ಶನಿವಾರ, ಜನವರಿ 16, 2021
27 °C

ಅರ್ಹತೆಯ ಮಾನದಂಡ ಕಾಲಕಾಲಕ್ಕೆ ಬದಲಾಗುತ್ತದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈ ಹಿಂದಿನ ಶೈಕ್ಷಣಿಕ ವರ್ಷದ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸುವ ಸರ್ಕಾರದ ನಿರ್ಧಾರದಿಂದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಇಲ್ಲದಂತಾಗಿದೆ ಎಂದು ಸುಖೇಶ ಕೆ.ಬಿ. ಹೇಳಿದ್ದಾರೆ (ವಾ.ವಾ., ನ. 25). ಅವರು ಬರೆದಿರುವಂತೆ, ಯುಜಿಸಿ ನಿಯಮಾವಳಿ ಪ್ರಕಾರ, ಎನ್ಇಟಿ, ಎಸ್ಎಲ್ಇಟಿ ಉತ್ತೀರ್ಣರಾಗದಿರುವವರು ಉಪನ್ಯಾಸಕರಾಗಲು ಅರ್ಹರಲ್ಲ ಎಂಬುದು ಸರಿ. ಆದರೆ 2009ರವರೆಗೂ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ಸ್ನಾತಕೋತ್ತರ ಪದವಿಯೊಂದೇ ಅರ್ಹತೆಯಾಗಿತ್ತು. ಬಳಿಕ ಎಂ.ಫಿಲ್ ಕಡ್ಡಾಯಗೊಳಿಸಲಾಯಿತು. ಇತ್ತೀಚೆಗೆ ಎನ್ಇಟಿ, ಎಸ್ಎಲ್ಇಟಿ ಅಥವಾ ಪಿಎಚ್.ಡಿ ಕಡ್ಡಾಯವಾಗಿದೆ. ಮುಂದೆ ಬೇರೆ ಬೇರೆ ಅರ್ಹತೆಗಳು ಬರಬಹುದು. ಆ ಬಳಿಕ ಈ ಅರ್ಹತೆಗಳೂ ಬದಲಾಗಬಹುದು. ಆಯಾ ಕಾಲಘಟ್ಟಕ್ಕೆ ತಕ್ಕಂತೆ ನಿಯಮಾವಳಿಗಳು ಬದಲಾಗುತ್ತವೆ.

ಹಿಂದಿನಿಂದಲೂ ಸೇವೆ ಸಲ್ಲಿಸುತ್ತಿರುವವರ ಅರ್ಹತೆಯನ್ನು ಈಗಿನ ನಿಯಮಗಳಿಗೆ ಹೋಲಿಸುವುದು ಸರಿಯಲ್ಲ. 2009ಕ್ಕಿಂತ ಮುಂಚೆಯಿಂದಲೂ ಅನೇಕರು ಅತಿಥಿ ಉಪನ್ಯಾಸಕರಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಕೆಲವರು 15- 20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದು, ಇದೇ ಸೇವೆಯಲ್ಲಿ ವಯೋಮಾನ ಕಳೆದಿದ್ದಾರೆ. ಏಕಾಏಕಿ ಸೇವೆಯಿಂದ ಬಿಡುಗಡೆ ಮಾಡಿದರೆ ಅವರ ಗತಿ ಏನು? ಅರ್ಹತೆ ಇದ್ದವರು ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗಿ ಬರಲಿ. ಆಗ ಕಾರ್ಯಭಾರ ಇಲ್ಲದಿದ್ದರೆ ಸಹಜವಾಗಿಯೇ ಅತಿಥಿ ಉಪನ್ಯಾಸಕರು ಸೇವೆಯಿಂದ ಹೊರಬೀಳುತ್ತಾರೆ. ಹೀಗಾಗಿ, ಅರ್ಹತೆಯ ಹೆಸರಿನಲ್ಲಿ ಅತಿಥಿ ಉಪನ್ಯಾಸಕರನ್ನು ಈಗ ಸೇವೆಯಿಂದ ಬಿಡುಗಡೆಗೊಳಿಸುವುದು ಸರಿಯಲ್ಲ.
–ಅಶೋಕ ಓಜಿನಹಳ್ಳಿ, ಕೊಪ್ಪಳ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.