ಬುಧವಾರ, ಸೆಪ್ಟೆಂಬರ್ 23, 2020
23 °C
ಭಾರತವನ್ನು ಒಗ್ಗೂಡಿಸಿದ ವ್ಯಕ್ತಿ, ಲಕ್ಷಾಂತರ ಜನರ ಹೃದಯಗಳಲ್ಲಿ ನೆಲೆಸಿದ್ದಾರೆ

ಪಟೇಲರು ಇನ್ನು ಅವರಿಗೆ ಸಿಗಲಾರರು!

ಎ.ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ಸರ್ದಾರ್ ಪಟೇಲರು ಕಾಂಗ್ರೆಸ್ಸಿಗೆ ನಿಷ್ಠೆ ಹೊಂದಿದ್ದ ನಾಯಕರಾಗಿದ್ದರು, ಜವಾಹರಲಾಲ್ ನೆಹರೂ ಅವರ ನಿಕಟ ಒಡನಾಡಿ ಆಗಿದ್ದರು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅಲ್ಲದೆ, ಅವರನ್ನು ‘ತನ್ನವರನ್ನಾಗಿಸಿಕೊಳ್ಳುವ’ ಬಿಜೆಪಿಯ ಪ್ರಯತ್ನದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಪಟೇಲರ ಜೀವನ, ಸಾಧನೆಗಳ ಬಗ್ಗೆ ಬಿಜೆಪಿ ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ಪ್ರಶ್ನಿಸಿದವರಲ್ಲಿ, ಪಟೇಲರ ಮೇಲೆ ವಿಪರೀತ ಹೊಗಳಿಕೆ ಸುರಿಸಿದವರಲ್ಲಿ ಪ್ರಿಯಾಂಕಾ ಅವರು ಕಾಂಗ್ರೆಸ್ಸಿನ ಮೊದಲ ವ್ಯಕ್ತಿಯೇನೂ ಅಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲವರು ಈ ಕೆಲಸ ಮಾಡಿದ್ದಾರೆ. ಆದರೆ, ಹೀಗೆ ಮಾಡಿದ್ದು ‘ತೀರಾ ಅಲ್ಪ, ತೀರಾ ತಡ’ ಎಂಬಂತೆ ಆಗಿದೆ. ಹೀಗೆ ಮಾಡುತ್ತಿರುವುದಕ್ಕೆ ಒಂದು ದೊಡ್ಡ ಕಾರಣ ಇದೆ– ಅದು, ನೆಹರೂ ಅವರ ಕಾಲದಿಂದಲೂ ನೆಹರೂ- ಗಾಂಧಿ ಕುಟುಂಬ ಹೊಂದಿರುವ ಅಭದ್ರತೆಯ ಭಾವನೆ ಹಾಗೂ ಸಣ್ಣತನ. ಇದರ ಬಗ್ಗೆ ಗಮನಹರಿಸುವ ಮೊದಲು, ಭಾರತವನ್ನು ಒಗ್ಗೂಡಿಸಿದ ವ್ಯಕ್ತಿಯ ಅಸಾಮಾನ್ಯ ಸಾಧನೆಗಳತ್ತ ಒಂದು ನೋಟ ಹರಿಸೋಣ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನ ತಾವೂ ಸ್ವತಂತ್ರರಾಗಿ ಉಳಿದುಬಿಡುವ ಅಥವಾ ಪಾಕಿಸ್ತಾನದ ಜೊತೆ ಸೇರಿಕೊಳ್ಳುವ ಅವಕಾಶ ಹೊಂದಿದ್ದ 560ಕ್ಕೂ ಹೆಚ್ಚಿನ ರಾಜ್ಯಗಳನ್ನು ಭಾರತದ ಜೊತೆ ವಿಲೀನಗೊಳಿಸುವ ದುರ್ಗಮ ಕೆಲಸವನ್ನು ಪಟೇಲರು ಕೈಗೆತ್ತಿಕೊಂಡರು. ಆ ಎರಡರಲ್ಲಿ ಯಾವುದಾದರೊಂದನ್ನು ಕೆಲವೇ ರಾಜ್ಯಗಳು ಆಯ್ಕೆ ಮಾಡಿಕೊಂಡಿದ್ದರೂ, ಭಾರತವನ್ನು ಒಗ್ಗೂಡಿಸುವ ಕೆಲಸ ಕಷ್ಟವಾಗುತ್ತಿತ್ತು. ಉದಾಹರಣೆಗೆ, ಹೈದರಾಬಾದಿನ ನಿಜಾಮ ಹಾಗೂ ಜುನಾಗಡದ ನವಾಬ ಪಾಕಿಸ್ತಾನದ ಜೊತೆ ವಿಲೀನಗೊಳ್ಳಲು ತೀರ್ಮಾನಿಸಿದ್ದರು. ಭೋಪಾಲ್‌ನ ರಾಜ ಸ್ವತಂತ್ರವಾಗಿ ಉಳಿಯಲು ಬಯಸಿದ್ದ. ಪಟೇಲರು ಅವರೊಂದಿಗೆ ಮಾತುಕತೆ ನಡೆಸಿದರು, ಮನವೊಲಿಸಲು ಯತ್ನಿಸಿದರು. ಸಂದರ್ಭ ಎದುರಾದಾಗ ‘ದಾರಿಗೆ ಬರುವಂತೆ’ ಅವರ ಮೇಲೆ ಒತ್ತಡ ತಂದರು. ಪಟೇಲರ ಬದ್ಧತೆಯೊಂದು ಇಲ್ಲದೇ ಇದ್ದಿದ್ದರೆ, 1947ರ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ಪಡೆದ ಭಾರತ ಚೂರುಚೂರಾಗಿ ಹೋಗುತ್ತಿತ್ತು. ಹಾಗಾಗಿ, ನಮ್ಮ ಭೌಗೋಳಿಕ ಹಾಗೂ ರಾಜಕೀಯ ಏಕತೆಯ ಹಿಂದೆ ಪಟೇಲರ ಕೊಡುಗೆ ಇದೆ.

ಕಾಶ್ಮೀರದ ವಿಚಾರವನ್ನು ಒಮ್ಮೆ ನೋಡೋಣ. ಏನು ಮಾಡುವುದು ಎಂಬ ಬಗ್ಗೆ ನೆಹರೂ ಗೊಂದಲದಲ್ಲಿ ಇದ್ದಾಗ, ಅಲ್ಲಿನ ಮಹಾರಾಜ ವಿಲೀನ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿದವರು ಪಟೇಲರು. ಸಹಿ ಹಾಕಿದ ಮಾರನೆಯ ದಿನವೇ, ಅಂದರೆ 1947ರ ಅಕ್ಟೋಬರ್ 27ರಂದು, ಸೇನೆಯ ಒಂದು ತುಕಡಿ ಅಲ್ಲಿಗೆ ತಲುಪುವಂತೆ ಮಾಡಿದರು. ಆದರೆ, ಸೈನಿಕರು ಇದ್ದ ವಿಮಾನ, ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತದೆ ಎಂಬ ಖಾತರಿ ಸರ್ಕಾರಕ್ಕೆ ಇರಲಿಲ್ಲ. ಪಾಕಿಸ್ತಾನದ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿ ರಾಜ್ಯದೊಳಕ್ಕೆ ನುಗ್ಗಿದ್ದರು. ಅದೃಷ್ಟವಶಾತ್, ಮೊದಲ ತುಕಡಿ ಇದ್ದ ವಿಮಾನವು ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಸೈನಿಕರು ವಿಮಾನ ನಿಲ್ದಾಣಕ್ಕೆ ಭದ್ರತೆ ಒದಗಿಸಿದರು, ಮತ್ತೂ ಒಂದಿಷ್ಟು ತುಕಡಿಗಳು ಅಲ್ಲಿಗೆ ಬಂದಿಳಿಯಲು ಅನುಕೂಲ ಮಾಡಿಕೊಟ್ಟರು.

ಪಾಕಿಸ್ತಾನದವರು ವಶಪಡಿಸಿಕೊಂಡಿದ್ದ ಹಲವು ನಗರಗಳನ್ನು ಭಾರತದ ಸೇನೆ ನಂತರ ಮರುವಶಪಡಿಸಿಕೊಂಡಿತು. ಸರ್ದಾರ್ ಪಟೇಲರು ಭಾರತದ ‘ಉಕ್ಕಿನ ಮನುಷ್ಯ’ ಮಾತ್ರವೇ ಅಲ್ಲ, ಅವರ ವ್ಯಕ್ತಿತ್ವ ಇನ್ನೂ ದೊಡ್ಡದು. ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಕೂಡ ಆಗಿದ್ದರು. 1946ರಲ್ಲಿ ಮಾಡಿದ ಅಸಾಮಾನ್ಯ ತ್ಯಾಗವನ್ನು ಗಮನಿಸಿದರೆ, ಅವರು ಬಹುಶಃ ಜವಾಹರಲಾಲ್ ನೆಹರೂ ಅವರಿಗಿಂತಲೂ ಹೆಚ್ಚು ಶಿಸ್ತು ಹೊಂದಿದ್ದರು ಅನಿಸುತ್ತದೆ.

ಆ ವರ್ಷ ಕಾಂಗ್ರೆಸ್ ಪಕ್ಷವು ಹೊಸ ಅಧ್ಯಕ್ಷರನ್ನು ಚುನಾಯಿಸಬೇಕಿತ್ತು. ಆಗ ಅಧ್ಯಕ್ಷರಾಗಿ ಆಯ್ಕೆಯಾಗುವವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಕೂಡ ಆಗುವವರಿದ್ದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಹದಿನೈದು ಪ್ರಾದೇಶಿಕ ಕಾಂಗ್ರೆಸ್ ಸಮಿತಿಗಳಿಂದ ನಾಮನಿರ್ದೇಶನವನ್ನು ಆಹ್ವಾನಿಸಿತು. ಅವುಗಳಲ್ಲಿ 12 ಸಮಿತಿಗಳು ಪಟೇಲರ ಪರ ನಿಂತವು. ಇನ್ನುಳಿದ ಸಮಿತಿಗಳು ಯಾರ ಪರವೂ ನಿಲ್ಲಲಿಲ್ಲ. ಅಂದರೆ, ಒಂದೇ ಒಂದು ಪ್ರದೇಶ ಕಾಂಗ್ರೆಸ್ ಸಮಿತಿ ಕೂಡ ನೆಹರೂ ಪರ ನಿಲ್ಲಲಿಲ್ಲ. ಹೀಗಿದ್ದರೂ, ತಾನು ಯಾರ ಕೈಕೆಳಗೂ ಕೆಲಸ ಮಾಡುವುದಿಲ್ಲ ಎಂಬ ಸಂದೇಶವನ್ನು ನೆಹರೂ ಅವರು ಗಾಂಧೀಜಿ ಅವರಿಗೆ ನೀಡಿದರು. ನೆಹರೂ ಅವರು ಪ್ರಧಾನಿಯಾಗಬೇಕು ಎಂದು ಗಾಂಧೀಜಿ ಬಯಸಿದ್ದರು– ಇದಕ್ಕೆ ಕಾರಣ ಏನು ಎಂಬುದು ಅವರಿಗೇ ಗೊತ್ತು. ಕೆಳಗಿಳಿಯಬೇಕು ಎಂಬ ಸೂಚನೆಯನ್ನು ಅವರು ಪಟೇಲರಿಗೆ ನೀಡಿದರು. ಗಾಂಧೀಜಿ ಅವರ ಸೂಚನೆಯನ್ನು ಪಟೇಲರು ಒಪ್ಪಿದರು. ಕಾಂಗ್ರೆಸ್ ಪಕ್ಷದ ಏಕತೆಗಾಗಿ ಪಟೇಲರು ಮಾಡಿದ ಬಹುದೊಡ್ಡ ತ್ಯಾಗ ಇದು.

ಕಾಂಗ್ರೆಸ್ ಪಕ್ಷವು ನೆಹರೂ- ಗಾಂಧಿ ಕುಟುಂಬದ ನಿಯಂತ್ರಣಕ್ಕೆ ಒಳಪಟ್ಟು, ಪ್ರೈವೇಟ್ ಲಿಮಿಟೆಡ್ ಕಂಪನಿಯ ರೀತಿ ಕೆಲಸ ಮಾಡುತ್ತಿದ್ದ ಕಾರಣ ಅದು, ಈ ಕುಟುಂಬಕ್ಕೆ ಸೇರಿರದ ಮುಖಂಡರ ಕೊಡುಗೆಗಳನ್ನು ‘ಅಮುಖ್ಯ’ವೆಂದು ಬಿಂಬಿಸಲು, ಈ ಕುಟುಂಬದ ಸಾಧನೆಗಳನ್ನು ‘ಅಸಾಮಾನ್ಯ’ವೆಂದು ಬಿಂಬಿಸಲು ಅಗತ್ಯವಿರುವ ಎಲ್ಲವನ್ನೂ 1947ರ ನಂತರ ಮಾಡಿತು. ನೆಹರೂ ಅವರು ಬಹುದೊಡ್ಡ ಪ್ರಜಾತಂತ್ರವಾದಿ ಎಂಬ ಪ್ರಶಂಸೆಗೆ ಕಾರಣರಾಗಿದ್ದರೂ, ಈ ಪ್ರಕ್ರಿಯೆಗಳು ಅವರ ಜೀವಿತಾವಧಿಯಲ್ಲೇ ಆರಂಭವಾದವು. ಇನ್ನೊಬ್ಬರ ಸಾಧನೆಗಳನ್ನು ನಗಣ್ಯವೆಂಬಂತೆ ಕಾಣುವ ಈ ಕುಟುಂಬದ ಕೆಟ್ಟ ಪ್ರಯತ್ನಗಳಿಗೆ ಬಲಿಯಾದವರಲ್ಲಿ ಪಟೇಲರು, ಡಾ. ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ. ನರಸಿಂಹ ರಾವ್ ಸೇರಿದಂತೆ ಹಲವರು ಇದ್ದಾರೆ.

ಪಟೇಲರು ಒಂದಾದ ಭಾರತವನ್ನು ಕೊಟ್ಟರು. ಹೀಗಿದ್ದರೂ, ‘ಭಾರತರತ್ನ’ ಪ್ರಶಸ್ತಿ ನೀಡುವ ಪರಿಪಾಟ 1954ರಿಂದ ಆರಂಭವಾದ ನಂತರ, ಅದನ್ನು ನೆಹರೂ ಅವರು ಪಟೇಲರಿಗೆ ನೀಡಲಿಲ್ಲ. ಬದಲಿಗೆ, 1955ರಲ್ಲಿ ನೆಹರೂ ಅವರು ಆ ಪ್ರಶಸ್ತಿಯನ್ನು ತಮಗೆ ತಾವೇ ಕೊಟ್ಟುಕೊಂಡರು. 1971ರಲ್ಲಿ ಇಂದಿರಾ ಗಾಂಧಿ ಅವರೂ ಆ ಪ್ರಶಸ್ತಿಯನ್ನು ತಮಗೆ ತಾವೇ ಕೊಟ್ಟುಕೊಂಡರು. 1991ರಲ್ಲಿ ರಾಜೀವ್ ಗಾಂಧಿ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಆದರೆ, ಸರ್ದಾರ್ ಪಟೇಲರಾಗಲಿ, ಅಂಬೇಡ್ಕರ್ ಅವರಾಗಲಿ ಈ ಗೌರವಕ್ಕೆ ಅರ್ಹರು ಎಂದು ಇವರ‍್ಯಾರಿಗೂ ಅನಿಸಲಿಲ್ಲ. ಕೊನೆಗೂ, ಈ ಇಬ್ಬರಿಗೆ ಈ ಗೌರವವನ್ನು ಸಮರ್ಪಿಸಿದ್ದು ಕಾಂಗ್ರೆಸ್ಸೇತರ ಸರ್ಕಾರಗಳು.

ಪ್ರಧಾನಿಗಳಾಗಿದ್ದ ಶಾಸ್ತ್ರಿ ಮತ್ತು ನರಸಿಂಹ ರಾವ್ ಅವರ ಜನಪ್ರಿಯತೆ ಕಂಡು ಈ ಕುಟುಂಬದ ವಿಶ್ವಾಸ ಕುಂದಿತ್ತು. ರಾವ್ ಅವರು 2004ರಲ್ಲಿ ಮೃತಪಟ್ಟಾಗ, ಅವರ ಮೃತದೇಹವು ಪಕ್ಷದ ಮುಖ್ಯ ಕಚೇರಿಯ ಆವರಣ ಪ್ರವೇಶಿಸದಂತೆ ‘ಕುಟುಂಬ’ ನೋಡಿಕೊಂಡಿತು.

ಸರ್ದಾರ್ ಪಟೇಲ್ ಅವರ ಎತ್ತರದ ಪ್ರತಿಮೆಯನ್ನು ಗುಜರಾತ್‌ನಲ್ಲಿ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತೀರ್ಮಾನಿಸಿದ್ದು ಹಾಗೂ ಅವರ ಕೊಡುಗೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರ ಫಲವಾಗಿ ಪಟೇಲರ ಕೊಡುಗೆಗಳ ಬಗ್ಗೆ ಜನರ ಗಮನ ತಿರುಗಿದೆ. ಅವರ ಸಾಧನೆಗಳ ಮೇಲೆ ಮುಸುಕು ಹೊದೆಸಲು ಒಂದು ಕುಟುಂಬವು ಏಳು ದಶಕಗಳಿಗೂ ಹೆಚ್ಚು ಕಾಲ ಎಸಗಿದ ವಂಚನೆ ಹಾಗೂ ತೋರಿದ ಸಣ್ಣತನದ ಬಗ್ಗೆ ಜನರಿಗೂ ಗೊತ್ತಾಗಿದೆ. ಅವರು ಈಗ ಎಷ್ಟೇ ಪ್ರಯತ್ನ ಮಾಡಿದರೂ, ಪಟೇಲರನ್ನು ತಮ್ಮವರನ್ನಾಗಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ಈಗ ಲಕ್ಷಾಂತರ ಜನರ ಹೃದಯಗಳಲ್ಲಿ ಇದ್ದಾರೆ.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು