ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 04 ಏಪ್ರಿಲ್ 2024

Published 3 ಏಪ್ರಿಲ್ 2024, 20:55 IST
Last Updated 3 ಏಪ್ರಿಲ್ 2024, 20:55 IST
ಅಕ್ಷರ ಗಾತ್ರ

ವಿಮಾನ ನಿಲ್ದಾಣಗಳ ಕಡೆಗಣಿಸುವಿಕೆ ಸಲ್ಲ

ಕಲಬುರಗಿಯು ಕಲ್ಯಾಣ ಕರ್ನಾಟಕದ ಅತಿ ದೊಡ್ಡ ನಗರ ಹಾಗೂ ವಿಭಾಗೀಯ ಕೇಂದ್ರ. ಅಂತೆಯೇ, ಇಲ್ಲಿ ಹೈಕೋರ್ಟ್‌ ಪೀಠ ಸೇರಿದಂತೆ ಹಲವಾರು ಕಚೇರಿಗಳಿವೆ. ಎರಡು ಸರ್ಕಾರಿ ವಿಶ್ವವಿದ್ಯಾಲಯಗಳು ಸೇರಿ ಒಟ್ಟು ಐದು ವಿಶ್ವವಿದ್ಯಾಲಯಗಳಿವೆ. ನಾಲ್ಕು ವೈದ್ಯಕೀಯ ಕಾಲೇಜುಗಳು ಹಾಗೂ ಬಹುಸಂಖ್ಯೆಯಲ್ಲಿ ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳಿವೆ. ಕೆಎಟಿ ಮತ್ತು ಮಾಹಿತಿ ಆಯೋಗದ ಪೀಠಗಳು ಸಹ ಇಲ್ಲಿವೆ. 2019ರ ನವೆಂಬರ್‌ನಲ್ಲಿ ಇಲ್ಲಿ ಆರಂಭವಾದ ವಿಮಾನ ನಿಲ್ದಾಣ ಉತ್ತಮ ಪ್ರಗತಿ ತೋರಿತ್ತು. ದೇಶದ ವಿವಿಧ ನಗರಗಳಿಗೆ ನೂತನ ವಿಮಾನಗಳ ನಿರೀಕ್ಷೆಯಲ್ಲಿ ನಾವು ಸ್ಥಳೀಯರಿದ್ದೆವು. ಆದರೆ, ಇದೇ 1ರಿಂದ ವಿಮಾನಗಳ ಸೇವೆಯಲ್ಲಿ ಭಾರಿ ಕಡಿತವಾಗಿದೆ. ಬೆಂಗಳೂರಿಗೆ ಸೋಮವಾರ ಮತ್ತು ಮಂಗಳವಾರ ಮಾತ್ರ ರಾತ್ರಿ ವೇಳೆ ಎರಡು ವಿಮಾನಗಳ ಸೇವೆ ಇದ್ದು, ಉಳಿದ ದಿನಗಳಲ್ಲಿ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಾರದ ಎಲ್ಲಾ ದಿನ ಲಭ್ಯ ಇದ್ದ ತಿರುಪತಿ ವಿಮಾನ ನಾಲ್ಕು ದಿನಕ್ಕೆ ಕಡಿತಗೊಂಡಿದ್ದು, ಅದರ ಸೇವೆಯೂ ರಾತ್ರಿ ವೇಳೆ ಮಾತ್ರ ಇರಲಿದೆ. ನಸುಕಿನಲ್ಲಿ ಇಲ್ಲಿಂದ ಬೆಂಗಳೂರಿಗೆ ಹಾರಿ, ರಾತ್ರಿ ವಿಮಾನದಲ್ಲಿ ಕಲಬುರಗಿಗೆ ಅದೇ ದಿನ ಮರಳುವ ಜನರ ಕನಸು ನನಸಾಗಲಿಲ್ಲ. ಕಲಬುರಗಿಯ ಕಥೆ ಇದಾದರೆ, ಬೀದರ್‌ಗೆ ವಿಮಾನ ಸೇವೆ ಸ್ಥಗಿತಗೊಂಡು ಹಲವಾರು ತಿಂಗಳುಗಳಾಗಿವೆ. ಈ ರೀತಿ ಕಲ್ಯಾಣ ಕರ್ನಾಟಕದ ಎರಡು ವಿಮಾನ ನಿಲ್ದಾಣಗಳ ಕಡೆಗಣಿಸುವಿಕೆ ನ್ಯಾಯಸಮ್ಮತ ಅಲ್ಲ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಲಿ ಎನ್ನುವುದು ಜನರ ಆಶಯ.

–ವೆಂಕಟೇಶ್ ಮುದಗಲ್, ಕಲಬುರಗಿ

ಸಾವಿರಾರು ಕೋಟಿ ರೂಪಾಯಿ ಮರಳಿ ಬಾರಲಿಲ್ಲವೇಕೆ?

₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಹಿಂದಿನ ವರ್ಷದ ಮೇ ತಿಂಗಳಲ್ಲಿ ಆರ್‌ಬಿಐ ಘೋಷಿಸಿದಾಗಿನಿಂದ ಶೇ 97.69ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಮರಳಿದ್ದು, ಇನ್ನೂ 8,202 ಕೋಟಿ ಮೌಲ್ಯದ ನೋಟುಗಳು ಸಾರ್ವಜನಿಕರ ಬಳಿ ಇವೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಏ. 2). ಇದೇನೂ ಕಡೆಗಣಿಸುವ ಮೊತ್ತವಲ್ಲ. ಆರ್‌ಬಿಐ ಪ್ರಕಾರ, ಈ ನೋಟುಗಳೆಲ್ಲವೂ ಜನರ ಬಳಿಯೇ ಇವೆ! ಹಾಗಾದರೆ ಇವು ಮರಳದಿರಲು ಕಾರಣವೇನು? ಎಲ್ಲ ಜನರಿಗೂ ಈ ಬಗೆಗೆತಿಳಿದಿರಲಿಲ್ಲವೇ ಎನ್ನುವ ಮಾಹಿತಿಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ತಿಳಿಯಪಡಿಸುವುದು ಆರ್‌ಬಿಐನ ಕರ್ತವ್ಯವಾಗಿದೆ. ಅಂದಹಾಗೆ ಇನ್ನೂ ಖುದ್ದಾಗಿ ಆರ್‌ಬಿಐ ಕಚೇರಿಗೇ ತೆರಳಿ ನೋಟು ವಿನಿಮಯ ಮಾಡಿಕೊಳ್ಳಬಹುದು ಎಂದು ಕೂಡ ವರದಿಗಳು ತಿಳಿಸುತ್ತವೆ.

– ಮುಳ್ಳೂರು ಪ್ರಕಾಶ್, ಮೈಸೂರು

ಜಲವಿದ್ದರೆ ಜನ, ಜನರಿದ್ದರೆ ಮತದಾನ...

ರಾಜ್ಯದಾದ್ಯಂತ ಈಗ ಲೋಕಸಭೆ ಚುನಾವಣೆಯ ಜ್ವರ ಹೆಚ್ಚಾಗಿದೆ. ಬಿಸಿಲಿನ ಬೇಗೆಯಲ್ಲಿಯೂ ರಾಜಕೀಯ ಪಕ್ಷಗಳು ಮತ್ತು ನಾಯಕರು ಮತಬೇಟೆಯಲ್ಲಿ ತೊಡಗಿದ್ದರೆ, ನಿರ್ಭೀತವಾಗಿ ಮತ ಚಲಾಯಿಸುವ ಬಗ್ಗೆ ಅಧಿಕಾರಿಗಳು ಜನಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಇದರ ಜೊತೆಜೊತೆಗೆ ಜಲಜಾಗೃತಿ ಅಭಿಯಾನವನ್ನೂ ಅತ್ಯಗತ್ಯವಾಗಿ ನಡೆಸಬೇಕಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಸಂಕಷ್ಟ ಎದುರಾಗಿದೆ. ಮಳೆಯ ಕೊರತೆಯಿಂದ ಜಲಾಶಯಗಳು, ಕೆರೆಕಟ್ಟೆಗಳು ಬರಿದಾಗುತ್ತಿದ್ದು ನೀರಿಲ್ಲದೆ ಜೀವಜಂತುಗಳು, ಜನ– ಜಾನುವಾರುಗಳು ಪರದಾಡುವಂತೆ ಆಗಿದೆ. ಇರುವ ನೀರನ್ನು ಮಿತವಾಗಿ ಬಳಸುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ, ಅನವಶ್ಯವಾಗಿ ನೀರನ್ನು ಬಳಸಿ ಪೋಲು ಮಾಡುವವರಿಗೆ ತಿಳಿಹೇಳುವ ಪ್ರಯತ್ನ ಆಗಬೇಕಾಗಿದೆ. ಚುನಾವಣೆಯ ಈ ಸಮಯದಲ್ಲಿ ಸಭೆ- ಸಮಾರಂಭಗಳು, ರೋಡ್ ಷೋಗಳಲ್ಲಿ ಮತದಾನದ ಜಾಗೃತಿಯ ಜೊತೆಗೆ ಕುಡಿಯುವ ನೀರು ಮತ್ತು ಅದರ ಬಳಕೆ ಬಗ್ಗೆ ಜಲಜಾಗೃತಿ ಆಂದೋಲನವನ್ನೂ ಹಮ್ಮಿಕೊಳ್ಳುವುದು ಅತ್ಯಂತ ಸೂಕ್ತ.

ನೀರಿನ ಮಿತ ಬಳಕೆಯ ಬಗ್ಗೆ ಸ್ಟಾರ್ ಪ್ರಚಾರಕರು, ಸೆಲೆಬ್ರಿಟಿಗಳಿಂದ ಹೇಳಿಸಿದರೆ ಜನರಿಗೆ ಅದು ತಟ್ಟಬಹುದು. ಜಲವಿದ್ದರೆ ಜನ, ಜನರಿದ್ದರೆ ಮತದಾನ. ಹಾಗಾಗಿ, ಚುನಾವಣಾ ಆಯೋಗವು ಜೀವಜಲವಾದ ಕುಡಿಯುವ ನೀರಿನ ಕೊರತೆ ಮತ್ತು ಅದರ ಪರಿಣಾಮದ ಬಗ್ಗೆ ಸಭೆಗಳಲ್ಲಿ ತಿಳಿಹೇಳುವ ಕಾರ್ಯ ಮಾಡಿಸುವುದು ಹೆಚ್ಚು ಸೂಕ್ತ.

– ಬಲ್ಲೇನಹಳ್ಳಿ ಮಂಜುನಾಥ್, ಕೆ.ಆರ್.ಪೇಟೆ

ಕೇರಳ ಸಚಿವರ ಅಸಂಗತ ಹೇಳಿಕೆ

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೋರಿರುವುದರಿಂದ, ಇಲ್ಲಿನ ಐ.ಟಿ. ಕಂಪನಿಗಳನ್ನು ಕೇರಳದ ಕೈಗಾರಿಕಾ ಸಚಿವರು ತಮ್ಮ ರಾಜ್ಯಕ್ಕೆ ಆಹ್ವಾನಿಸುವ ಮೂಲಕ ಅವುಗಳಿಗೆ ಗಾಳ ಹಾಕುವ ಪ್ರಯತ್ನ ನಡೆಸಿದ್ದಾರೆ (ಪ್ರ.ವಾ., ಏ. 2). ಕೇರಳದ ಅಸಂಖ್ಯಾತ ಜನರು ಕೆಲಸ ಹುಡುಕಿಕೊಂಡು ಹಾಗೂ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿನತ್ತ ಧಾವಿಸಿ ಬರುತ್ತಿರುವುದು ಸಚಿವರ ಗಮನಕ್ಕೆ ಬಂದಿಲ್ಲವೇ? ಕೇರಳ ಮೂಲದ ಎಷ್ಟೋ ಜನರಿಗೆ ಬದುಕು ಕಟ್ಟಿಕೊಟ್ಟ ಬೆಂಗಳೂರು ಅವರಿಗೆ ಆಸರೆಯಾಗಿದೆ. ಜೊತೆಗೆ ಪ್ರಸ್ತುತ ಟೀ ಅಂಗಡಿಯ ಕೆಲಸದಿಂದ ಹಿಡಿದು ರೆಸ್ಟೊರೆಂಟ್ ಮಾಲೀಕರವರೆಗೆ ಆ ರಾಜ್ಯದ ನಾಗರಿಕರು ಇಲ್ಲಿದ್ದಾರೆ. ಕೇರಳದಲ್ಲಿ ಕೆಲವು ವರ್ಷಗಳ ಹಿಂದೆ ಅತಿವೃಷ್ಟಿ ಸಂಭವಿಸಿದ್ದಾಗ ಕರ್ನಾಟಕದ ನಾಯಕರು ಕೇರಳದ ಕಂಪನಿಗಳಿಗೆ ಇಂತಹುದೇ ಆಹ್ವಾನ ನೀಡಿದ್ದರೇ?

ನೈಸರ್ಗಿಕ ವಿಕೋಪಗಳಿಗೆ ಎಲ್ಲರೂ ತಲೆಬಾಗಲೇಬೇಕು. ನಮ್ಮ ರಾಜ್ಯಕ್ಕೆ ಬಂದಿರುವ ಸಮಸ್ಯೆಯನ್ನು ಇಲ್ಲಿನ ಸರ್ಕಾರ ಸಮರ್ಥವಾಗಿ ನಿರ್ವಹಿಸುತ್ತದೆ ಎಂಬ ಅರಿವು ಅವರಿಗೆ ಇರಬೇಕು. ನೆರೆ ರಾಜ್ಯಕ್ಕೆ ಬಂದೊದಗಿದ ಸಂದಿಗ್ಧ ಪರಿಸ್ಥಿತಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದಲ್ಲದೆ ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪೂರಕವಾದ ನಡೆಯಲ್ಲ.

– ಮಲ್ಲಿಕಾರ್ಜುನ್ ತೇಲಿ ಗೋಠೆ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT