ಶನಿವಾರ, ಜೂಲೈ 4, 2020
28 °C

ವಿಧ್ವಂಸಕ ಮಿಡತೆ: ರೈತರಿಗೆ ಸಿಗಲಿ ಅಭಯ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಕೋಟ್ಯಂತರ ಸಂಖ್ಯೆಯಲ್ಲಿ ಬಂದು, ಹಸಿರು ಹೊಲಗಳಲ್ಲಿನ ಬೆಳೆಯನ್ನು ತಿಂದುಹೋಗುವ ಮರುಭೂಮಿ ಮಿಡತೆಗಳ ಗುಂಪು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಹಲವು ಜಿಲ್ಲೆಗಳಿಗೆ ಲಗ್ಗೆ ಇಟ್ಟು ಆತಂಕ ಸೃಷ್ಟಿಸಿರುವುದನ್ನು ತಿಳಿದು (ಪ್ರ.ವಾ., ಮೇ 25), ಚಿಕ್ಕಂದಿನಲ್ಲಿ ನನಗಾದ ಅನುಭವ ನೆನಪಾಗುತ್ತಿದೆ. ಬಹುಶಃ ಅದು 1960- 61 ಇರಬಹುದು. ನಾನು, ಮಾಧ್ಯಮಿಕ ಶಾಲೆಯನ್ನು ನನ್ನಕ್ಕನ ಊರಿನಲ್ಲಿ ಓದುತ್ತಿದ್ದೆ. ಅಂದು ಭಾನುವಾರವಿತ್ತು. ನಮ್ಮ ಮುಖ್ಯೋಪಾಧ್ಯಾಯ ಚಂದ್ರಯ್ಯ ಅವರ ಹಿರೇಹಳ್ಳದ ಹೊಲಕ್ಕೆ ಅವರ ಕುಟುಂಬದೊಂದಿಗೆ ಹೋಗಿದ್ದೆ. ಆಗ ಅಲ್ಲಿ ಇದ್ದಕ್ಕಿದ್ದಂತೆ ಕಪ್ಪನೆಯ ಮೋಡ ಆವರಿಸಿತು. ನಾವೆಲ್ಲ ಇದೇನು ಎಂದು ಆಕಾಶದ ಕಡೆಗೆ ಮುಖ ಮಾಡುವಷ್ಟರಲ್ಲಿ ನೋಡನೋಡುತ್ತಿದ್ದಂತೆಯೇ ಪಟ ಪಟ ಸಪ್ಪಳದೊಂದಿಗೆ ಗುಬ್ಬಿ ಗಾತ್ರದ ಮಿಡತೆ
ಗಳು ಇಡೀ ಹೊಲವನ್ನು ಮುತ್ತಿದವು. ಐದಾರು ನಿಮಿಷಗಳಲ್ಲಿ ಅಲ್ಲಿದ್ದ ಎಲ್ಲ ಬೆಳೆಯನ್ನೂ ತಿಂದು ಹಾಳುಗೆಡವಿದವು. ನಮ್ಮ ಮಾಸ್ತರರು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ತಲೆಯ ಮೇಲೆ ಕೈ ಹೊತ್ತು ಊರಿಗೆ ಮರಳಿದರು.

ಊರಲ್ಲಿ ಅದೇ ಸುದ್ದಿ. ಆ ಮಿಡತೆಗಳಿಂದಾಗಿ ರೈಲು, ಬಸ್ಸುಗಳ ಸಂಚಾರವೂ ನಿಂತಿದ್ದಿತಂತೆ, ಕೆಲವರು ಕಣ್ಣು ಕಳೆದುಕೊಂಡಿದ್ದರಂತೆ... ಹೀಗೆ ಸುದ್ದಿಗಳು ಹರಿದಾಡಿದ್ದವು. ನನಗೋ ಅವು ಎಲ್ಲಿಂದ, ಹೇಗೆ ಬಂದವು ಎಂದು ತಿಳಿಯುವ ಕುತೂಹಲವಿತ್ತು. ಆನಂತರ, ಲಾರಾ ಇಂಗಲ್ಸ್ ವೈಲ್ಡರ್‌ ಅವರ ಕಾದಂಬರಿ ಓದಿದ ನಂತರ, ಈ ಮಿಡತೆಗಳ ತವರು ಅಮೆರಿಕ ಎಂದು ತಿಳಿದೆನಾದರೂ ಸುಮಾರು 13 ಸಾವಿರ ಕಿ.ಮೀ. ದೂರವನ್ನು ಅವು ಹೇಗೆ ಕ್ರಮಿಸಿದವು ಎಂಬ ಜಿಜ್ಞಾಸೆ ಇದ್ದೇ ಇತ್ತು. ಆದರೆ, ಈಗಿನ ಸುದ್ದಿ ಓದಿದಾಗ, ಶತ್ರು ಬಗಲಲ್ಲೇ ಇರುತ್ತಾನೆ ಎಂಬುದು ಅರಿವಾಯಿತು. ಇಂತಹ ಮಿಡತೆಗಳು ಹಾದು ಹೋಗುವ ಕಡೆ ಹಸಿರು ಬೆಳೆಯೆಲ್ಲಾ ಸರ್ವನಾಶವಾಗುತ್ತದೆ. ಹೀಗಾಗಿ ಸರ್ಕಾರವು ರೈತರ ಪರವಾಗಿ ನಿಲ್ಲಬೇಕು.

ಶರಣಗೌಡ ಎರಡೆತ್ತಿನ, ಚಿತ್ರದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು