ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 07 ಡಿಸೆಂಬರ್ 2023

Published 6 ಡಿಸೆಂಬರ್ 2023, 23:36 IST
Last Updated 6 ಡಿಸೆಂಬರ್ 2023, 23:36 IST
ಅಕ್ಷರ ಗಾತ್ರ

ಸ್ಮಾರಕ ಬೇಡ, ವಿದ್ಯಾರ್ಥಿ ವೇತನ ನೀಡಿ

ಕಾಡಾನೆಗಳ ಸೆರೆಗಾಗಿ ನಡೆದ ಕಾರ್ಯಾಚರಣೆಯ ವೇಳೆ ಮೃತಪಟ್ಟ ಆನೆ ಅರ್ಜುನನ ನೆನಪಿಗಾಗಿ ಮೈಸೂರು ಮತ್ತು ಹಾಸನದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿರುವುದಾಗಿ ನ್ಯೂಸ್ ಚಾನೆಲ್ ಒಂದು ವರದಿ ಮಾಡಿದೆ.

ಇದು ನಿಜವೇ ಆಗಿದ್ದಲ್ಲಿ ಇದರ ಅಗತ್ಯದ ಬಗ್ಗೆ ಯೋಚಿಸಬೇಕಾಗಿದೆ. ಸ್ಮಾರಕ ನಿರ್ಮಿಸುವುದರಿಂದ ಯಾರಿಗೆ ಪ್ರಯೋಜನ ಇದೆಯೋ ಗೊತ್ತಿಲ್ಲ. ಆದರೆ ಖಂಡಿತ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಮುಂದಾಗುವವರು ಹಣ ಮಾಡಿಕೊಳ್ಳಲು ಅನುಕೂಲ ಆಗುತ್ತದೆ.

ಅದರ ಬದಲು, ಆನೆಗಳನ್ನು ತಮ್ಮ ಮನೆಯ ಸದಸ್ಯರಂತೆ ಸಲಹುವ ಮಾವುತರು ಮತ್ತು ಕಾವಾಡಿಗರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ಅರ್ಜುನನ ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡಬಹುದು. ಅರ್ಜುನನ ಕಥೆಯನ್ನು ಪ್ರಚುರಪಡಿಸುವ ದಿಸೆಯಲ್ಲಿ ಆತನಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಮೈಸೂರು ಮೃಗಾಲಯದಲ್ಲಿ ಪ್ರದರ್ಶಿಸುವುದು ಸೂಕ್ತ. ಜೊತೆಗೆ, ಈ ಹಿಂದೆ ದಸರಾದಲ್ಲಿ ಪಾಲ್ಗೊಂಡು ದುರಂತದಲ್ಲಿ ಮೃತಪಟ್ಟ ಆನೆಗಳ ಛಾಯಾಚಿತ್ರಗಳನ್ನೂ ಈ ಪ್ರದರ್ಶನದಲ್ಲಿ ಸೇರಿಸಬಹುದು.

– ಗೌಡಯ್ಯ, ಮೈಸೂರು

ಕೆಂಪೇಗೌಡ ಪ್ರತಿಮೆ: ದೀಪ ಬೆಳಗಲಿ

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಎರಡು ಬಾರಿ ರಾತ್ರಿ ವೇಳೆಯಲ್ಲಿ ಹೋಗಿ ಬಂದಿದ್ದೆ. ಆ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆ ಕಣ್ಣಿಗೆ ಬೀಳಲಿಲ್ಲ. ಮೊನ್ನೆ ಭಾನುವಾರ ಮಧ್ಯರಾತ್ರಿ ವಿಮಾನ ನಿಲ್ದಾಣಕ್ಕೆ ಹೋಗುವಾಗ, ಕಾರು ಚಾಲನೆ ಮಾಡುತ್ತಿದ್ದ ಸೋದರನ ಮಗನಿಗೆ ಕೆಂಪೇಗೌಡರ ಪ್ರತಿಮೆ ತೋರಿಸುವಂತೆ ಕೇಳಿದೆ. ಆತ ತೋರಿಸಿದಾಗ ಕುತೂಹಲದಿಂದ ನೋಡಿದೆ. ಪ್ರತಿಮೆ ಸರಿಯಾಗಿ ಕಾಣಲಿಲ್ಲ. ಏಕೆಂದರೆ, ಪ್ರತಿಮೆ ಕಾಣುವಂತೆ ವಿದ್ಯುತ್ ದೀಪದ ವ್ಯವಸ್ಥೆ ಅಲ್ಲಿರಲಿಲ್ಲ. ಆದರೆ ಸುತ್ತಮುತ್ತ ಅಳವಡಿಸಿರುವ ಜಾಹೀರಾತು ಫಲಕಗಳು ಮಾತ್ರ ವಿದ್ಯುತ್ ಬೆಳಕಿನಲ್ಲಿ ರಾರಾಜಿಸುತ್ತಿದ್ದವು. ಇವುಗಳ ನಡುವೆ, ಕೆಂಪೇಗೌಡರ ಪ್ರತಿಮೆಯನ್ನು ಕತ್ತಲೆಯ ಪಂಜರದಲ್ಲಿ ಹಾಕಿರುವಂತೆ ಭಾಸವಾಗಿ ಬೇಸರವಾಯಿತು.

ರಾಜ್ಯ ಸರ್ಕಾರ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದೆ. ಆದರೆ ರಾಜ್ಯ ಸರ್ಕಾರವೇ ನಿರ್ಮಿಸಿರುವ, ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಪ್ರತಿಮೆ ಎದ್ದು ಕಾಣುವಂತೆ ಅಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡದಿರುವುದು ಸರಿಯಲ್ಲ. ರಾತ್ರಿ ವೇಳೆ ಸಾವಿರಾರು ಮಂದಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಕೆಂಪೇಗೌಡರ ಪ್ರತಿಮೆಗೆ ಸೂಕ್ತ ರೀತಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಿ.

– ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಗುಣಮಟ್ಟದ ಸಾಹಿತ್ಯಕ್ಕೆ ಸೋಲಿಲ್ಲ

‘ಪ್ರಶಸ್ತಿ, ಪ್ರೇರಣೆ ಮತ್ತು ಸಾಹಿತ್ಯ’ ಎಂಬ ಅರುಣ್‌ ಜೋಳದಕೂಡ್ಲಿಗಿ ಅವರ ಲೇಖನದಲ್ಲಿನ (ಸಂಗತ,ಡಿ. 6) ಅಂಶಗಳನ್ನು ಪೂರ್ಣವಾಗಿ ಒಪ್ಪಲಾಗದು. ಬರೆಯುವ ಹುಕಿ ಇದ್ದವರು ಪ್ರಶಸ್ತಿಗೆ, ಬಹುಮಾನಕ್ಕೆ ಎಂದು ಬರೆಯಲಾರರು. ಬರೆದಿದ್ದನ್ನು ಆ ಕ್ಷಣಕ್ಕೆ ಆಹ್ವಾನಿತ ಸ್ಪರ್ಧೆಗೆ ಕಳಿಸುತ್ತಾರೆ. ಬಹಳ ಹಿಂದಿನಿಂದಲೂ ಪತ್ರಿಕೆಗಳ ಕಥೆ, ಕವನ ಸ್ಪರ್ಧೆಗಳಲ್ಲಿ ಗೆದ್ದವರು ನಾಡಿನ ಪ್ರಖ್ಯಾತ ಲೇಖಕರಾಗಿ ಗುರುತಿಸಿಕೊಂಡು ಸಾರಸ್ವತ ಲೋಕದಲ್ಲಿ ಗಟ್ಟಿ ಸ್ಥಾನ ಪಡೆದಿದ್ದಾರೆ.

ನೂರಾರು ಪತ್ರಿಕೆ, ಪುಸ್ತಕ, ಸಂಘಟನೆಗಳ ನಡುವೆ ವಿವಿಧ ಸಾಹಿತ್ಯ ಸ್ಪರ್ಧೆಗಳು ಹುಟ್ಟಿಕೊಂಡಿವೆ, ಬರೆಯುವವರೂ ಹೆಚ್ಚಾಗಿದ್ದಾರೆ. ಗುಣಮಟ್ಟದ ಸಾಹಿತ್ಯ ಯಾವ ಕಾಲಕ್ಕೂ ಗೆಲ್ಲುತ್ತದೆ. ಒಮ್ಮೆ ಬಹುಮಾನ ತೆಗೆದುಕೊಂಡವರು ಮತ್ತೆ ಮತ್ತೆ ತೆಗೆದುಕೊಳ್ಳಬಾರದೆಂಬ ನಿಯಮ ಇದೆಯೇ? ಒಮ್ಮೆ ಪ್ರಶಸ್ತಿ ಪಡೆದವರು ಮೂರು ವರ್ಷ ಪುನಃ ಆ ಸ್ಪರ್ಧೆಗೆ ಭಾಗವಹಿಸಬಾರದೆಂಬ ನಿಯಮವನ್ನು ಕೆಲವು ಆಯೋಜಕರು ಮಾಡಿದ್ದಾರೆ. ಹಿರಿಯರು, ಕಿರಿಯರು ಕೂಡಿ ಬರೆದಾಗ ಪೈಪೋಟಿ ಹೆಚ್ಚಾಗಿ, ಉತ್ತಮ ಸಾಹಿತ್ಯಕೃಷಿ ಬರಬಲ್ಲದು. ಎಲ್ಲ ಸ್ಪರ್ಧೆ, ಎಲ್ಲ ತೀರ್ಪು, ಎಲ್ಲ ಪ್ರಶಸ್ತಿ ವಿಜೇತರನ್ನೂ ಹಳದಿ ಕಣ್ಣಿನಿಂದ ನೋಡುವುದು ತಪ್ಪು. ವ್ಯಕ್ತಿವಾದಿಗಳಾಗಿ ಅಥವಾ ಜಾತಿವಾದಿಗಳಾಗಿ ರೂಪಿಸುವ ನಡೆ ಬರೀ ಸಾಹಿತ್ಯ ವಲಯದಲ್ಲಿದೆಯೇ? ಇದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ.

ಗಟ್ಟಿ ಸದಾ ಕಾಲ ಉಳಿಯುತ್ತದೆ. ನಾಡಿನಾದ್ಯಂತ ಸಾಹಿತ್ಯ ಚರ್ಚೆ, ಸಂವಾದ, ವಿಚಾರ ಮಂಥನ ನಡೆಯುತ್ತಲೇ ಇವೆ. ವಿಮರ್ಶೆ ಕುರಿತಂತೆ ಲೇಖಕರ ಗ್ರಹಿಕೆ ತಪ್ಪು. ಎಲ್ಲ ರೀತಿಯ ಸಾಹಿತ್ಯ ವಿಮರ್ಶೆಗಳೂ ಬರುತ್ತಿವೆ. ಹಳೆಯದು ಹೊನ್ನು ಎಂದು ಕೂತರೆ, ಇಂದಿನದು ಮುಂದೆ ಹಳತಾಗುತ್ತದೆ, ಹೊನ್ನೂ ಆಗುತ್ತದೆ.

– ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಅರ್ಥಶಾಸ್ತ್ರದ ವಿದ್ವತ್ತು ಹೀಗೂ ಬಳಕೆಯಾಯಿತು!

ಪ್ರತಿಬಾರಿ ಲೋಕಾಯುಕ್ತ ದಾಳಿ ನಡೆದಾಗ, ದಾಳಿಗೆ ಒಳಗಾದವರಲ್ಲಿ ವಿಭಿನ್ನ ಬಗೆಯ ಸರ್ಕಾರಿ ಅಧಿಕಾರಿಗಳು ಇರುವುದನ್ನು ಗಮನಿಸಬಹುದಾಗಿದೆ. ಈ ಬಾರಿ ದಾಳಿಗೊಳಗಾದ ಅಧಿಕಾರಿಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರೊಬ್ಬರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ವರದಿಯಾಗಿದೆ. ಇವರಲ್ಲಿನ ವಿಶೇಷವೆಂದರೆ, ಇವರು ಸ್ಟೀಲ್ ಉತ್ಪನ್ನ, ರಿಯಲ್ ಎಸ್ಟೇಟ್, ಬಟ್ಟೆ ಅಂಗಡಿ, ಶಿಕ್ಷಣ ಸಂಸ್ಥೆ, ವರ್ಗಾವಣೆ ದಂಧೆಯಂತಹ ವಿವಿಧ ಆದಾಯ ಮೂಲಗಳಿಗೆ ಕೈಹಾಕಿರುವುದು.

ರಾವಣ ಪರಸ್ತ್ರೀ ವ್ಯಾಮೋಹದಿಂದ ಭ್ರಷ್ಟನಾದರೂ ಅವನ ಶಿವಭಕ್ತಿಯನ್ನು ಲೋಕ ಕೊಂಡಾಡುತ್ತದೆ. ಈ ಪ್ರಾಧ್ಯಾಪಕ ಅನ್ಯಮಾರ್ಗಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ತಮ್ಮ ಅರ್ಥಶಾಸ್ತ್ರದ ವಿದ್ವತ್ತನ್ನು ಬಳಸಿಕೊಂಡ ಪರಿ ಅಚ್ಚರಿಯೆನಿಸುತ್ತದೆ. ಒಬ್ಬ ವ್ಯಕ್ತಿಗೆ ಜೀವನೋಪಾಯಕ್ಕೆ ಒಂದು ಸ್ವಂತ ಮನೆ ಸಾಕು. ಆದರೆ, ಕರ್ನಾಟಕದ ಯಾವುದೇ ಜಿಲ್ಲೆ, ತಾಲ್ಲೂಕುಗಳಲ್ಲಿ ಹೊಸ ಲೇಔಟ್‍ಗಳನ್ನು ನಿರ್ಮಾಣ ಮಾಡಿದರೂ, ಅಲ್ಲಿ ತಮ್ಮ ಕುಟುಂಬದವರ ಹೆಸರಿನಲ್ಲಿ ಒಂದೊಂದು ನಿವೇಶನ ಖರೀದಿ ಮಾಡುವ ಇಂತಹವರು ವಿದ್ಯಾರ್ಥಿಗಳಿಗೆ ಯಾವ ರೀತಿಯ ನೈತಿಕ ಶಿಕ್ಷಣ ನೀಡಬಲ್ಲರು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

– ತಿಮ್ಮೇಶ ಮುಸ್ಟೂರು, ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT