ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಲೆ-ಜಿಯಲ್ಲಿ ಉದ್ಯೋಗ ಕಡಿತ: ಹಳ್ಳಿಗರು ಬಿಸ್ಕತ್‌ ಕೊಳ್ಳಬಲ್ಲರು, ಆದರೆ...

Last Updated 23 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

‘ಗ್ರಾಮೀಣ ಪ್ರದೇಶದಲ್ಲಿ ಬಿಸ್ಕತ್‌ಗೆ ಬೇಡಿಕೆ ಕಡಿಮೆಯಾಗಿರುವುದರಿಂದ ತಯಾರಿಕೆಯನ್ನು ಕಡಿತಗೊಳಿಸಬೇಕಾಗಿದೆ. ಹೀಗಾಗಿ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ’ ಎಂದು ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಬಿಸ್ಕತ್ ಮಾರಾಟ ವಿಭಾಗದ ಮುಖ್ಯಸ್ಥ ಮಯಂಕ್‌ ಶಾ ಹೇಳಿದ್ದಾರೆ(ಪ್ರ.ವಾ., ಆ. 22). ಬೇಡಿಕೆ ಕುಸಿಯಲು ಜಿಎಸ್‍ಟಿ ಕಾರಣವೆಂದು ಅವರು ಬೊಟ್ಟು ಮಾಡಿದ್ದಾರೆ.

ಎರಡೂವರೆ ದಶಕಗಳಿಂದ ನಾನು ನನ್ನ ಹಳ್ಳಿಯಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದು, ಅಂದಿನಿಂದಲೂಪಾರ್ಲೆ-ಜಿ ಬಿಸ್ಕತ್ ಮಾರಾಟ ಮಾಡುತ್ತಿದ್ದೇನೆ. ಅಲ್ಲದೆ ಬಾಲ್ಯದಲ್ಲಿ ವಿದ್ಯುತ್, ರಸ್ತೆ ಸಂಪರ್ಕವೇ ಇಲ್ಲದ ಕುಗ್ರಾಮದ ನನ್ನ ಅಜ್ಜನ ಅಂಗಡಿಯಲ್ಲೂ ಈ ಕಂಪನಿಯ ಬಿಸ್ಕತ್ ನೋಡಿದ್ದೇನೆ. ತಿಂದು ಬೆಳೆದಿದ್ದೇನೆ. ಪಾರ್ಲೆ-ಜಿ ಸೇರಿದಂತೆ ಹಳೆಯ ಕೆಲವು ಉತ್ಪನ್ನಗಳು ಗ್ರಾಮೀಣ ಭಾಗದಲ್ಲಿ ಇಂದಿಗೂ ಜನಪ್ರಿಯ ಬ್ರ್ಯಾಂಡ್‌ಗಳೇ ಆಗಿವೆ. ಗ್ರಾಮೀಣರು ಬಿಸ್ಕತ್ ಕೊಳ್ಳಲಾರದಷ್ಟು ಬಡವರಾಗಿಲ್ಲ. ಮಕ್ಕಳ ಕಾರ್ಟೂನ್ ಹಾಗೂ ಅಲ್ಲಿನ ಪಾತ್ರಗಳ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕಿರುವ ಅನಾರೋಗ್ಯಕರ ಜಂಕ್‌ಫುಡ್ ಕಡೆ ಈಗಿನ ಮಕ್ಕಳು ಆಕರ್ಷಿತರಾಗಿರುವುದು ಬಿಸ್ಕತ್ ವಹಿವಾಟಿನ ಮೇಲೆ ಪರಿಣಾಮ ಬೀರಿರಬಹುದು. ಅಲ್ಲದೆ ಕಂಪನಿಯ ಸ್ವಯಂಕೃತ ಅಪರಾಧದ ಪ್ರಭಾವವೂ ಇರಬಹುದು. ಜನಪ್ರಿಯತೆಯಉತ್ತುಂಗಕ್ಕೇರಿದಾಗ ಕಂಪನಿಯು ಉತ್ಪಾದನೆ ಹಾಗೂ ಸರಬರಾಜಿನ ಕಡೆ ಗಮನಹರಿಸದಿದ್ದುದು, ವಿತರಕರು, ದಾಸ್ತಾನುಗಾರರು, ಮಾರಾಟಗಾರರಿಗೆ ಲಾಭಾಂಶ ಹಂಚಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದು ವಹಿವಾಟಿನ ಕುಸಿತಕ್ಕೆ ಕಾರಣವಾಗಿರಬೇಕು.

ಬೇರೆ ಕಂಪನಿಗಳ ಬಿಸ್ಕತ್ ಮಾರಾಟ ಮಾಡದೆ ಇದೇ ಬ್ರ್ಯಾಂಡ್‍ಗೆ ಅಂಟಿಕೊಂಡಿದ್ದ ಆ ಕಾಲದಲ್ಲಿ ನನಗೆ ಮೂರ್ನಾಲ್ಕು ವಾರಗಳವರೆಗೂ ಬಿಸ್ಕತ್‌ ಲಭ್ಯ ವಿಲ್ಲದೆ ಪರದಾಡಿದ್ದೇನೆ. ನಗರದ ಹತ್ತಾರು ಸಗಟು ಮಾರಾಟ ಮಳಿಗೆ ಹಾಗೂ ವಿತರಕರ ಬಳಿಯೂ ಅಲೆದಿದ್ದೇನೆ. ‘ಏನ್ಮಾಡೋದು ಕಂಪನಿ ಕೊಡೋದುಗೋದಾಮಿನ ಬಾಡಿಗೆಗೂ ಸಾಲಲ್ಲ’ ಎಂಬ ಅವರ ಗೊಣಗಾಟವನ್ನು ಕೇಳಿದ್ದೇನೆ. ಯಾವುದೇ ಉತ್ಪನ್ನ ಗ್ರಾಹಕನಿಗೆ ತಲುಪುವಲ್ಲಿ ವ್ಯಾಪಾರಿಯ ಪಾತ್ರ ಮಹತ್ವದ್ದಾಗಿರುತ್ತದೆ. ಆತನಿಗೆ ಹೆಚ್ಚಿನ ಲಾಭ ಯಾವುದರಲ್ಲಿ ಇದೆಯೋ ಆ ಉತ್ಪನ್ನವನ್ನು ಆತ ಹೆಚ್ಚು ಒತ್ತುಕೊಟ್ಟು ಮಾರುತ್ತಾನೆ. ಶಾ ಅವರೇ, ಈಗಲೂ ಕಾಲ ಮಿಂಚಿಲ್ಲ. ಕಂಪನಿಯ ಅನಗತ್ಯ ವೆಚ್ಚ, ಸೋರಿಕೆ ತಡೆಗಟ್ಟಿ, ಗುಣಮಟ್ಟದ ಉತ್ಪನ್ನ, ಶೀಘ್ರ ಸರಬರಾಜು ವ್ಯವಸ್ಥೆ, ಕೊನೆ ಹಂತದ ಸಣ್ಣ ವ್ಯಾಪಾರಿಯ ಲಾಭಾಂಶದ ಕಡೆ ಗಮನಹರಿಸಿದರೆ, ಕಂಪನಿಯ ಉದ್ಯೋಗಿಗಳಹೊಟ್ಟೆ ಮೇಲೆ ಹೊಡೆಯುವ ಪ್ರಸಂಗ ಬರಲಿಕ್ಕಿಲ್ಲ ಅಲ್ಲವೇ?

-ದೇವರಾಜ ದೊಡ್ಡಗೌಡ್ರ,ನಾಗವಂದ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT