ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 1 ಏಪ್ರಿಲ್ 2024

Published 31 ಮಾರ್ಚ್ 2024, 23:50 IST
Last Updated 31 ಮಾರ್ಚ್ 2024, 23:50 IST
ಅಕ್ಷರ ಗಾತ್ರ

ಅನ್ಯದೇಶಗಳಿಗೇಕೆ ಭಾರತದ ಉಸಾಬರಿ?

ಜರ್ಮನಿ, ಅಮೆರಿಕ ದೇಶಗಳು ಭಾರತದ ರಾಜಕೀಯ, ನ್ಯಾಯಿಕ ಪ್ರಕ್ರಿಯೆಗಳ ಬಗ್ಗೆ ಅನಗತ್ಯವಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿವೆ. ಭಾರತವು ಯಾವತ್ತೂ ಅನ್ಯದೇಶಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ವಿರುದ್ಧದ ಹೇಳಿಕೆಗಳನ್ನು ನೀಡುವುದಿಲ್ಲ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದಕ್ಕೆ ಅಸಂಬದ್ಧವಾದ ಹೇಳಿಕೆ ನೀಡಿರುವುದು ಈ ದೇಶಗಳಿಗೆ ತಕ್ಕುದಲ್ಲ. ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಅಧಿಕಾರ ಇತರ ದೇಶಗಳಿಗೆ ಇಲ್ಲವೇ ಇಲ್ಲ. ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿ, ಕಠಿಣ ಪದಗಳಲ್ಲಿ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿರುವುದು ಸರಿಯಾಗಿಯೇ ಇದೆ.

- ಚೆನ್ನು ಅ. ಹಿರೇಮಠ, ರಾಣೆಬೆನ್ನೂರು

ಒಮ್ಮುಖದ ನಿಲುವು ತರವಲ್ಲ

ಲೋಕಸಭಾ ಚುನಾವಣೆ, ರಾಜಕೀಯ ಸಂಗತಿಗಳು ಹಾಗೂ ರಾಜ್ಯದ ಅರ್ಥವ್ಯವಸ್ಥೆ ಕುರಿತು ಸಾಹಿತಿ ಎಸ್.ಎಲ್.ಭೈರಪ್ಪ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮಾರ್ಚ್‌ 30). ರಾಜ್ಯ ಸರ್ಕಾರ ನೀಡುತ್ತಿರುವ ಕೆಲವು ಉಚಿತ ಸೌಲಭ್ಯಗಳಿಂದ ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಆಗುತ್ತದೆ ಎಂದಿದ್ದಾರೆ. ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಸಮಾಜದ ತಳಸ್ತರದ ಜನರಿಗೆ ಉಚಿತ ಕೊಡುಗೆಗಳು ಸ್ವಲ್ಪಮಟ್ಟಿಗೆ ಆರ್ಥಿಕ ಬಲ ನೀಡಿದ್ದು ಸುಳ್ಳಲ್ಲ. ಕೇಂದ್ರ ಕೊಟ್ಟದ್ದನ್ನೆಲ್ಲಾ ರಾಜ್ಯ ಖರ್ಚು ಮಾಡಿ ಕೇಂದ್ರದ ಅರ್ಥ ಸಚಿವರನ್ನು ಬೈಯುತ್ತಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಬಿಡುಗಡೆ ಮಾಡಿದ ತೆರಿಗೆ ಪಾಲಾಗಲೀ ಅಥವಾ ರಾಜ್ಯ ಸಂಗ್ರಹಿಸಿದ ತೆರಿಗೆಯಾಗಲೀ ರಾಜ್ಯದ ಹಿತದೃಷ್ಟಿಯಿಂದ ವೆಚ್ಚ ಮಾಡಲಿಕ್ಕೇ ಇರುವುದು. ಈ ಕುರಿತು ರಾಜಕಾರಣಿಗಳ ಧಾಟಿಯಲ್ಲಿ ಮಾತನಾಡುವುದು ಸರಿಯಲ್ಲ. ಕೇಂದ್ರ ಮತ್ತು ಬಿಜೆಪಿಯು ಆಡಳಿತ ನಡೆಸುತ್ತಿರುವ ಇತರ ರಾಜ್ಯಗಳ ಸರ್ಕಾರಗಳು ಕೂಡ ಇಂತಹ ಕೆಲವು ಉಚಿತ ಕೊಡುಗೆಗಳನ್ನು ನೀಡುತ್ತಿರುವುದನ್ನು ಭೈರಪ್ಪನವರು ಗಮನಿಸಿರಲಿಕ್ಕೆ ಸಾಕು.

ಕೇಂದ್ರದ ತೆರಿಗೆಯಲ್ಲಿನ ರಾಜ್ಯದ ಪಾಲು 15ನೇ ಹಣಕಾಸು ಆಯೋಗದಿಂದಾಗಿ ಇಳಿದಿರುವುದು ಮತ್ತು ಪ್ರತಿವರ್ಷ ಅದರಿಂದಾಗಿ ಕರ್ನಾಟಕಕ್ಕೆ 10-12 ಸಾವಿರ ಕೋಟಿಯಷ್ಟು ಅನುದಾನ ನಷ್ಟವಾಗಿರುವುದು, ಹಣಕಾಸು ಆಯೋಗ ನಿಗದಿಪಡಿಸಿದ ಇತರ ಕೆಲವು ಅನುದಾನಗಳನ್ನು ಕೇಂದ್ರವು ರಾಜ್ಯಕ್ಕೆ ನೀಡದಿರುವುದು, ಕೇಂದ್ರ ಆಕರಿಸುವ ಸೆಸ್, ಕರ ಆದಾಯವನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುವುದನ್ನು ಸ್ಥಗಿತಗೊಳಿಸಿರುವುದು, ರಾಜ್ಯದಲ್ಲಿ ಈ ಹಿಂದೆ ಉಂಟಾದ ನೆರೆಹಾವಳಿ ಕಾಲದಲ್ಲಿ ಹಾಗೂ ಈ ವರ್ಷ ತೀವ್ರ ಬರದಿಂದ ತತ್ತರಿಸಿದರೂ ಕೇಂದ್ರವು ಯಾವುದೇ ರೀತಿ ಸ್ಪಂದಿಸದಿರುವುದು ಭೈರಪ್ಪನವರಿಗೆ ಗೋಚರಿಸದಿರುವುದು ಅಚ್ಚರಿಯ ಸಂಗತಿ. ಹಿರಿಯ ಸಾಹಿತಿಗಳು, ಲೇಖಕರು ಒಂದು ಪಕ್ಷದ ನೇತೃತ್ವದ ಸರ್ಕಾರದ ಕುರಿತು ಒಮ್ಮುಖದ ಒಲವು, ನಿಲುವು ತೋರುವ ಬದಲು ರಾಜ್ಯದ ಸಂಕಟಗಳಿಗೆ ಧ್ವನಿಯಾಗಿ, ವಸ್ತುನಿಷ್ಠ, ನಿಷ್ಠುರ, ನಿಷ್ಪಕ್ಷಪಾತ ನಿಲುವು ತಾಳಿದರೆ ಅವರ ಮಾತುಗಳಿಗೆ ಬೆಲೆ ಇರುತ್ತದೆ.

- ವೆಂಕಟೇಶ ಮಾಚಕನೂರ, ಧಾರವಾಡ

ಮಕ್ಕಳ ಆಟಿಕೆ ಪರಿಸರಸ್ನೇಹಿ ಆಗಿರಲಿ

ಪ್ರಸ್ತುತ ರಾಜ್ಯದಾದ್ಯಂತ ವಿವಿಧ ತೇರು, ಜಾತ್ರೆಗಳು ವಿಜೃಂಭಣೆಯಿಂದ ಜರುಗುತ್ತಿವೆ.‌ ಮಕ್ಕಳ ಆಟಿಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ತಂತ್ರಜ್ಞಾನದ ಮೂಲಕ ವಿವಿಧ ಆಟಿಕೆಗಳು ಮಾರುಕಟ್ಟೆ ಏರಿ ಇಂದು ಮಕ್ಕಳನ್ನು ಅಯಸ್ಕಾಂತದಂತೆ ಸೆಳೆಯುತ್ತಿವೆ ಜೊತೆಗೆ ಪೋಷಕರ ಜೇಬನ್ನೂ ಬರಿದಾಗಿಸುತ್ತಿವೆ. ಆದರೆ ಈ ತೆರನಾದ ಆಟಿಕೆಗಳು ಮಕ್ಕಳಿಗೆ ಮನರಂಜನೆ ಜೊತೆಗೆ ಅಪಾಯವನ್ನೂ ಉಂಟುಮಾಡುತ್ತಿವೆ. ಹೌದು, ಆಟಿಕೆಗಳ ತಯಾರಿಕೆಗೆ ಬಳಸಿರುವ ವಸ್ತುಗಳು, ಬಣ್ಣ, ಅವು ಹೊರಡಿಸುವ ಧ್ವನಿ ಮತ್ತು ಬೆಳಕು ಮಕ್ಕಳಿಗಷ್ಟೇ ಅಲ್ಲದೆ ಇತರರಿಗೂ ಅಪಾಯಕಾರಿ. ಉದಾಹರಣೆಗೆ, ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿರುವ ಲೇಸರ್ ಲೈಟ್‌ಗಳು. ನೇರ ಬೆಳಕಿನ ಗಾಢ ಬಣ್ಣದ ಈ ಉಪಕರಣಗಳನ್ನು ಮಕ್ಕಳು ಗೋಡೆಗೆ, ಪಶು-ಪಕ್ಷಿಗಳಿಗೆ ಹಾಗೂ‌ ಮನುಷ್ಯರ ಕಣ್ಣಿಗೂ ಬಿಟ್ಟು ಖುಷಿ ಪಡುತ್ತಿರುವುದನ್ನು ಕಾಣುತ್ತೇವೆ. ‘ಈ ಬೆಳಕು ಕಣ್ಣಿಗೆ ಅಪಾಯಕಾರಿ ಹಾಗೂ ಮಕ್ಕಳ ಕೈಗೆ ನೀಡದಿರಿ’ ಎಂದು ಅದರ ಮೇಲೆಯೇ ಸೂಚಿಸಲಾಗಿದೆ.

ಇದರಂತೆಯೇ ಅನೇಕ ಆಟಿಕೆಗಳು ಸಹ ಅಪಾಯಕಾರಿ ಹಾಗೂ ಮಾಲಿನ್ಯಕಾರಕಗಳಾಗಿವೆ. ಸಂಬಂಧಪಟ್ಟ ಇಲಾಖೆ ಅಥವಾ ವ್ಯವಸ್ಥೆ ಈ ಬಗ್ಗೆ ಗಮನಹರಿಸಬೇಕಿದೆ. ಆಟಿಕೆಗಳ ಉತ್ಪಾದನೆ, ದಾಸ್ತಾನು ಹಾಗೂ ಮಾರಾಟಕ್ಕೆ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕಿದೆ. ಮರುಬಳಕೆಯ ವಸ್ತುಗಳಿಂದಾದ ಪರಿಸರಸ್ನೇಹಿ ಆಟಿಕೆಗಳನ್ನು ಖರೀದಿಸಲು ಪೋಷಕರು ಮುಂದಾಗಬೇಕಿದೆ.

- ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಶಿಕ್ಷಣ ಕ್ಷೇತ್ರ: ಬದಲಾಗಬೇಕಿದೆ ಆಡಳಿತ ವ್ಯವಸ್ಥೆ

‘ಶಾಲಾ ಶಿಕ್ಷಣ: ವಾಸ್ತವಿಕ ಸವಾಲು’ ಎಂಬ ಅರವಿಂದ ಚೊಕ್ಕಾಡಿ ಅವರ ಲೇಖನ (ಪ್ರ.ವಾ., ಮಾರ್ಚ್‌ 21) ಇಂದಿನ ಶಾಲಾ ಶಿಕ್ಷಣದ ಮೇಲೆ ಕ್ಷ ಕಿರಣ ಬೀರಿದೆ. ಶಿಕ್ಷಣ ಕ್ಷೇತ್ರವು ಭಾರತದಲ್ಲಿ ಅತ್ಯಂತ ಪ್ರಮುಖ ರಂಗ. ಏಕೆಂದರೆ ಶತಶತಮಾನಗಳಿಂದಲೂ ಶಿಕ್ಷಣದಿಂದ ವಂಚಿತವಾದ ಜನಸಮುದಾಯಗಳು ಇಂದಿಗೂ ಆ ಪರಿಸ್ಥಿತಿಯಿಂದ ಹೊರಬಂದಿಲ್ಲ. ಸಾಮಾಜೀಕರಣ ಪ್ರಕ್ರಿಯೆಗೆ ಒಳಪಡದ ಹಲವಾರು ಸಮುದಾಯಗಳು ದೇಶದಲ್ಲಿವೆ. ಶಿಕ್ಷಣಕ್ಕಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆಯಾದರೂ ಗುಣಮಟ್ಟ ಪಾತಾಳ ತಲುಪಿದೆ. ಭಾಷೆಯ ಮೇಲೂ ವಿದ್ಯಾರ್ಥಿಗಳಿಗೆ ಹಿಡಿತ ಇಲ್ಲದಂತೆ ಆಗಿದೆ. ಹೀಗಿದ್ದಾಗ ಮುಖ್ಯ ವಿಷಯಗಳು ಅವರಿಗೆ ಅರ್ಥ ಆಗುವುದೇ ಇಲ್ಲ. ಇತ್ತ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ, ಆಸಕ್ತಿಯಿಂದ ಕಲಿಯುತ್ತಿಲ್ಲ ಮತ್ತು ಸ್ವ ಇಚ್ಛೆಯಿಂದ ಕಲಿಸುವ ಶಿಕ್ಷಕರ ಪ್ರಮಾಣವೂ ಕಡಿಮೆಯಾಗಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತಿದೆ. ಇದರಿಂದಾಗಿ ಕಲಿಕೆಯ ಕಡೆಗೆ ಅವರ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನಲೇಬೇಕು.

ಲೇಖಕರು ಪ್ರತಿಪಾದಿಸಿದ ಹಾಗೆ, ಆಡಳಿತ ವ್ಯವಸ್ಥೆಯಲ್ಲಿಯೂ ಮಾರ್ಪಾಡು ಆಗಬೇಕಾದ ಅವಶ್ಯಕತೆ ಇದೆ. ಶಿಕ್ಷಕರ ಹೆಚ್ಚುವರಿ ಜವಾಬ್ದಾರಿಗಳನ್ನು ಕಡಿಮೆ ಮಾಡಬೇಕಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುವಂತೆ ಅವರನ್ನು ಉತ್ತೇಜಿಸಬೇಕಾಗಿದೆ. ಅಂಕಗಳ ಸಾಧನೆಗಿಂತ ಜೀವನದಲ್ಲಿ ಯಶಸ್ಸು ಕಾಣುವ ಶಿಕ್ಷಣ ಇಂದಿನ ಅಗತ್ಯ. ವಿದ್ಯಾರ್ಥಿಗೆ ಕಲಿಯಬೇಕೆನ್ನುವ ತುಡಿತ ಮತ್ತು ಶಿಕ್ಷಕರಿಗೆ ಕಲಿಸಬೇಕೆನ್ನುವ ತಹತಹ ಇದ್ದರೆ ಏನೆಲ್ಲಾ ಆಗಲು ಸಾಧ್ಯವಿದೆ. ಆಗ ಬೇರೆಲ್ಲಾ ಕ್ಷೇತ್ರಗಳು ಸಹ ತಮ್ಮಷ್ಟಕ್ಕೆ ತಾವು ಸಕಾರಾತ್ಮಕವಾಗಿ ಬದಲಾವಣೆ ಕಾಣುತ್ತವೆ.

- ಬಿ.ಆರ್.ಅಣ್ಣಾಸಾಗರ, ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT