ಶುಕ್ರವಾರ, ಅಕ್ಟೋಬರ್ 22, 2021
21 °C

ಅಥಣಿ ಜನರ ಹಕ್ಕೊತ್ತಾಯ ಈಡೇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಚಿಕ್ಕೋಡಿ ಜಿಲ್ಲೆಯಾಗುವುದು ಎಂದು?’ ಎಂದು ವೆಂಕಟೇಶ ಮಾಚಕನೂರ ಕೇಳಿದ್ದಾರೆ (ವಾ.ವಾ., ಅ. 4). ಈ ಬೇಡಿಕೆ ಅಲ್ಲಗಳೆಯುವಂಥದ್ದಲ್ಲ. ಆದರೆ ಚಿಕ್ಕೋಡಿಯು ಜಿಲ್ಲಾ ಕೇಂದ್ರ ಬೆಳಗಾವಿಯಿಂದ ಕೇವಲ 70 ಕಿ.ಮೀ. ಅಂತರದಲ್ಲಿದೆ. ಆದರೆ ಅಥಣಿ ಗಡಿ ಭಾಗದ ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರದಿಂದ 150 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿದೆ ಎಂಬುದು ಗಮನಾರ್ಹ.  ಅಥಣಿಯು ರಾಜ್ಯದ ಅತಿ ದೊಡ್ಡ ತಾಲ್ಲೂಕುಗಳಲ್ಲಿ ಒಂದು. ಇಲ್ಲಿ ಎರಡು ವಿಧಾನಸಭಾ– ಅಥಣಿ ಮತ್ತು ಕಾಗವಾಡ–   ಕ್ಷೇತ್ರಗಳಿವೆ. ಈ ಕಾರಣಕ್ಕಾಗಿ ಜಿಲ್ಲೆಯಾಗುವ ಎಲ್ಲ ಅರ್ಹತೆ ಪಡೆದಿದೆ. ಗಡಿಭಾಗದ ಅನಂತಪೂರ, ತೆಲಸಂಗ, ಸಾವಳಗಿ, ಸತ್ತಿ ಮತ್ತು ಹಾರೂಗೇರಿ ಹೋಬಳಿಗಳು ನೂತನ ತಾಲ್ಲೂಕುಗಳಾಗಬೇಕೆಂಬ ಬೇಡಿಕೆ ಇದೆ. ಇವು ರಚನೆಯಾದರೆ ಮತ್ತು ಅಥಣಿಗೆ ಹೊಸ ಜಿಲ್ಲೆಯಾಗುವ ಅವಕಾಶ ದೊರೆತರೆ 45 ಕಿ.ಮೀ. ಅಂತರದಲ್ಲಿ 8 ತಾಲ್ಲೂಕುಗಳು ಈ ನೂತನ ಜಿಲ್ಲೆಗೆ ಸೇರ್ಪಡೆಯಾಗಬಹುದು. ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಲಿ.

ಯಾವುದೇ ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳು ನಿಗದಿತ ಅಂತರದಲ್ಲಿ ಇರಬೇಕಾದುದು ಆಡಳಿತದ ಹಿತದೃಷ್ಟಿಯಿಂದ ಅಗತ್ಯ. ಆದರೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಉರುಳಿದರೂ ಈ ಭಾಗದ ಜನ ನಿತ್ಯ ಕಚೇರಿ ಕೆಲಸಗಳಿಗಾಗಿ ಬೆಳಗಾವಿ ಕೇಂದ್ರಕ್ಕೆ 300 ರಿಂದ 350 ಕಿ.ಮೀ. ಪ್ರಯಾಸದ ಪ್ರಯಾಣ ಮಾಡುವುದು ತಪ್ಪಿಲ್ಲ. ಈ ಪ್ರಯಾಸ ಇನ್ನೂ ಎಷ್ಟು ದಿನ? ಪ್ರಾದೇಶಿಕ ಅಸಮಾನತೆಯನ್ನು ತಕ್ಕಮಟ್ಟಿಗಾದರೂ ಕಡಿಮೆ ಮಾಡಬೇಕಾದರೆ ಅಥಣಿಯನ್ನು ರಾಜ್ಯದ 32ನೇ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಇದು, ಈ ಭಾಗದ ಜನರ ಆಶಯ ಮತ್ತು ಹಕ್ಕೊತ್ತಾಯ.      

-ದೇವೇಂದ್ರ ಬಿಸ್ವಾಗರ, ಅಥಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.