲ್ಲಿ, ಮಕ್ಕಳ ಬ್ಯಾಗ್‌ನ ಹೊರೆ ಇಳಿಸುವ ಬಗ್ಗೆ ಒಂದೆರಡು ಸಲಹೆಗಳನ್ನು ನೀಡಲು ಬಯಸುತ್ತೇನೆ.

ಮೊದಲನೆಯದಾಗಿ, ಪುಸ್ತಕಗಳನ್ನೇ ರದ್ದುಪಡಿಸಬೇಕು. ನೋಟ್ ಬುಕ್‌ಗಳನ್ನಂತೂ ರದ್ದು ಮಾಡಲೇಬೇಕು. ಹಾಗಾದರೆ ಪರ್ಯಾಯವೇನು?

ಒಂದು ಪುಸ್ತದಲ್ಲಿ 20 ಪಾಠಗಳಿವೆ ಅಂದುಕೊಳ್ಳಿ. ಶಿಕ್ಷಕರು ಒಂದು ತರಗತಿಯಲ್ಲಿ ಒಂದು ಪಾಠ ಮಾಡುತ್ತಿರುತ್ತಾರೆ. ಇಡೀ ದಿನದಲ್ಲಿ ಎಂಟು ಜನ ಶಿಕ್ಷಕರು ಹೆಚ್ಚೆಂದರೆ ಎಂಟು ಪಾಠಗಳನ್ನು ಮಾಡುತ್ತಿರುತ್ತಾರೆ. ಆದರೆ ಮಕ್ಕಳು ಬರಿಯ ಎಂಟು ಪಾಠಗಳ ಪಠ್ಯವನ್ನು ಮಾತ್ರ ಹೊತ್ತು ತರುವುದಿಲ್ಲ. ಬದಲು ತಲಾ 20 ಪಾಠಗಳಿರುವ ಎಂಟು ಪುಸ್ತಕಗಳನ್ನು ತರುತ್ತಾರೆ. ಜೊತೆಗೆ ಪ್ರತಿ ವಿಷಯಕ್ಕೆ ಕನಿಷ್ಠ ಎರಡು ನೋಟ್‌ಬುಕ್ ಅಂದರೂ ಮಕ್ಕಳ ಬ್ಯಾಗಿನಲ್ಲಿ 16 ರಿಂದ 18 ನೋಟ್‌ಬುಕ್‌ಗಳು ಇರುತ್ತವೆ. ಇದುವೇ ಹೊರೆ.

ಈ ಸಮಸ್ಯೆಯನ್ನು ಪರಿಹರಿಸಲು ಪುಸ್ತಕದ ಪ್ರತಿಯೊಂದು ಪಾಠವನ್ನು ಪ್ರತ್ಯೇಕಗೊಳಿಸಬೇಕಾಗುತ್ತದೆ. ಆಗ, ಶಿಕ್ಷಕರು ಯಾವ ಪಾಠ ಮಾಡುತ್ತಾರೋ ಅದನ್ನಷ್ಟೇ ತಂದರೆ ಸಾಕು. ನೋಟ್ ಬುಕ್‌ ಬದಲು ಬಿಡಿ ಹಾಳೆ ತಂದರೂ ಸಾಕು. ಆಗ ಮಕ್ಕಳ ಬ್ಯಾಗಿನಲ್ಲಿ ಒಂದೆರಡು ಡಜನ್ ಹಾಳೆ, ಹದಿನೈದಿಪ್ಪತ್ತು ಪುಟಗಳಾಗಬಹುದಾದಷ್ಟು ಮುದ್ರಿತ ಪುಸ್ತಕ ಸಾಮಗ್ರಿ ಇರುತ್ತದೆ.ಈ ವಿಧಾನ ಅನುಸರಿಸಿದಲ್ಲಿ ಬ್ಯಾಗಿನ ಒಟ್ಟು ತೂಕ ಒಂದು ಕೆ.ಜಿ.ಯನ್ನು ಮೀರದು. ನೀರು, ಊಟ ಸೇರಿದರೆ ಒಟ್ಟು ಭಾರ ಹೆಚ್ಚೆಂದರೆ ಎರಡು ಕೆ.ಜಿ. ಒಳಗೇ ಇರುತ್ತದೆ.

ಹೀಗೆ ಮಾಡಲು ಇಲಾಖೆ, ಶಾಲೆ ಹಾಗೂ ಪೋಷಕರು ಮುಂದಾದರೆ ಈ ‘ಹೊರೆ ಬೇತಾಳ’ದಿಂದ ನಮ್ಮ ಮಕ್ಕಳನ್ನು ಕಾಪಾಡಿದಂತಾಗುತ್ತದೆ.

ತಿರುಪತಿ ನಾಯಕ್, ಮಾರಿಗುಡ್ಡ
*****

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !