ಗುರುವಾರ , ಆಗಸ್ಟ್ 5, 2021
28 °C

ವೈದ್ಯರ ಸಂಕಷ್ಟಕ್ಕೆ ಕಿವಿಗೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿರುವುದು ವರದಿಯಾಗಿದೆ. ಆ ವರದಿಯ ವಿವರಗಳನ್ನು ಗಮನಿಸಿದಾಗ ಕೆಲವು ಆಘಾತಕಾರಿ ಅಂಶಗಳು‌ ಕಂಡುಬಂದವು. ಈ ವೈದ್ಯರು ಮಾರ್ಚ್ ತಿಂಗಳಿನಿಂದ ಒಂದು ದಿನವೂ ರಜೆ ಇಲ್ಲದೆ ಸತತವಾಗಿ ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರ ಪತ್ನಿಯೂ ಅದೇ ಆಸ್ಪತ್ರೆಯಲ್ಲಿ ನೇತ್ರತಜ್ಞರಾಗಿದ್ದು, ಇವರಿಬ್ಬರೂ ತಮ್ಮ ಸಣ್ಣ ಮಗುವನ್ನು ಸರಿಯಾಗಿ ನೋಡಿಕೊಳ್ಳಲಾಗದ ಮತ್ತು ತಮ್ಮ ಸಂಪರ್ಕದಿಂದ ಅವನಿಗೂ ಕೊರೊನಾ ಸೋಂಕು ತಗಲಬಹುದು ಎಂದು ಆತಂಕಕ್ಕೊಳಗಾಗಿದ್ದರು. ಇದು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯರು ಎದುರಿಸುತ್ತಿರುವ ಸಂಕಷ್ಟಗಳಿಗೆ ಒಂದು ನಿದರ್ಶನವಷ್ಟೆ.

ನಮ್ಮ ದೇಶದಲ್ಲಿ ಆರೋಗ್ಯ ವ್ಯವಸ್ಥೆಯು ವೈದ್ಯರ ಕೊರತೆ, ಬಜೆಟ್ ಅಭಾವ, ಅಸಮರ್ಪಕ ಮೂಲಭೂತ ವ್ಯವಸ್ಥೆಯಂತಹ ಸಮಸ್ಯೆಗಳಿಂದ ನರಳುತ್ತಿದೆ. ಕೊರೊನಾ ಸಾಂಕ್ರಾಮಿಕದಿಂದ ಈ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ. ಇದರ ನೇರ ಪರಿಣಾಮವನ್ನು ಅನುಭವಿಸುತ್ತಿರುವವರು ವೈದ್ಯರು. ಗೃಹವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ವೈದ್ಯಕೀಯ ಕಾಲೇಜುಗಳು ಜೀತದಾಳುಗಳಂತೆ ದುಡಿಸಿಕೊಳ್ಳುತ್ತವೆ. ಕರ್ನಾಟಕದಲ್ಲಿಯೇ ಹಲವು ಖಾಸಗಿ ವೈದ್ಯಕೀಯ ಕಾಲೇಜುಗಳು ಈ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನೇ ಸರಿಯಾಗಿ ನೀಡುವುದಿಲ್ಲ. ವ್ಯಂಗ್ಯದ ವಿಷಯವೆಂದರೆ, ಹಲವು ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು ಈ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಅನುಮತಿಯಿಲ್ಲದೇ ಕಡಿತಗೊಳಿಸಿ ಪಿ.ಎಮ್. ಕೇರ್ಸ್ ನಿಧಿಗೆ ದೇಣಿಗೆ ನೀಡಿವೆ. ಇದಷ್ಟೇ ಅಲ್ಲದೆ ಸುರಕ್ಷತೆಗಾಗಿ ಪಿಪಿಇ ಕಿಟ್‌ಗಳಿಗೆ ಮತ್ತು ಎನ್95 ಮಾಸ್ಕ್‌ಗಳಿಗೆ ಬೇಡಿಕೆ ಇಟ್ಟ ವೈದ್ಯರ ಮೇಲೆ ಶಿಸ್ತುಕ್ರಮ ಜರುಗಿಸುವ ಬೆದರಿಕೆ ಒಡ್ಡಿರುವುದೂ ಇದೆ.

ಚಪ್ಪಾಳೆ ತಟ್ಟುವ, ಪುಷ್ಪವೃಷ್ಟಿ ಮಾಡುವಂತಹ ಚಟುವಟಿಕೆಗಳು ವೈದ್ಯ ವೃಂದದ ಮನೋಸ್ಥೈರ್ಯವನ್ನು ಹೆಚ್ಚಿಸುತ್ತವೆಯಾದರೂ ವೈದ್ಯರ ಬೇಡಿಕೆಗಳಿಗೆ ಕಿವಿಗೊಡದಿದ್ದರೆ, ಅವರ ಕನಿಷ್ಠ ಅಗತ್ಯಗಳನ್ನೂ ಪೂರೈಸದಿದ್ದರೆ ಅವೆಲ್ಲ ಅರ್ಥಹೀನವಾಗಿ ಕಾಣುತ್ತವೆ.

ಡಾ. ಅನಿಲ್ ಎಂ. ಚಟ್ಟಳ್ಳಿ, ಕಲಬುರ್ಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.