ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಇಂಧನ ಬೆಲೆ; ಆಶ್ವಾಸನೆ ಜಾರಿಗೆ ಬರಲಿ

ಅಕ್ಷರ ಗಾತ್ರ

ಪೆಟ್ರೋಲ್ - ಡೀಸೆಲ್ ದರ ₹ 100ರ ಗಡಿ ದಾಟಲು ಪ್ರಮುಖವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಏರುತ್ತಿರುವ ಕಚ್ಚಾ ತೈಲದ ಬೆಲೆಯೇ ಕಾರಣ ಎನ್ನಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸಿದರೆ, ಅದು ಶುದ್ಧ ಸುಳ್ಳು ಎಂದು ಸಾಬೀತಾಗುತ್ತಿದೆ. ಉದಾಹರಣೆಗೆ, 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಲಿಗೆ 110 ಡಾಲರಿನ ಆಸುಪಾಸಿನಲ್ಲಿತ್ತು. ಆಗ ಭಾರತದಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 72ರ ಆಸುಪಾಸಿನಲ್ಲಿತ್ತು. ಈಗ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ 72 ಡಾಲರ್ ಇದೆ. ಅದರ ಆಧಾರದಲ್ಲಿ ಈಗ ನಮ್ಮಲ್ಲಿ ಪೆಟ್ರೋಲ್ ಬೆಲೆ ₹ 52 ಇರಬೇಕಾಗುತ್ತದೆ.

ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ 11 ಬಾರಿ ಅಬಕಾರಿ ಸುಂಕವನ್ನು ವಿಧಿಸಿ ₹ 2.65 ಲಕ್ಷ ಕೋಟಿ ಆದಾಯವನ್ನು ಸರ್ಕಾರ ಗಳಿಸಿದೆ. ನೆನಪಿಡಬೇಕಾದ ಅಂಶವೆಂದರೆ, ಆ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ 110 ಡಾಲರಿನಿಂದ 35 ಡಾಲರಿಗೆ ಬಂದು, ತದನಂತರ ಈಗ 72 ಡಾಲರ್‌ನಲ್ಲಿ ನಿಂತಿದೆ. ಮತ್ತೊಂದು ಅಂಶವೆಂದರೆ, ತೈಲ ಬೆಲೆ ಏರಿಕೆಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ, ಅದು ‘ಸ್ವಾಯತ್ತ ತೈಲ ಕಂಪನಿ’ಗಳ ಜವಾಬ್ದಾರಿ ಎಂದು ಸರ್ಕಾರ ನುಣುಚಿಕೊಳ್ಳುತ್ತಿದೆ. ಇತ್ತೀಚೆಗೆ ಐದು ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ತನಗೆ ಮುಜುಗರ ಉಂಟು ಮಾಡುತ್ತದೆ ಎಂದು ಈ ಕಂಪನಿಗಳ ಮೇಲೆ ಪ್ರಭಾವ ಬೀರಿ ಬೆಲೆಗಳು ಏರದಂತೆ ನೋಡಿಕೊಂಡಿದೆ. ಈ ಸಂಗತಿಯನ್ನು ಅರಿಯಲಾರದಷ್ಟು ದಡ್ಡರಲ್ಲ ನಮ್ಮ ದೇಶದ ಮತದಾರರು!

ಸಂಪಾದಕೀಯವು (ಪ್ರ.ವಾ., ಜೂನ್‌ 10) ಗುರುತಿಸಿರುವಂತೆ, ಹಿಂದೆ ಇದ್ದ ಆಡಳಿತಾತ್ಮಕ ಬೆಲೆ ನಿಗದಿ ವಿಧಾನವನ್ನು ವಾಜಪೇಯಿ ನೇತೃತ್ವದ ಸರ್ಕಾರ ಕಿತ್ತುಹಾಕುವಾಗ ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದರೆ ದೇಶದಲ್ಲಿಯೂ ಬೆಲೆ ತಗ್ಗುತ್ತದೆ’ ಎಂದು ನೀಡಿದ್ದ ಆಶ್ವಾಸನೆಯನ್ನು ಈಗಿನ ಸರ್ಕಾರ ವಸ್ತುಶಃ ಜಾರಿಗೆ ತರುವುದು ಒಳ್ಳೆಯದು. ತೈಲ ಬೆಲೆಗಳ ಇಳಿಕೆಯಿಂದ ಹಣದುಬ್ಬರ ಕಡಿಮೆಯಾಗಿ, ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಇಳಿದು ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತಾಗಲಿ.

-ಟಿ.ಸುರೇಂದ್ರ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT