ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 05 ಏಪ್ರಿಲ್ 2024

Published 5 ಏಪ್ರಿಲ್ 2024, 0:14 IST
Last Updated 5 ಏಪ್ರಿಲ್ 2024, 0:14 IST
ಅಕ್ಷರ ಗಾತ್ರ

ಅರ್ಧಂಬರ್ಧ ಕೊಳವೆಬಾವಿ: ಕಠಿಣ ಶಿಕ್ಷೆಯಾಗಲಿ

ಸಣ್ಣ ಮಕ್ಕಳು ಆಗಾಗ್ಗೆ ಕೊಳವೆಬಾವಿಗೆ ಬೀಳುವ ಪ್ರಕರಣಗಳು ನಡೆಯುತ್ತಲೇ ಇವೆ. ಕೊಳವೆಬಾವಿಗಳನ್ನು ಅರ್ಧಂಬರ್ಧ ಕೊರೆಸಿ ಹಾಗೇ ಬಿಡುವಂತಿಲ್ಲ, ಒಂದುವೇಳೆ ಹಾಗೇನಾದರೂ ಬಿಟ್ಟರೆ, ಅಂತಹವರನ್ನು ದಂಡ, ಶಿಕ್ಷೆಗೆಗುರಿಪಡಿಸಲಾಗುವುದು ಎಂಬ ಆದೇಶವನ್ನು ಕೆಲ ವರ್ಷಗಳ ಹಿಂದೆ ಸರ್ಕಾರ ಹೊರಡಿಸಿದ್ದ ನೆನಪಿದೆ. ಕೊಳವೆ ಬಾವಿಯನ್ನು ಮುಚ್ಚದೇ ಬಿಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

–ವಿ.ಪಾಂಡುರಂಗಪ್ಪ, ಬೆಂಗಳೂರು

ಮಾದರಿಯಾಗಲಿ ಮಳೆ ನೀರು ಸಂಗ್ರಹ

ಒಡಿಶಾದಲ್ಲಿ ನಾರಿಶಕ್ತಿಯ ಮೂಲಕ ನೀರು ನಿರ್ವಹಣೆ ಕಾರ್ಯಕ್ಕೆ ಅಲ್ಲಿನ ರಾಜ್ಯ ಸರ್ಕಾರ ಮುಂದಾಗಿರುವುದು ಮಾದರಿ ಕಾರ್ಯ ಎಂದು ಬಿ.ಸಿ.ಪ್ರಭಾಕರ್ ಮತ್ತು ಕೆ.ಎನ್‌.ರಾಧಿಕಾ ತಮ್ಮ ಲೇಖನದಲ್ಲಿ (ಪ್ರ.ವಾ., ಏ. 3) ಶ್ಲಾಘಿಸಿದ್ದಾರೆ. ಆದರೆ ಈ ಮಾದರಿಯ ನೀರು ನಿರ್ವಹಣೆಯಲ್ಲಿ ‘ಡ್ರಿಂಕ್ ಫ್ರಂ ಟ್ಯಾಪ್‌’ ಎಂಬ ಪರಿಕಲ್ಪನೆಯಡಿ ಬಳಸುವ ನೀರಿಗೆ ಮೀಟರ್ ಅಳವಡಿಸಿ ಹೆಚ್ಚು ಹಣ ಪಡೆಯಲಾಗುತ್ತಿದೆ. ಇದರ ಬದಲು, ಉಚಿತವಾಗಿ ದೊರೆಯುವ ಪರಿಶುದ್ಧ ಮಳೆ ನೀರಿನ ಸಂಗ್ರಹವು ದೇಶಕ್ಕೆ ಮಾದರಿ. ಇದರಲ್ಲಿ ಮೀಟರ್ ಅಳವಡಿಕೆ ಇಲ್ಲ, ನೀರಿನ ಪರೀಕ್ಷೆ ಮಾಡಬೇಕಿಲ್ಲ. ಮನೆಯ ತಾರಸಿ ಮೇಲೆ ಬೀಳುವ ಮಳೆ ನೀರನ್ನು ಶೋಧಿಸಿ, ಸಂಗ್ರಹಿಸಿ ಬಳಸುವುದು. ಹೊಲದಲ್ಲಿ ಬಿದ್ದ ಮಳೆ ನೀರನ್ನು ಕೃಷಿ ಹೊಂಡದಲ್ಲಿ, ಗ್ರಾಮದ ಮಳೆ ನೀರನ್ನು ಕೆರೆಗಳಲ್ಲಿ ಸಂಗ್ರಹಿಸಿ, ಸಂರಕ್ಷಿಸಿ ಜಾಣ್ಮೆಯಿಂದ ಬಳಕೆ ಮಾಡಿದರೆ ಗ್ರಾಮಗಳ ಉದ್ಧಾರ ಸಾಧ್ಯವಾಗುತ್ತದೆ.

–ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ಶಿಷ್ಯವೇತನಕ್ಕೆ ಅರ್ಜಿ: ಅವಧಿ ವಿಸ್ತರಿಸಿ

ರಾಜ್ಯದಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪ್ರವೇಶಾತಿ ಹಾಗೂ ಪರೀಕ್ಷೆಗೆ ಯುಯುಸಿಎಂಎಸ್ ತಂತ್ರಾಂಶದಲ್ಲಿಯೇ ಅರ್ಜಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೆ ಎಸ್.ಸಿ.,ಎಸ್.ಟಿ., ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಎಸ್ಎಸ್‌ಪಿ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಕೆಲವು ತಿಂಗಳುಗಳಿಂದ ಈ ಎರಡೂ ಸಾಫ್ಟ್‌ವೇರ್‌ಗಳಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದು, ಇದರಿಂದ ಹಲವಾರು ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈಗ ಈ ಸಾಫ್ಟ್‌ವೇರ್‌ಗಳ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶಿಷ್ಯವೇತನಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ. ಆರ್ಥಿಕ ತೊಂದರೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊಡೆತ ಬೀಳುವಂತಾಗಿದೆ. ಹಲವು ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಈಗಾಗಲೇ ವಿಸ್ತರಿಸಲಾಗಿದೆ. ಹಾಗೆಯೇ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅರ್ಜಿ ಸಲ್ಲಿಕೆ ಅವಧಿಯನ್ನೂ ವಿಸ್ತರಿಸುವ ಮೂಲಕ ಅವರ ತೊಂದರೆಯನ್ನು ಸರಿಪಡಿಸಬೇಕು.

– ಪ್ರೀತಿ ಮಾಳವಾದೆ, ದೀಕ್ಷಾ ಮುಚ್ಚಂಡಿ, ಲಕ್ಷ್ಮಿ ಶಿವಣ್ಣ, ಮಲ್ಲಮ್ಮ ಪೂಜಾರಿ, ಶೃತಿ ಬೇಳ್ಳುಂಡಗಿ,ಸುನಂದಾ ಪಟ್ಟಣಶೆಟ್ಟಿ, ಆಸಮಾ ಪಲ್ಟನ, ಸಮೀರಾ ಖಾನ್, ವಿಜಯಪುರ

ಮಟ್ಕಾ ಪ್ರಪಂಚಕ್ಕೆ ಇಲ್ಲ ಕಡಿವಾಣ

ಅಂಕೋಲಾದಲ್ಲಿ ಮಟ್ಕಾ ಆಟ ತಹಬಂದಿಗೆ ಬರುತ್ತಿಲ್ಲ. ಪೊಲೀಸರು ಈ ವಿಷಯದಲ್ಲಿ ನಿರ್ಲಕ್ಷ್ಯವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ಪತ್ರಿಕೆಗಳು ಹಾಗೂ ಅಧಿಕಾರಿಗಳ ಮೂಲಕ ಗಮನ ಸೆಳೆದರೂ ಓಸಿ ಬುಕ್ಕಿದಾರರು ಕ್ಯಾರೇ ಅನ್ನುತ್ತಿಲ್ಲ. ಈಗ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರ ನಡುವೆಯೂ ಮಟ್ಕಾ ಬುಕ್ಕಿಗಳು ರಾಜಕೀಯ ಮಾಡಲು ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಚಿಕ್ಕಪುಟ್ಟ ಬುಕ್ಕಿಗಳಿಗೆ ‘ನೀವು ಇಂತಹದೇ ಪಕ್ಷಕ್ಕೆ ಸಹಾಯ ಮಾಡಬೇಕು’ ಎಂದು ಫರ್ಮಾನು ಹೊರಡಿಸಲು ಆರಂಭಿಸಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಇದು ಅಪಾಯಕ್ಕೆ ಕಟ್ಟಿಟ್ಟ ಬುತ್ತಿ. ಈ ಮೂಲಕ ಹಣವೂ ಅದಲುಬದಲು ಆಗುವ ಸಾಧ್ಯತೆಯಿದೆ. ಸಂಬಂಧಿಸಿದ ಅಧಿಕಾರಿಗಳು ಚುನಾವಣೆ ಮುಗಿಯುವತನಕವಾದರೂ ಮಟ್ಕಾ ಆಟಕ್ಕೆ ಕಡಿವಾಣ ಹಾಕುವುದು ಸೂಕ್ತ.

–ಚಂದ್ರಕಾಂತ ನಾಮಧಾರಿ, ಅಂಕೋಲಾ

ಬರ ಪರಿಹಾರ: ಕುರುಡು ಕಾರಣ ಸಲ್ಲ

ಕರ್ನಾಟಕವು ಬರ ಪರಿಹಾರದ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯದಿಂದ ಇದ್ದುದಲ್ಲದೆ ಮೂರು ತಿಂಗಳು ತಡವಾಗಿ ಮನವಿ ಸಲ್ಲಿಸಿದೆ ಎಂದು ಹೇಳಿದ್ದಾರೆ. ಅಂದರೆ ಇನ್ನೂ ಪರಿಹಾರ ದೊರೆಯದೇ ಇರುವುದಕ್ಕೆ ರಾಜ್ಯ ಸರ್ಕಾರ ಕಾರಣ ಎನ್ನುವುದು ಅಮಿತ್ ಶಾ ಅವರ ಅಭಿಪ್ರಾಯ. ಹಾಗಾದರೆ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಖುದ್ದಾಗಿ ಅರಿಯಲು ಕೇಂದ್ರದಿಂದ ವೀಕ್ಷಕರ ತಂಡ ಬಂದಿದ್ದು ಹೇಗೆ? ಕೇಂದ್ರವೇ ತಾನಾಗಿ ವೀಕ್ಷಕರನ್ನು ಕಳಿಸಿ ವರದಿ ತರಿಸಿಕೊಂಡಿತೇ? ರಾಜ್ಯ ಸರ್ಕಾರ ನೆರವಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು ತಾನೇ? ಸಕಾಲದಲ್ಲಿ ಮನವಿ ಸಲ್ಲಿಸದಿದ್ದಲ್ಲಿ ನೆರವು ನೀಡಬಾರದೆಂಬ ನಿಯಮ ಇರಲು ಸಾಧ್ಯವಿಲ್ಲ. ಕೇಂದ್ರದ ತಂಡ ಸಲ್ಲಿಸಿದ್ದ ವರದಿಯ ಸ್ಥಿತಿಯೇನು? ಅದರ ಶಿಫಾರಸುಗಳೇನು?

ಬರ ಪರಿಹಾರ ನಿಧಿ ಇರುವುದು ಕೇಂದ್ರವು ರಾಜ್ಯಗಳಿಗೆ ಬರ ಪರಿಸ್ಥಿತಿಯಲ್ಲಿ ನೆರವಿಗೆ ಬರಲೆಂದು. ರಾಜ್ಯ ಸರ್ಕಾರವು ಕೇಂದ್ರದ ನೆರವಿಗಾಗಿ ಮನವಿ ಸಲ್ಲಿಸಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಅಲ್ಲದೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಖುದ್ದಾಗಿ ಭೇಟಿಯಾಗಿದ್ದಾರೆ. ಹಿಂದಿನ ಆರೇಳು ತಿಂಗಳುಗಳಿಂದಲೂ ರಾಜ್ಯ ಸರ್ಕಾರ ಈ ಕುರಿತು ಪ್ರಸ್ತಾಪ ಮಾಡುತ್ತಲೇ ಇದೆ. ಒಂದು ವೇಳೆ ಸರ್ಕಾರ ತಡವಾಗಿ ಮನವಿ ಸಲ್ಲಿಸಿದ್ದರೂ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದನ್ನು ಕೇಂದ್ರ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಿರುವಾಗ, ಕೇಂದ್ರವು ಕುರುಡು ಕಾರಣ ಕೊಟ್ಟು ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಪ್ರಯತ್ನಿಸುವುದು ತರವಲ್ಲ. ನಮ್ಮ ಬಿಜೆಪಿ ಸಂಸದರು ಯಾರೂ ಈ ಬಗ್ಗೆ ಗಮನಹರಿಸಿಯೇ ಇಲ್ಲ. ಎಂಥ ದುರ್ದೈವ! ಈ ವಿಷಯದಲ್ಲಿ ಕೇಂದ್ರದ ನಡೆ ಅಕ್ಷಮ್ಯ.

–ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT