ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | 2023 ಮಾರ್ಚ್ 03

Last Updated 2 ಮಾರ್ಚ್ 2023, 23:30 IST
ಅಕ್ಷರ ಗಾತ್ರ

ಹಿತಕರವಾಗಲಿ ಹೆದ್ದಾರಿ ಪ್ರಯಾಣ

ಬೆಂಗಳೂರು- ಮೈಸೂರು ದಶ‍ಪಥ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿರುವುದರಿಂದ ಪ್ರಯಾಣಿಕರ ಬಹು ದಿನಗಳ ಕನಸು ನನಸಾಗಿದೆ. ಸಾಂಸ್ಕೃತಿಕವಾಗಿ ವಿಶ್ವಪ್ರಸಿದ್ಧಿ ಪಡೆದಿರುವ ಮೈಸೂರಿಗೆ ರಾಜ್ಯ ರಾಜಧಾನಿ ಬೆಂಗಳೂರು ನಗರದಿಂದ ಇಂಥ ಉತ್ತಮ ರಸ್ತೆಯ ಅವಶ್ಯಕತೆ ಇತ್ತು. ಆದರೆ, ಉತ್ತಮ ಪರಿಸರ ಮತ್ತು ಸೌಂದರ್ಯದ ದೃಷ್ಟಿಯಿಂದ ಈ ರಸ್ತೆ ಮಾರ್ಗವು ಮತ್ತಷ್ಟು ಪ್ರಾಮುಖ್ಯ ಹೊಂದಲು ರಸ್ತೆಯ ಎರಡೂ ಬದಿಗಳಲ್ಲಿ ಹೊಂಗೆ, ಬೇವು, ನೇರಳೆಯಂಥ ಪರಿಸರಸ್ನೇಹಿ ಮರಗಳನ್ನು ಬೆಳೆಸಬೇಕು. ಹೆದ್ದಾರಿಯ ಮಧ್ಯಭಾಗದಲ್ಲಿ ಸದಾಕಾಲ ಸುವಾಸನೆಯಿಂದ ಕೂಡಿದ ಹೂವುಗಳನ್ನು ಬಿಡುವ ಗಿಡಗಳನ್ನು ಬೆಳೆಸುವುದು ಉತ್ತಮ. ಇದರಿಂದ ನೆರಳು ಹೆಚ್ಚಾಗಿ ತಾಪಮಾನ ಕೂಡ ನಿಯಂತ್ರಣದಲ್ಲಿ ಇರುವುದರಿಂದ ಪ್ರಯಾಣ ಹಿತಕರವೆನಿಸುತ್ತದೆ.

– ಡಾ. ಡಿ.ರಾಜಗೋಪಾಲ್, ಬೆಂಗಳೂರು

***

ಇಂಥ ಪ್ರಜೆಗಳಿಂದ ನಿರೀಕ್ಷಿಸುವುದೇನು?

ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ನಾಯಕರ ಉಚಿತ ಕೊಡುಗೆಗಳು ಜೋರಾಗಿವೆ. ಎಲ್ಲ ಪಕ್ಷದ ನಾಯಕರೂ ಜನರನ್ನು ಸೆಳೆಯಲು ಒಂದಲ್ಲ ಒಂದು ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಧರ್ಮಗಳ ಮೇಲೆ ರಾಜಕಾರಣ, ಪ್ರತಿಮೆಗಳ ಸ್ಥಾಪನೆ, ಉಚಿತ ವಿದ್ಯುತ್ ಭರವಸೆ, ಪಂಚರತ್ನ ಯಾತ್ರೆ, ಸೀರೆ, ಕುಕ್ಕರ್ ವಿತರಣೆ, ಕೆಲವು ಕಾರ್ಯಕರ್ತರಿಗೆ ವಿದೇಶಿ ಕರೆನ್ಸಿ ವಿತರಣೆಯಂತಹವುಗಳ ಭರಾಟೆ ಜೋರಾಗಿದೆ. ಜನರು ನಾಮುಂದು ತಾಮುಂದು ಎಂದು ಮುಗಿಬಿದ್ದು ಕೊಡುಗೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿದರೆ, ಇಂಥ ಪ್ರಜೆಗಳಿಂದ ಎಂತಹ ಸರ್ಕಾರವನ್ನು ನಿರೀಕ್ಷಿಸಬಹುದೆಂದು ವಿಷಾದ ಉಂಟಾಗುತ್ತದೆ.

ಮತ ಹಕ್ಕು ಅತ್ಯಂತ ಪವಿತ್ರವಾದುದು. ಪ್ರಜಾಪ್ರಭುತ್ವದ ಬುನಾದಿ ಗಟ್ಟಿಗೊಳಿಸಲು ಅದು ಬಳಕೆಯಾಗಬೇಕು. ಜನರು ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ಮತದಾನ ಮಾಡುವುದು ಎಷ್ಟು ಮುಖ್ಯವೋ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡುವುದೂ ಅಷ್ಟೇ ಮುಖ್ಯ. ಇಲ್ಲವಾದರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಹೇಳಿದಂತೆ, ‘ಕೆಟ್ಟ ಸರ್ಕಾರವು ಕೆಟ್ಟ ಮತದಾರರ ಸೃಷ್ಟಿಯೇ ಸರಿ. ಅವಿವೇಕಿ ರಾಜಕಾರಣಿಗಳನ್ನು ಚುನಾಯಿಸಿದ ತಪ್ಪಿಗೆ ನಾವು ದಂಡ ತೆತ್ತು ಬುದ್ಧಿ ಕಲಿಯಬೇಕಾಗುತ್ತದೆ’.

– ಬಿ.ಎಸ್.ಚೈತ್ರ ಜಾಲಿಕಟ್ಟೆ, ಚಿತ್ರದುರ್ಗ

***

ಹಳ್ಳಿಗರಿಗೆ ಬೇಕಾಗಿದೆ ಸೀಮೆಎಣ್ಣೆ!

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯು ಹೊಗೆರಹಿತ ಅಡುಗೆ ಮನೆಯ ಕನಸು ಬಿತ್ತಿತ್ತು. ಆದರೆ ಈಗ ಅಡುಗೆ ಅನಿಲದ ಬೆಲೆ ಹೆಚ್ಚಳದಿಂದಾಗಿ ಗ್ರಾಮೀಣ ಭಾಗದ ಮಹಿಳೆಯರು ನಿಧಾನವಾಗಿ ಮತ್ತೆ ಸೌದೆ ಒಲೆಯ ಕಡೆಗೆ ಮುಖ ಮಾಡುವಂತೆ ಆಗಿದೆ. ಉಜ್ವಲಾ ಯೋಜನೆಯಡಿ ಸಬ್ಸಿಡಿ ನೀಡಲಾಗುತ್ತದೆ ಎಂದು ಸರ್ಕಾರ ಆರಂಭದಲ್ಲಿ ಹೇಳಿತ್ತು. ಅದರಂತೆ ಕೆಲ ತಿಂಗಳ ಕಾಲವಷ್ಟೇ ಸಬ್ಸಿಡಿ ಸರಿಯಾಗಿ ಬಂತು. ತದನಂತರ ಈ ಕುರಿತು ಕೇಳಿದರೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಗ್ರಾಮೀಣರು ಪ್ರತಿನಿತ್ಯ ಅಡುಗೆ ತಯಾರಿಸಲು ಕಟ್ಟಿಗೆ, ಬೆರಣಿ, ಕುಳ್ಳು, ಅತ್ತಿಯ ಕಟ್ಟಿಗೆಗೆ ಮೊರೆ ಹೋಗುತ್ತಿದ್ದಾರೆ. ಎಷ್ಟೋ ಮನೆಗಳಲ್ಲಿ ದಿನದ ದುಡಿಮೆ ₹ 150– 200 ಇರುತ್ತದೆ. ಅದರಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಸರ್ಕಾರವು ಅಡುಗೆ ಸಿಲಿಂಡರ್‌ ಬೆಲೆಯನ್ನು ಈ ರೀತಿ ದಿಢೀರನೆ ಏರಿಸುತ್ತಾ ಸಾಗಿದರೆ ಜನಸಾಮಾನ್ಯರ ಗತಿ ಏನು? ಈ ಸಿಲಿಂಡರ್‌ ಸಹವಾಸವೇ ಬೇಡ, ಮೊದಲು ಕೊಡುತ್ತಿದ್ದಂತೆ ಗ್ರಾಮೀಣ ಭಾಗಕ್ಕೆ ಸೀಮೆಎಣ್ಣೆಯನ್ನೇ ಕೊಟ್ಟುಬಿಡಲಿ.

– ನಾಗರಾಜ್ ಮನ್ನಾಪುರಿ, ದೇವದುರ್ಗ

****

ಬೆಳೆದ ಮರವೇ ಬೇಕೇಕೆ?

ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಎಎಪಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವುದು ವರದಿಯಾಗಿದೆ. ‘ಎಎಪಿಯು ರಾಜ್ಯದಲ್ಲಿ ಬೆಳೆಯುವ ಲಕ್ಷಣ ಕಾಣಿಸುತ್ತಿಲ್ಲ. ದೇಶದ ಸರ್ವ ಜನರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಅವರು ಸಂದರ್ಭವೊಂದರಲ್ಲಿ ಹೇಳಿದ್ದಾರೆ. ದಶಕಗಳ ಹಿಂದೆ ಬಿಜೆಪಿಯು ಕರ್ನಾಟಕದಲ್ಲಿ ಶೈಶವಾವಸ್ಥೆಯಲ್ಲಿತ್ತು. ಬೆರಳೆಣಿಕೆಯ ಶಾಸಕರಷ್ಟೇ ಇದ್ದರು. ಬಿ.ಎಸ್‌.ಯಡಿಯೂರಪ್ಪನವರು ರಾಜ್ಯದ ಉದ್ದಗಲ ಓಡಾಡಿ ಪಕ್ಷವನ್ನು ಕಟ್ಟಿದ್ದು ಇತಿಹಾಸ. ಅದನ್ನು ಭಾಸ್ಕರ್ ರಾವ್ ಅವರು ಗಮನಿಸಬೇಕು. ಎಲ್ಲರೂ ಬೆಳೆದ ಮರವೇ ಬೇಕೆಂದರೆ ಹೊಸ ಗಿಡ ನೆಟ್ಟು ಮರವನ್ನಾಗಿಸುವವರು ಯಾರು? ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ವಿಚಾರ ಅವರಿಗೆ ರಾತ್ರೋರಾತ್ರಿ ಹೊಳೆಯಿತೇ?

ನಿಜವಾದ ಜನಸೇವೆ ಮಾಡುವ ಹಾಗಿದ್ದರೆ ಐಪಿಎಸ್ ಅಧಿಕಾರಿಯಾಗಿಯೇ ಅವರು ಅನೇಕ ಕೆಲಸಗಳನ್ನು ಮಾಡಬಹುದಿತ್ತು. ನೌಕರಿಗೂ, ಎಎಪಿಗೂ ರಾಜೀನಾಮೆ ಕೊಟ್ಟ ಇವರು, ಚುನಾವಣೆಗೆ ಟಿಕೆಟ್ ಸಿಗಲಿಲ್ಲ ಎಂದರೆ ಬಿಜೆಪಿಗೂ ರಾಜೀನಾಮೆ ನೀಡುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲವೇನೊ.

– ಪತ್ತಂಗಿ ಎಸ್. ಮುರಳಿ, ಬೆಂಗಳೂರು

***

‘ಪ್ರಭು’ಗಳನ್ನು ನಿರಾಸೆಗೊಳಿಸದಿರಲಿ

ನರಸಿಂಹರಾಜ ಕ್ಷೇತ್ರದ ಶಾಸಕ, ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಅವರ ಸಾವಿರಾರು ಅಭಿಮಾನಿಗಳು ತೀವ್ರ ವಿರೋಧ ಸೂಚಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ತನ್ವೀರ್ ತಮ್ಮ ಕ್ಷೇತ್ರದಲ್ಲಿ ಬಹಳಷ್ಟು ಜನಪರ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ತಮ್ಮ ಮೇಲಾದ ಹಲ್ಲೆಯಿಂದ ಸಾವು ಬದುಕಿನ ‌ನಡುವೆ ಸೆಣಸಿ, ಪುನರ್ಜನ್ಮ ಪಡೆದಿದ್ದಾರೆ. ತಮಗೆ ಕೆಲವು ಆರೋಗ್ಯ ಸಮಸ್ಯೆಗಳಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ರಾಜಕೀಯ ವಲಯದಲ್ಲಿ ‘ಅಜಾತಶತ್ರು’ ಎನಿಸಿಕೊಂಡಿರುವ ತನ್ವೀರ್‌ ತಮ್ಮ ಆರೋಗ್ಯವನ್ನು ಸರಿಪಡಿಸಿಕೊಂಡು, ಸಕ್ರಿಯ ರಾಜಕೀಯದಲ್ಲಿ ಮುಂದುವರಿಯಲಿ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ಪ್ರಭುಗಳು. ಅವರನ್ನು ನಿರಾಸೆಗೊಳಿಸದಿರಲಿ.

– ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT