ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 06 ಏಪ್ರಿಲ್ 2024

Published 6 ಏಪ್ರಿಲ್ 2024, 0:27 IST
Last Updated 6 ಏಪ್ರಿಲ್ 2024, 0:27 IST
ಅಕ್ಷರ ಗಾತ್ರ

ಚೀನಾವನ್ನು ಹಿಮ್ಮೆಟ್ಟಿಸಬೇಕಿದೆ

ಅರುಣಾಚಲಕ್ಕೆ ಝಂಗ್ನಾನ್‌ ಎಂದು ನಾಮಕರಣ ಮಾಡಿರುವ ಚೀನಾ, ಅಲ್ಲಿನ 30 ಸ್ಥಳಗಳಿಗೆ ತನ್ನದೇಹೆಸರುಗಳನ್ನಿಟ್ಟಿರುವ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವು ಮೇ 1ರಿಂದ ಜಾರಿಗೆ ಬರಲಿರುವುದು (ಪ್ರ.ವಾ., ಏ. 2) ಕಳವಳಕಾರಿ ಸಂಗತಿ. ಚೀನಾ ಹಿಂದಿನಿಂದಲೂ ಈ ರೀತಿ ತಂಟೆ ತಕರಾರು ಮಾಡುತ್ತಿದ್ದರೂ ಭಾರತ ಕಠಿಣ ಕ್ರಮ ಕೈಗೊಂಡು ಆ ದೇಶಕ್ಕೆ ಬಿಸಿ ಮುಟ್ಟಿಸಿದ ನಿದರ್ಶನಗಳಿಲ್ಲ. ಇದಕ್ಕೆ ಕಾರಣ, ಚೀನಾದ ಸೇನೆಬಲಿಷ್ಠವಾಗಿರುವುದು. ಇಷ್ಟೇ ಅಲ್ಲದೆ ಚೀನಾವು ನಮ್ಮ ನೆರೆಹೊರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಮಾಲ್ದೀವ್ಸ್, ಭೂತಾನ್‌ ದೇಶಗಳಿಗೆ ಹಣಕಾಸು ನೆರವು ನೀಡಿ ಅವುಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಹೊರದೇಶಗಳಲ್ಲಿ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಿ ಭಾರತವನ್ನು ಕಟ್ಟಿಹಾಕಲು ಯತ್ನಿಸುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ.

ಚೀನಾ ಈ ಮೂಲಕ ಜಾಗತಿಕವಾಗಿಯೂ ಹಿಡಿತ ಸಾಧಿಸುತ್ತಿರುವುದು ಕಳವಳಕಾರಿ ಸಂಗತಿ. ಆದ್ದರಿಂದ ಭಾರತವು ಇದನ್ನು ಕಡೆಗಣಿಸದೆ ಅಮೆರಿಕ, ರಷ್ಯಾದ ಸಹಕಾರ ಪಡೆದು ಚೀನಾವನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಲಿ. ಚೀನಾದಂತೆ ಜಾಗತಿಕವಾಗಿ ತಾಂತ್ರಿಕ ಅಭಿವೃದ್ಧಿ ಹೊಂದುವ ಕಡೆ ಗಮನಹರಿಸಲಿ.

–ಮುಳ್ಳೂರು ಪ್ರಕಾಶ್, ಮೈಸೂರು

ಪರೀಕ್ಷೆಯು ‘ಅಗ್ನಿಪರೀಕ್ಷೆ’ ಆಗದಿರಲಿ

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಂತಹ ಪರೀಕ್ಷೆಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿಯೇ ನಡೆಯುತ್ತವೆ. ವರ್ಷದಿಂದ ವರ್ಷಕ್ಕೆ ಬೇಸಿಗೆಯಲ್ಲಿ ಉಷ್ಣತೆಯ ಪ್ರಮಾಣ ಏರುತ್ತಲೇ ಇರುವುದು ಎಲ್ಲರೂ ಬಲ್ಲ ಸಂಗತಿ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಂತೂ ಹೇಳತೀರದು. ಪರೀಕ್ಷಾ ಕೋಣೆಯಲ್ಲಿ ಸರಿಯಾದ ಫ್ಯಾನಿನ ವ್ಯವಸ್ಥೆ ಇರುವುದಿಲ್ಲ. ಒಂದೇ ಕೋಣೆಯಲ್ಲಿ ಎರಡು ಬ್ಲಾಕ್‌ಗಳನ್ನು ಮಾಡಲಾಗಿರುತ್ತದೆ. ಯಾವುದೋ ಒಂದು ಕಡೆ ಫ್ಯಾನ್ ಇರುತ್ತದೆ. ವಿದ್ಯುತ್ ಕೈಕೊಟ್ಟರಂತೂ ಮುಗಿಯಿತು!

ಪರೀಕ್ಷೆ ಬರೆಯುತ್ತಿರುವ ನನ್ನ ಮಗಳು ಹೇಳುವ ಪ್ರಕಾರ, ಬರೆಯುವ ಕೈ ಬೆವರಿ ಉತ್ತರ ಪತ್ರಿಕೆಯ ಪುಟ ಒದ್ದೆಯಾಗಿ ಅದರ ಮೇಲೆ ಅಕ್ಷರಗಳು ಸರಿಯಾಗಿ ಮೂಡುವುದಿಲ್ಲವಂತೆ. ಮೊದಲೇ ಆತಂಕ, ಗಾಬರಿಯಿಂದ ಬರೆಯುವ ಮಕ್ಕಳಿಗೆ ಹವಾಮಾನವೂ ಪ್ರತಿಕೂಲವಾದರೆ ಅವರ ಮನಃಸ್ಥಿತಿ ಹೇಗಿರಬಹುದು? ಬಿರು ಬಿಸಿಲಿನಲ್ಲಿಯೇ ಹೋಗಿ ಬರಬೇಕು! ಪರೀಕ್ಷೆಗಳು ‘ಅಗ್ನಿಪರೀಕ್ಷೆ’ಗಳಾಗಬಾರದಲ್ಲವೇ? ಜನವರಿ ಇಲ್ಲವೇ ಫೆಬ್ರುವರಿಯಲ್ಲಿ ಪರೀಕ್ಷೆಗಳು ನಡೆಯುವಂತೆ ಶೈಕ್ಷಣಿಕ ವರ್ಷವನ್ನೇ ಬದಲಾಯಿಸುವ ದಿಸೆಯಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು.

ಶಿವಕುಮಾರ ಬಂಡೋಳಿ, ಹುಣಸಗಿ

ಒಡಕಿನಲ್ಲಿ ಕೆಡುಕಿದೆ, ಅರಿತರೆ ಸುಖವಿದೆ

ಸಮಾಜಕ್ಕೆ ಮಹಿಳಾ ಶಕ್ತಿಯ ಪ್ರಾಮುಖ್ಯ, ಅವರ ಸಾಧನೆಗಳು, ಪ್ರತಿದಿನ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಜಗತ್ತು ಸ್ಪಂದಿಸಬೇಕಿರುವ ಅಗತ್ಯವನ್ನು ಮನದಟ್ಟು ಮಾಡಿ, ‘ಸ್ತ್ರೀ ಸಂವೇದನಾಶೀಲ’ ಸಮಾಜವನ್ನು ಕಟ್ಟುವ ಉದ್ದೇಶದಿಂದ ಆಚರಿಸುತ್ತಿರುವ ‘ಮಹಿಳಾ ದಿನಾಚರಣೆ’ ನಿಜಕ್ಕೂ ಅರ್ಥಪೂರ್ಣ. ಅದರಲ್ಲೂ, ಔಪಚಾರಿಕವಾಗಿ ಆಚರಿಸುವ ಸಂಘ ಸಂಸ್ಥೆಗಳಿಗಿಂತ, ಇತ್ತೀಚೆಗೆ ಚಿಕ್ಕಪುಟ್ಟ ಹಳ್ಳಿಗಳಲ್ಲೂ

ಮಹಿಳೆಯರೆಲ್ಲರೂ ಒಗ್ಗೂಡಿ, ಚಿಂತನೆ, ಉಪನ್ಯಾಸ, ಹಾಡು, ನಾಟಕದಂತಹ ಕಾರ್ಯಗಳ ಮೂಲಕ ಚೊಕ್ಕವಾಗಿ ಈ ದಿನವನ್ನು ಆಚರಿಸುತ್ತಿರುವುದನ್ನು ಮಹಿಳೆಯರ ಸ್ವಾವಲಂಬನೆ, ಸಶಕ್ತೀಕರಣದ ದ್ಯೋತಕವಾಗಿ ಕಾಣಬಹುದು. ಆದರೆ, ಕೆಲವು ಕಡೆ ಮಹಿಳೆಯರು ಪ್ರತ್ಯೇಕವಾಗಿ ಜಾತಿ, ಪಂಗಡಗಳ ಆಧಾರದ ಮೇಲೆ ‘ವಿಪ್ರ ಮಹಿಳಾ ದಿನಾಚರಣೆ’, ‘ಗೌಡ ಮಹಿಳೆಯರ ದಿನಾಚರಣೆ’, ‘ಲಿಂಗಾಯತ ಮಹಿಳೆಯರ ದಿನಾಚರಣೆ’ ಎಂದೆಲ್ಲ ಪ್ರತ್ಯೇಕವಾಗಿ ಮಹಿಳಾದಿನಾಚರಣೆಯಲ್ಲಿ ತೊಡಗುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಸರಿಯಲ್ಲ. ಮಹಿಳಾ ದಿನಾಚರಣೆಯ ಬಹುಮುಖ್ಯ ಉದ್ದೇಶವೇ ಯಾವುದೇ ಜಾತಿ, ಧರ್ಮ, ಪಂಗಡದ ಭೇದವಿಲ್ಲದೆ ಆಚರಣೆಯಲ್ಲಿಮಹಿಳೆಯರೆಲ್ಲರೂ ಒಗ್ಗಟ್ಟಾಗಲಿ ಎಂದು. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ, ಚಿಕ್ಕಪುಟ್ಟ ಭಿನ್ನತೆಗಳನ್ನುಹೊರತುಪಡಿಸಿದರೆ ಸವಾಲುಗಳು ಹೆಚ್ಚು ಕಡಿಮೆ ಸಮಾನ ರೂಪದವೇ ಆಗಿರುತ್ತವೆ.

ಈ ರೀತಿ ತಮ್ಮ ತಮ್ಮಲ್ಲೇ ಒಡಕು ಮೂಡಿಸಿಕೊಂಡು ಪ್ರತ್ಯೇಕವಾಗಿ ಆಚರಿಸಿಕೊಂಡರೆ ಸಮಾಜಕ್ಕೆ ತಲುಪುವ ಸಂದೇಶವೇನು? ಆಚರಣೆಯ ಉದ್ದೇಶ ಎಲ್ಲಿ ಈಡೇರುತ್ತದೆ? ಬದಲಿಗೆ, ಈ ಬೆಳವಣಿಗೆಯು ಮಹಿಳೆಯರನ್ನು ಗುಂಪುಗುಂಪುಗಳಾಗಿ ಛಿದ್ರಗೊಳಿಸಿ ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ತೊಡಕಾಗುತ್ತದೆ. ಚುನಾವಣೆಗಳು ಹತ್ತಿರವಿರುವ ಈ ಸಂದರ್ಭದಲ್ಲಿ ಜಾತಿ, ಧರ್ಮದ ಆದಾರದ ಮೇಲೆ ರಾಜಕೀಯ ಮಾಡುತ್ತಿರುವ ರಾಜಕೀಯ ಪಕ್ಷಗಳ ‘ವೋಟ್‌ ಬ್ಯಾಂಕ್‌’ ಭದ್ರಪಡಿಸಿದಂತೆ ಆಗುತ್ತದೆ. ಆಳುವವರ ‘ಒಡೆದಾಳುವ ನೀತಿ’ಗೆಬಲಿಪಶುಗಳಾಗಬೇಕಾಗುತ್ತದೆ. ಈ ದಿಸೆಯಲ್ಲಿ ಸ್ತ್ರೀಯರು ಎಚ್ಚರ ವಹಿಸಬೇಕು.

– ಆನಂದ ಎನ್.ಎಲ್‌., ಅಜ್ಜಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT