ಮಂಗಳವಾರ, ನವೆಂಬರ್ 19, 2019
23 °C

ಪ್ರತಿಮೆಯಿಂದ ವ್ಯಕ್ತಿತ್ವ ಎತ್ತರಕ್ಕೇರದು

Published:
Updated:

ಸರ್ದಾರ್ ವಲ್ಲಭಬಾಯಿ ಪಟೇಲರ ವ್ಯಕ್ತಿತ್ವದ ಕುರಿತು ಎ.ಸೂರ್ಯಪ್ರಕಾಶ್‌ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ನ. 5) ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗ್ಗೆ ಭಾರತೀಯರೆಲ್ಲರ ಸಹಮತ ಇದೆ ಎಂದೇ ನನ್ನ ನಂಬಿಕೆ.

ನಾವೆಲ್ಲಾ ಬಹಳ ಹಿಂದೆಯೇ, ಅಂದರೆ ವಿದ್ಯಾರ್ಥಿ ದೆಸೆಯಲ್ಲಿಯೇ ಪಟೇಲರ ಬಗ್ಗೆ ಓದಿ, ಕೇಳಿ ಅವರ ಕುರಿತು ಅಭಿಮಾನ, ಪ್ರೀತಿ, ಗೌರವ, ಆದರವನ್ನು ಗಟ್ಟಿ ಮಾಡಿಕೊಂಡಿರುತ್ತೇವೆ. ಅಂದರೆ ಇತ್ತೀಚೆಗೆ ನಿರ್ಮಾಣವಾದ ಪಟೇಲರ ಬೃಹತ್‌ ಪ್ರತಿಮೆಯಿಂದಲೋ ಅಥವಾ ರಾಜಕೀಯಪ್ರೇರಿತ ವಿಚಾರಗಳಿಂದಲೋ ನಾವ್ಯಾರೂ ಹೊಸದಾಗಿ ಪ್ರಭಾವಿತರಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇದನ್ನೂ ಓದಿ: ಪಟೇಲರು ಇನ್ನು ಅವರಿಗೆ ಸಿಗಲಾರರು!

‘ಸರ್ದಾರ್ ಪಟೇಲರ ಎತ್ತರದ ಪ್ರತಿಮೆಯನ್ನು ಗುಜರಾತಿನಲ್ಲಿ ನಿರ್ಮಿಸಲು ಪ್ರಧಾನಿ ತೀರ್ಮಾನಿಸಿದ್ದು ಹಾಗೂ ಅವರ ಕೊಡುಗೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರ ಫಲವಾಗಿ ಪಟೇಲರ ಕೊಡುಗೆಗಳ ಕಡೆಗೆ ಜನರ ಗಮನ ತಿರುಗಿದೆ. ಅವರ ಸಾಧನೆಗಳ ಮೇಲೆ ಮುಸುಕು ಹೊದಿಸಲು ಒಂದು ಕುಟುಂಬವು ಏಳು ದಶಕಗಳಿಗೂ ಹೆಚ್ಚು ಕಾಲ ಎಸಗಿದ ವಂಚನೆ ಹಾಗೂ ತೋರಿದ ಸಣ್ಣತನದ ಬಗ್ಗೆ ಜನರಿಗೆ ಗೊತ್ತಾಗಿದೆ’ ಎಂದು ಲೇಖಕರು ಸತ್ಯಕ್ಕೆ ದೂರವಾದ ಮಾತುಗಳನ್ನು ಹೇಳಿದ್ದಾರೆ.

ಈ ಮೂಲಕ ಒಬ್ಬರನ್ನು ಮೆಚ್ಚಿಸಲು, ಇನ್ನೊಬ್ಬರನ್ನು ತೆಗಳಿದ್ದಾರೆ.ಪಟೇಲರ ಸಾಧನೆಗಳ ಮೇಲೆ ಮುಸುಕು ಹೊದಿಸಲು ಒಂದು ಕುಟುಂಬವು ಏಳು ದಶಕಗಳಿಗೂ ಹೆಚ್ಚು ಕಾಲದಿಂದ ವಂಚನೆ ಎಸಗಿದ್ದರೆ, ಕೋಟಿ, ಕೋಟಿ ಭಾರತೀಯರ ಮನದಲ್ಲಿ ಪಟೇಲರು ಅಜರಾಮರರಾಗಿ ಉಳಿಯುವುದಕ್ಕೆ ಎಲ್ಲಿ ಸಾಧ್ಯವಾಗುತ್ತಿತ್ತು? ಪಟೇಲರು ತಮ್ಮ ವ್ಯಕ್ತಿತ್ವ ಮತ್ತು ಮಾಡಿದ ಕೆಲಸಗಳಿಂದಾಗಿ ಆಗಲೇ ಎತ್ತರದಲ್ಲಿದ್ದಾರೆ. ಅವರ ಎತ್ತರದ ಪ್ರತಿಮೆ ನಿರ್ಮಿಸಿ ನಾವು ಅವರ ವ್ಯಕ್ತಿತ್ವವನ್ನು ಎತ್ತರಕ್ಕೆ ಏರಿಸಿದ್ದೇವೆ ಎಂದುಕೊಳ್ಳುವುದು ಕೇವಲ ಭ್ರಮೆಯಲ್ಲದೆ ಮತ್ತೇನಲ್ಲ.
-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರತಿಕ್ರಿಯಿಸಿ (+)