ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ವನ್ಯಜೀವಿ ಬೇಟೆ: ಸಂಪೂರ್ಣ ನಿಯಂತ್ರಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನುಕುಲವನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗವಾದ ಕೋವಿಡ್‌ಗೆ ಮೂಲ, ವನ್ಯಜೀವಿಗಳನ್ನು ಆಹಾರಕ್ಕಾಗಿ ಬಳಸಿದ್ದು ಎಂದು ಕೆಲವು ವರದಿಗಳು ಹೇಳಿವೆ. ಮನುಷ್ಯ ಏನನ್ನು ತಿನ್ನಬೇಕು ಏನನ್ನು ತಿನ್ನಬಾರದು ಎಂದು ವೈಯಕ್ತಿಕವಾಗಿ ನಿರ್ಧರಿಸಲು ಇದು ಸುಸಮಯ. ಮನುಷ್ಯ ಮೂಲತಃ ಮಿಶ್ರಾಹಾರಿ. ಆತನ ಊಟದ ಮೆನುವಿನಲ್ಲಿ ಸಸ್ಯವೂ ಇದೆ ಮಾಂಸವೂ ಇದೆ. ಸಸ್ಯಾಹಾರ ಪೂರೈಸುವ ಸಲುವಾಗಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದ್ದು ಇವನ್ನು ಸಂಸ್ಕರಿಸಿ ಬಳಸಲಾಗುತ್ತದೆ. ಅದೇ ರೀತಿ ಮಾಂಸಾಹಾರ ಪೂರೈಸುವ ಸಲುವಾಗಿ ವಿವಿಧ ಪ್ರಾಣಿಗಳನ್ನು ಬೆಳೆಸಲಾಗುತ್ತದೆ. ಇದು ಸಹಜವಾದ ಆಹಾರ ಪದ್ಧತಿ.

ಆದರೆ ಇದರ ಜೊತೆಗೆ ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕುವ ಜೀವಿಗಳನ್ನು ಕೆಲವರು ಆಹಾರಕ್ಕಾಗಿ ಬೇಟೆಯಾಡುವುದು ಸರಿಯಲ್ಲ. ಏಕೆಂದರೆ ವನ್ಯಜೀವಿಗಳು ಪರಿಸರ ಸಮತೋಲನದಲ್ಲಿ ನಿಣಾ೯ಯಕ ಪಾತ್ರ ವಹಿಸುತ್ತವೆ. ಆದರೆ ಈ ಅವಕಾಶವು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಸಲಾಗುವ ಸಾಕುಪ್ರಾಣಿಗಳಿಗೆ ಇರುವುದಿಲ್ಲ. ಈ ಕಾರಣಕ್ಕಾಗಿ, ವಾಣಿಜ್ಯ ಉದ್ದೇಶದಿಂದ ಸಾಕಲಾಗುವ ಪ್ರಾಣಿಗಳನ್ನು ತಿನ್ನುವುದರಲ್ಲಿ ತಪ್ಪಿಲ್ಲ.

ಇನ್ನು ಮಿತಿ ಮೀರಿದ ಜನಸಂಖ್ಯೆಗೆ ತೃಪ್ತಿಕರವಾಗಿ ಆಹಾರ ಪೂರೈಕೆ ಮಾಡಲು ಸಾಧ್ಯವಿಲ್ಲದೇ ವನ್ಯಜೀವಿಗಳನ್ನು ಬಳಸಬೇಕಿದೆ ಎಂಬ ವಾದದಲ್ಲಿ ಹುರುಳಿಲ್ಲ. ಕೃಷಿಗೆ ಹೆಚ್ಚಿನ ಉತ್ತೇಜನ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಸಾಧ್ಯವಾದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಅದೂ ಅಲ್ಲದೆ ವನ್ಯಜೀವಿಗಳು ಮಾಂಸಕ್ಕಾಗಿ ಬಳಸುವ ಸಾಕುಪ್ರಾಣಿಗಳಂತೆ ಯಾವುದೇ ಔಷಧೋಪಚಾರಕ್ಕೆ ಒಳಪಟ್ಟಿರುವುದಿಲ್ಲ. ಅವು ಬದುಕುವ ವಾತಾವರಣದಲ್ಲಿ ಸಹಜವಾಗಿ ಕೆಲವು ವೈರಸ್‌ಗಳು ಅವುಗಳ ದೇಹ ಸೇರಿರುತ್ತವೆ. ಹೀಗಾಗಿ ವನ್ಯಜೀವಿಗಳನ್ನು ಬೇಟೆಯಾಡಿ ತಿನ್ನುವ ಖಯಾಲಿ ತಪ್ಪಬೇಕಿದೆ. ಜೊತೆಗೆ ವನ್ಯಜೀವಿಗಳನ್ನು ಬೇಟೆಯಾಡುವುದನ್ನು ಅಂತರ
ರಾಷ್ಟ್ರೀಯ ಮಟ್ಟದ ಅಪರಾಧವೆಂದು ಪರಿಗಣಿಸಿ,ಪ್ರಪಂಚದಾದ್ಯಂತ ಏಕರೂಪದ ಕಠಿಣ ಶಿಕ್ಷೆ ವಿಧಿಸಬೇಕು.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ,
ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು