ಕನಕ ಅನುವಾದ ಸಾಹಿತ್ಯ : ಪ್ರಕಟಣೆಗೆ ಮಿನಮೇಷ ಯಾಕೆ?

7

ಕನಕ ಅನುವಾದ ಸಾಹಿತ್ಯ : ಪ್ರಕಟಣೆಗೆ ಮಿನಮೇಷ ಯಾಕೆ?

Published:
Updated:

ಸಂತ ಕವಿ ಕನಕದಾಸರ ಸಮಗ್ರ ಸಾಹಿತ್ಯವನ್ನು ದೇಶದ ಹದಿನೈದು ಭಾಷೆಗಳಿಗೆ ಅನುವಾದ ಮಾಡುವ ಮಹತ್ವದ ಯೋಜನೆಯನ್ನು ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಸುಮಾರು ನಾಲ್ಕು ವರ್ಷಗಳ ಹಿಂದೆ ಕೈಗೆತ್ತಿಕೊಂಡಿತ್ತು.

ಒಂದೊಂದು ಭಾಷೆಗೆ ಹಿರಿಯ ವಿದ್ವಾಂಸರೊಬ್ಬರ ನೇತೃತ್ವದಲ್ಲಿ ಅನುವಾದ ಮಂಡಳಿಯನ್ನೂ ರೂಪಿಸಲಾಗಿತ್ತು. ಒಂದು ಭಾಷೆಯ ಅನುವಾದಕ ಮಂಡಳಿಯ ಸದಸ್ಯನಾಗಿ ದುಡಿದು, ಕನಕ ಸಾಹಿತ್ಯದ ರೋಮಾಂಚನವನ್ನು ನಾನೂ ಅನುಭವಿಸಿದ್ದೇನೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆಗಾಗ ಸಭೆಗಳನ್ನು ಮಾಡಿ, ಅನುವಾದದ ಪ್ರಗತಿ ಪರಿಶೀಲಿಸಲಾಗುತ್ತಿತ್ತು. ಆದಷ್ಟು ಬೇಗ ಅನುವಾದದ ಕೆಲಸಗಳನ್ನು ಮುಗಿಸಿಕೊಡುವಂತೆ ಅನುವಾದಕರಲ್ಲಿ ವಿನಂತಿಸಲಾಗಿತ್ತು. ಆದುದರಿಂದ ಬಹುತೇಕ ಭಾಷೆಗಳ ಅನುವಾದ ಕೆಲಸ ಮುಗಿದು, ಅನೇಕ ತಿದ್ದುಪಡಿಗಳಾಗಿ ಕನಕದಾಸರ ಸಮಗ್ರ ಸಾಹಿತ್ಯವು ಪ್ರಕಟಣೆಯ ಬಾಗಿಲಲ್ಲಿ ನಿಂತು ಇಂದಿಗೆ ಸುಮಾರು ಎರಡೂವರೆ ವರ್ಷಗಳಾದವು. ಆದರೂ ‘ಮುದ್ರಣ ಭಾಗ್ಯ’ ಆ ಕೃತಿಗಳಿಗೆ ದೊರೆತಿಲ್ಲ. ಇದರ ಹಿಂದೆ ಇರುವ ರಾಜಕೀಯ ಕಿತ್ತಾಟವೇನು ಎಂದು ಅರ್ಥವಾಗುತ್ತಿಲ್ಲ.

ಕನಕದಾಸರು ತಮ್ಮ ಕೀರ್ತನೆಯೊಂದರಲ್ಲಿ ಶೇಷಶಾಯಿಯಾಗಿ ಮಲಗಿರುವ ರಂಗನಾಥನನ್ನು ಕುರಿತು ‘ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೇ?’ ಎಂದು ದೀರ್ಘ ನಿದ್ರೆಗೆ ಕಾರಣಗಳನ್ನು ಹುಡುಕಿ ಹಾಡುತ್ತಾರೆ. ಕನಕದಾಸರಿಗೆ ರಂಗನಾಥನ ನಿದ್ರೆಗೆ ಕಾರಣ ಗೊತ್ತಿದ್ದರೂ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ದೀರ್ಘ ನಿದ್ರೆಗೆ ಕಾರಣವೇನೆಂದು ಗೊತ್ತಾಗುವುದಿಲ್ಲ, ತಿಳಿಸಿದರೆ ಅನುವಾದಕರು ಸ್ವಲ್ಪ ನಿರಾಳರಾಗುತ್ತಾರೆ. ಸರ್ಕಾರ ತುರ್ತಾಗಿ ಇತ್ತ ಗಮನ ಹರಿಸಬೇಕಾಗಿದೆ.

ಟಿ.ಎ.ಎನ್. ಖಂಡಿಗೆ, ಮೂಡುಬಿದಿರೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !