ಗುರುವಾರ , ಆಗಸ್ಟ್ 11, 2022
21 °C

ಹೋರಾಟಗಾರರನ್ನು ಹೀಯಾಳಿಸುವ ಹೇಳಿಕೆ ತರವಲ್ಲ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಹೋರಾಟಗಾರರನ್ನು ಹೀಯಾಳಿಸುವ ಬೀಸು ಹೇಳಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಹೇಳಿಕೆಗಳ ಅರ್ಥವ್ಯಾಪ್ತಿಯನ್ನು ಮೀರಿದ ಅಸಹನೆ ಮತ್ತು ಅಪ್ರಬುದ್ಧ ಉದ್ದ ನಾಲಗೆಗಳು ವಿಜೃಂಭಿಸುತ್ತಿವೆ. ಮರಾಠಾ ಅಭಿವೃದ್ಧಿ ನಿಗಮದ ಸ್ಥಾಪನೆಯನ್ನು ವಿರೋಧಿಸಿದ ಕನ್ನಡ ಹೋರಾಟಗಾರರನ್ನು ‘ರೋಲ್‍ಕಾಲ್’ನವರೆಂದೂ ‘ನಕಲಿ ಹೋರಾಟಗಾರ’ರೆಂದೂ ಜರಿಯಲಾಯಿತು. ಮರಾಠಾ ಅಭಿವೃದ್ಧಿ ನಿಗಮದ (ಮೊದಲು ಪ್ರಾಧಿಕಾರ ಎಂದು ಹೇಳಲಾಗಿತ್ತು) ಸ್ಥಾಪನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಒಬ್ಬ ಶಾಸಕರು ಮಹಾರಾಷ್ಟ್ರದಲ್ಲಿ- ಮುಂಬೈನಲ್ಲಿ- ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದ್ದು, ಅದಕ್ಕೆ ಅಲ್ಲಿನ ಸರ್ಕಾರವು ಹತ್ತು ಕೋಟಿ ರೂಪಾಯಿಗಳನ್ನು ಕೊಡುತ್ತಿರುವುದಾಗಿ ಹೇಳಿದರು. ಈ ಹೊಸ ಸಂಶೋಧನೆಗೆ ಮುಂಬೈ ಕನ್ನಡಿಗರು ಬೆಚ್ಚಿಬಿದ್ದು, ಸದರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಹುಡುಕಿಕೊಡಿ ಎಂದು ಕೇಳುತ್ತಿದ್ದಾರೆ. ಇನ್ನು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಕೆಲವು ನಾಯಕರು ಖಲಿಸ್ತಾನಿ
ಗಳನ್ನು ಕಾಣುತ್ತಿದ್ದಾರೆ. ಈ ‘ಸಂಶೋಧನೆ’ಗೂ ಸಮರ್ಥನೆ ಸಿಕ್ಕಿಲ್ಲ. ಹೀಗಾಗಿಯೊ ಏನೊ ಅದು ರೈತ ಚಳವಳಿಯಲ್ಲವೆಂದೂ ವಿರೋಧ ಪಕ್ಷಗಳ ಪ್ರಾಯೋಜಿತ ಹೋರಾಟವೆಂದೂ ಆರೋಪಿಸಹೊರಟಿದ್ದಾರೆ. ರಾಜಕೀಯಪ್ರೇರಿತ ಎನ್ನುತ್ತಿದ್ದಾರೆ. ರಾಜಕೀಯ ಪಕ್ಷದಿಂದಲೇ ರಚಿತವಾದ ಸರ್ಕಾರದ ನಡೆಗಳೂ ಮತ್ತು ಅದಕ್ಕೆ ಪರ ಅಥವಾ ವಿರೋಧದ ಕ್ರಿಯೆಗಳೂ ಸಹಜವಾಗಿಯೇ ರಾಜಕಾರಣದ ವ್ಯಾಪ್ತಿಗೆ ಬರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೈದ್ಧಾಂತಿಕ ರಾಜಕಾರಣ ಮಾಡುವುದು ಯಾವತ್ತೂ ಸಮರ್ಥನೀಯವಾಗಿದ್ದು ‘ಹೌದು, ನಮ್ಮದು ನಿಜಾರ್ಥದ ರಾಜಕಾರಣ’ ಎನ್ನಲು ಹೋರಾಟಗಾರರು ಹಿಂಜರಿಯಬೇಕಾಗಿಲ್ಲ.

ದೆಹಲಿಯಲ್ಲಿನ ರೈತ ಹೋರಾಟಕ್ಕೆ ಇಂತಹ ವಿರೋಧ ವ್ಯಕ್ತಪಡಿಸುವ ನೇತಾರರು ಇರುವಂತೆ, ಕರ್ನಾಟಕದ ರೈತ ಹೋರಾಟಗಾರರನ್ನು ‘ಡೋಂಗಿಗಳು’ ಎಂದು ಹೀಯಾಳಿಸಿದವರೂ ಇದ್ದಾರೆ. ಐದಾರು ವರ್ಷಗಳಿಂದ ಪ್ರಗತಿಪರ, ಜಾತ್ಯತೀತ ವಿಚಾರಧಾರೆಯ ಸಾಹಿತಿಗಳನ್ನೂ ‘ಗಂಜಿಗಿರಾಕಿ’ಗಳೆಂದು ಕರೆದು ಕೆಲವು ನಾಯಕ ಶಿಖಾಮಣಿಗಳು ಸಂಭ್ರಮಿಸುತ್ತಿದ್ದಾರೆ. ಎಲ್ಲ ಹೋರಾಟಗಾರರೂ ಪ್ರಗತಿಪರರೂ ಪರಿಪೂರ್ಣರಲ್ಲವೆಂದು ಒಪ್ಪಿದರೂ ಇಂತಹ ಹೇಳಿಕೆಗಳು ಸಮರ್ಥನೀಯವಲ್ಲ. ಯಾಕೆಂದರೆ ಹೀಗೆ ಹೀಯಾಳಿಸಿ ಹಣೆಪಟ್ಟಿ ಅಂಟಿಸುವುದರಲ್ಲಿ ಅಸಹನೆಯ ಜೊತೆಗೆ ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರವಿರುತ್ತದೆ. ಒಂದು ವೇಳೆ ಹೋರಾಟಗಾರರಲ್ಲಿ ಇದ್ದಿರಬಹುದಾದ ಕೆಲವು ಕೊರತೆಗಳು ಅಪೇಕ್ಷಣೀಯವಲ್ಲದಿದ್ದರೂ ಪ್ರಜಾಸತ್ತಾತ್ಮಕ ಹೋರಾಟಗಳು ಉಳಿಯಬೇಕು, ಬೆಳೆಯಬೇಕು. ನಂಜು ನಾಲಗೆಯ ನಾಯಕರು ಸಂಸದೀಯ ಸಜ್ಜನಿಕೆ ಮತ್ತು ಪ್ರಜಾಸತ್ತಾತ್ಮಕ ಪರಿಭಾಷೆಯನ್ನು ರೂಢಿಸಿಕೊಳ್ಳಬೇಕು.

- ಬರಗೂರು ರಾಮಚಂದ್ರಪ್ಪ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು