ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 14 ಮೇ 2023, 19:51 IST
Last Updated 14 ಮೇ 2023, 19:51 IST
ಅಕ್ಷರ ಗಾತ್ರ

ಭರವಸೆಯ ಬೆಳಕಾಗಿ

ರಾಜ್ಯದ ಜನತೆ ನೀಡಿರುವ ತೀರ್ಪಿನಲ್ಲಿ ಅಭಿಮಾನಕ್ಕಿಂತ ಹೆಚ್ಚಾಗಿ ಈ ಹಿಂದೆ ಬೇಸ್ತು ಬಿದ್ದಿದ್ದ ಭಯವಿದೆ!
ಮುಂದಿನ ದಾರಿಗೆ ಬೆಳಕು ತೋರುವರೆಂಬ ಭರವಸೆಯಿದೆ ದಯಮಾಡಿ ನೆಪ ಹೇಳಬೇಡಿ
ವೃಥಾ ಆರೋಪದಿ ಕಾಲಕಳೆಯಬೇಡಿ ಆಕಾಶವನ್ನು ಕೆಳಗಿಳಿಸದಿದ್ದರೂ ಪರವಾಗಿಲ್ಲ 
ಹತಾಶೆಯಲಿ ಆಕಾಶ ನೋಡುವಂತೆ ಮಾತ್ರ ಆಳಬೇಡಿ...

ಜೆ.ಬಿ.ಮಂಜುನಾಥ, ಪಾಂಡವಪುರ

ಬೇಡ ಬಣ ರಾಜಕೀಯ

ಕರ್ನಾಟಕದ ಪಾಲಿಗೆ ಅತ್ಯಂತ ಸಂತೋಷದ ವಿಷಯವೆಂದರೆ, ಮತದಾರ ಪ್ರಭು ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದು. ಒಂದುವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದರೆ, ಜನಸೇವೆಯೊಂದನ್ನು ಬಿಟ್ಟು ಸರ್ಕಾರ ರಚನೆಗಾಗಿ ಬೇರೆಲ್ಲ ಕಸರತ್ತುಗಳು ಗರಿಗೆದರುತ್ತಿದ್ದವು. ಆಗ ಜನಕಲ್ಯಾಣ ನಗಣ್ಯವಾಗುತ್ತಿತ್ತು.

ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷ ಈಗ ಅಧಿಕಾರಕ್ಕಾಗಿ ಬಣಗಳಾಗಿ ಕಿತ್ತಾಡದೆ, ತಾನು ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗಾಗಿ ಘೋಷಿಸಿರುವ ‘ಗ್ಯಾರಂಟಿ’ ಆಶ್ವಾಸನೆಗಳನ್ನು ಆದಷ್ಟು ಬೇಗ ಈಡೇರಿಸಲು ಮುಂದಾಗಬೇಕು. ಜೊತೆಗೆ ಭ್ರಷ್ಟಚಾರಮುಕ್ತ ಆಡಳಿತ ನೀಡಬೇಕು. ದುರಾಡಳಿತದಿಂದ ಬೇಸತ್ತಿರುವ ಜನರಿಗೆ ಆಶಾಕಿರಣವಾಗಿ ಹೊರಹೊಮ್ಮಿದರೆ ಮಾತ್ರ ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೀರಿ, ಇಲ್ಲದಿದ್ದಲ್ಲಿ ನೀವು ಕೂಡ ಹತ್ತರಲ್ಲಿ ಹನ್ನೊಂದು ಎಂಬಂತಾಗುತ್ತೀರಿ.

ಅಶೋಕ ಪ. ಹೊನಕೇರಿ, ಧಾರವಾಡ

ಮರಗಳಿಗೆ ಮುಳುವಾಗದಿರಲಿ ಗೆದ್ದಲು

ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ದೇವಸ್ಥಾನವೊಂದರ ಆವರಣದಲ್ಲಿನ ಬೇವಿನ ಮರವು ಬುಡಸಮೇತ ಬಿದ್ದು ಕ್ಯಾಂಟರ್ ವಾಹನ ಜಖಂಗೊಂಡಿರುವುದು ವರದಿಯಾಗಿದೆ (ಪ್ರ.ವಾ., ಮೇ 12). ಪತ್ರಿಕೆಯಲ್ಲಿ ಪ್ರಕಟವಾಗಿರುವ ಚಿತ್ರವನ್ನು ಗಮನಿಸಿದರೆ, ಕಾಂಡದ ಬುಡವು ಗೆದ್ದಲು ಹುಳುಗಳಿಂದ ಹಾನಿಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗೆದ್ದಲು ಗೂಡುಗಳು ಭೂಮಿಯೊಳಗೆ ಮತ್ತು ಹುತ್ತಗಳ ರೂಪದಲ್ಲಿ ತಮ್ಮ ಗೂಡಿಗೆ ಆಹಾರವನ್ನು ತರುವ ಉದ್ದೇಶದಿಂದ ಮರದ ಬೇರನ್ನು ತಲುಪಿ, ಅಲ್ಲಿರುವ ಸೆಲ್ಯುಲೋಸ್ ಎಂಬ ವಸ್ತುವನ್ನು ಆಹಾರವಾಗಿ ತಿನ್ನುತ್ತವೆ. ಇದರಿಂದ ಮರ ಒಣಗಲು ಶುರುವಾಗುತ್ತದೆ. ನಂತರ ಬುಡದ ಭಾಗ ಹಾಗೂ ಪೂರ್ಣ ಬೇರನ್ನು ಕೂಡ ಅವು ತಿನ್ನುವುದರಿಂದ ಮರಗಳು ಸಂಪೂರ್ಣವಾಗಿ ಒಣಗಿ, ಮಳೆ ಗಾಳಿಯ ರಭಸಕ್ಕೆ ಸುಲಭವಾಗಿ ಕೆಳಗೆ ಬೀಳುತ್ತವೆ.

ಸಂಬಂಧಪಟ್ಟ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ, ಮರಗಳ ಸಮೀಪದಲ್ಲಿ ಗೆದ್ದಲಿನ ಗೂಡುಗಳು ಇರುವುದನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರಿಂದ ಮರಗಳಿಗೆ ರಕ್ಷಣೆ ಒದಗಿಸಬಹುದು ಹಾಗೂ ಸಾರ್ವಜನಿಕರಿಗೆ ಆಗುವ ಅಪಾಯವನ್ನು ತಡೆಯಬಹುದು.

ಡಾ. ಡಿ.ರಾಜಗೋಪಾಲ್, ಬೆಂಗಳೂರು

ಎಂಜಿನ್‌, ಬೋಗಿ ಸಂಬಂಧವೆಂದರೆ...

‘ಡಬಲ್ ಎಂಜಿನ್’ ಸರ್ಕಾರದ ಪ್ರತಿಪಾದನೆಯನ್ನು ಕರ್ನಾಟಕದ ಮತದಾರರು ತಿರಸ್ಕರಿಸಿರುವ ಈ ಸಂದರ್ಭದಲ್ಲಿ, ಪಕ್ಷ ಹಾಗೂ ಶಾಸಕರ ನಡುವೆ ಎಂಜಿನ್, ಬೋಗಿ ಸಂಬಂಧ ಇರಬೇಕೇ ಎಂಬ ಪ್ರಶ್ನೆಯನ್ನೂ ಪರಿಶೀಲಿಸಬೇಕಾಗಿದೆ. ಜಗದೀಶ ಶೆಟ್ಟರ್ ಅವರ ಸೋಲು ಕೂಡ ಉಮೇದುವಾರನೊಬ್ಬ ಸ್ವಂತ ವಿಚಾರ, ಬಲ, ಸಾಧನೆ ಇಟ್ಟುಕೊಂಡರೆ ಗೆಲ್ಲಲು‌ ಅಷ್ಟೇ ಸಾಕಾಗದು ಎಂಬುದನ್ನು ತೋರಿಸುತ್ತದೆ. 2004ರಲ್ಲಿ ಬಂಗಾರಪ್ಪನವರು ‘ನಾನು ಯಾವತ್ತೂ ಎಂಜಿನ್ನೇ ಹೊರತು ಬೋಗಿ ಅಲ್ಲ. ಕೆಲವು ಸಲ ಎಂಜಿನ್ ನಿಂತಿರಬಹುದು, ಇಂದಿರಾ ಗಾಂಧಿಯವರಿಗೇ 1977ರಲ್ಲಿ ಹಾಗಾಗಿತ್ತಲ್ಲ’ ಎಂದಿದ್ದುದು ನೆನಪಾಗುತ್ತದೆ. ಟಿಕೆಟ್ ನಿರಾಕರಿಸಿದ ನಾಯಕರಿಗೆ ಸಡ್ಡು ಹೊಡೆದ ಲಕ್ಷಣ ಸವದಿ ಗೆದ್ದಿದ್ದಾರೆ. ಅವರೂ ಪಕ್ಷ ಬದಲಿಸಿದ್ದರು. ಯಾವ ಪಕ್ಷ ಸೇರಿದರೂ ಗೆಲ್ಲಬೇಕಾದರೆ ಅವರು ಸ್ವಂತ ಎಂಜಿನ್ ಆಗಿರಬೇಕೇನೊ. ಹಾಗಾದರೆ ಶೆಟ್ಟರ್ ಬರೀ ಬೋಗಿಯೇ? ಕಾಂಗ್ರೆಸ್ ಎಂಜಿನ್ ಓಡಿದರೂ, ಈ ಬೋಗಿ ನಿಂತಿತಲ್ಲಾ!

ಸಿದ್ಧಾಂತದ ಪ್ರಶ್ನೆಯನ್ನೂ ಶೆಟ್ಟರ್ ಅವರು ಎದುರಿಸಬೇಕಾಯಿತು. ಬಂಗಾರಪ್ಪನವರು ‘ಸಂಘ ಪರಿವಾರದ ಚಿಂತನೆಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ ನಂತರವೇ ಬಿಜೆಪಿ ಸೇರಿದ್ದೇನೆ’ ಎಂದಿದ್ದರು. ವಿರುದ್ಧ ದಿಕ್ಕಿನಲ್ಲಿ ಪಕ್ಷಾಂತರ ಮಾಡಿರುವ ಶೆಟ್ಟರ್ ಅವರು ಕಾಂಗ್ರೆಸ್ ಚಿಂತನೆಗಳ ಬಗೆಗೆ ಹಾಗೆ ಹೇಳಬಲ್ಲರೇ? ಇಂಗ್ಲಿಷ್‌ನಲ್ಲಿ ಇನ್ನೊಂದು ‘ಬೋಗಿ’ ಇದೆ. ಇದು ಕನ್ನಡದಲ್ಲಿ ಗುಮ್ಮ, ಬೆದರುಬೊಂಬೆ ಎಂದಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಡಬಲ್ ಎಂಜಿನ್ ವಿಚಾರವನ್ನು ಹಾಗೂ ಬಳಸಿದರು. ಆದರೆ, ನಡೆಯಲಿಲ್ಲ. ಮುಂದೆ ಪ್ರಚಾರದಲ್ಲಿ ಈ ಮಂತ್ರವನ್ನು ಬಳಸುವ ಎಲ್ಲರಿಗೂ ಈ ಫಲಿತಾಂಶ ಎಚ್ಚರಿಕೆಯ ಸಂದೇಶವಾಗಲಿ.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಮತದಾರರ ಗೆಲುವು ಗೌರವಿಸಿ

ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಜಯಭೇರಿ ಬಾರಿಸಿದ ಮೇಲೆ ನಡೆದ ಮುಖ್ಯಮಂತ್ರಿ ಆಯ್ಕೆಯ ಕಸರತ್ತನ್ನು ಮತದಾರರು ಗಮನಿಸಿದ್ದಾರೆ. ಗೆಲುವಿಗೆ ಕಾರಣ ಯಾವುದೇ ಜಾತಿ, ಧರ್ಮಕ್ಕೆ ಸೇರಿದ ಮಠ, ಮಂದಿರ ಸ್ವಾಮೀಜಿಗಳಲ್ಲ ಅಥವಾ ಪೂಜೆ ಪುನಸ್ಕಾರ ಜಪತಪಗಳಲ್ಲ. ಕಾಂಗ್ರೆಸ್ ಗೆಲುವು ಮತದಾರರ ಗೆಲುವು. ಈ ಗೆಲುವಿನ ಹಿಂದೆ ವೈಚಾರಿಕ ಪ್ರಜ್ಞೆಯುಳ್ಳ ಅನೇಕ ಜಾತ್ಯತೀತ ಮನಸ್ಸುಗಳೂ ಇವೆ.

ಶಾಸಕಾಂಗದ ಮುಂದೆ ತೆರೆದ ಸಂವಿಧಾನ ಇರುವಾಗ, ಮಠಗಳಲ್ಲಿ ಸಮಾಲೋಚನೆ ಮಾಡಿ ಸ್ವಾಮೀಜಿಗಳಿಗೆ ಮೊರೆ ಹೋಗುವ ಅಗತ್ಯ ಇದೆಯೇ? 2024ರಲ್ಲಿ ಬರಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಒಳ್ಳೆಯ ಆಡಳಿತ ಕೊಡುವತ್ತ ಸರ್ಕಾರ ಪ್ರಯತ್ನ ನಡೆಸಲಿ.

ತಾ.ಸಿ.ತಿಮ್ಮಯ್ಯ, ಬೆಂಗಳೂರು 

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT