ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ದೇಹದ ಬೇಕು-ಬೇಡ ಅರಿಯಬೇಕಿದೆ

ವಾಚಕರ ವಾಣಿ
Last Updated 3 ನವೆಂಬರ್ 2021, 22:00 IST
ಅಕ್ಷರ ಗಾತ್ರ

ಉತ್ತಮ ಆರೋಗ್ಯಕ್ಕೆ ವ್ಯಾಯಾಮ, ಅಂಗಸಾಧನೆ, ಆಟೋಟಗಳು ಅವಶ್ಯಕ. ತನ್ನ ನಿತ್ಯದ ಕಾಯಕದಲ್ಲಿಯೇ ಈ ದೈಹಿಕ ಕಸರತ್ತುಗಳು ಒಳಗೊಂಡಿದ್ದರೆ ಇವು ಯಾವುವೂ ದೇಹಕ್ಕೆ ಅತ್ಯವಶ್ಯಕವಲ್ಲ, ಊಟ-ನಿದ್ರೆ ಮಾತ್ರ ಸರಿಯಾಗಿದ್ದರೆ ಸಾಕು. ಈ ರೀತಿಯ ಜೀವನಕ್ರಮ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ. ಕಾಲಕ್ರಮೇಣ ಗರಡಿ ಮನೆಗಳು, ಕುಸ್ತಿಕಣಗಳು ಕಾಣೆಯಾಗಿ, ಆಟದ ಮೈದಾನಗಳು ಚಾಲ್ತಿಗೆ ಬಂದವು. ಈಗ ಆಟದ ಮೈದಾನಗಳೆಲ್ಲಾ ಸೈಟುಗಳಾಗಿ, ಅದೇ ಸೈಟಿನ ಮೇಲೆ ಕಟ್ಟಿರುವ ಮಹಡಿಯಲ್ಲಿ ಜಿಮ್ಮುಗಳು ಎಲ್ಲೆಂದರಲ್ಲಿ ಗೋಚರಿಸುತ್ತವೆ. ಪ್ರಾರಂಭದಲ್ಲಿ ಕ್ರೀಡಾಪಟುಗಳು, ದೇಹದಾರ್ಢ್ಯ ಪ್ರದರ್ಶನಕಾರರು ಮಾತ್ರ ಜಿಮ್ಮುಗಳ ಬಾಗಿಲು ತಟ್ಟುತ್ತಿದ್ದರು, ನಂತರ ಸಿನಿಮಾ ನಟರು, ಒಂದೇ ಕಡೆ ಕುಳಿತು ಕೆಲಸ ಮಾಡುವವರು ಜಿಮ್ಮುಗಳಿಗೆ ಹೋಗಲು ಪ್ರಾರಂಭಿಸಿದರು. ಈಗ ನಗರದಲ್ಲಿ ಜಿಮ್ಮಿಗೆ ಹೋಗುವುದು ಒಂದು ಖಯಾಲಿ ಆಗಿದೆ.

ಇದರ ಮರ್ಮ ಅರಿತ ದಂಧೆಕೋರರು ಹಣ ಸುರಿದು ಲಾಭದ ರುಚಿ ನೋಡುತ್ತಿದ್ದಾರೆ. ಈ ದಂಧೆಗೆ ಸಿನಿಮಾ ನಟರು, ಸೆಲೆಬ್ರಿಟಿಗಳೇ ಜಾಹೀರಾತುದಾರರಾದರು. ಇಲ್ಲಿ ಉತ್ತಮ ಆರೋಗ್ಯಕ್ಕಿಂತ ಉತ್ತಮ ಅಂಗಸೌಷ್ಠವಕ್ಕೆ ಪ್ರಾಮುಖ್ಯ ಕೊಡಲಾಗುತ್ತಿದೆ. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಎಚ್ಚೆತ್ತ ಜನ ಜಿಮ್ಮುಗಳ ಕಡೆಗೆ ಬೆಟ್ಟು ಮಾಡುತ್ತಿದ್ದಾರೆ ಮತ್ತು ಜಿಮ್ಮುಗಳನ್ನು ಗುಮ್ಮನಂತೆ ಕಾಣುತ್ತಿದ್ದಾರೆ.

ಅತಿಯಾದರೆ ಅಮೃತವೂ ವಿಷವಾಗುತ್ತದೆ. ಯಾವುದೇ ವ್ಯಕ್ತಿಯ ದೇಹವು ತನ್ನ ಒಳಗುಟ್ಟನ್ನು ಆ ವ್ಯಕ್ತಿಗೂ ಮತ್ತು ವೈದ್ಯರಿಗೂ ಒಮ್ಮೆಲೇ ಬಿಟ್ಟುಕೊಡುವುದಿಲ್ಲ. ಹಲವಾರು ಪರೀಕ್ಷೆಗಳ ನಂತರವೇ ದೌರ್ಬಲ್ಯಗಳು ಗೋಚರಿಸುತ್ತವೆ. ಈ ರೀತಿಯ ದೇಹದ ಬೇಕು-ಬೇಡಗಳನ್ನು ಅರಿತ ನಂತರವೇ ಮಿತಿಯಾದ ಕಸರತ್ತು ಮಾಡಲು ಮುಂದಾದರೆ
ಅವಘಡಗಳನ್ನು ತಪ್ಪಿಸಬಹುದು ಮತ್ತು ಗುಮ್ಮನನ್ನು ಓಡಿಸಬಹುದು.

ಗಣಪತಿ ನಾಯ್ಕ್,ಕಾನಗೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT