ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ‍ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 22 ಆಗಸ್ಟ್ 2024, 22:40 IST
Last Updated 22 ಆಗಸ್ಟ್ 2024, 22:40 IST
ಅಕ್ಷರ ಗಾತ್ರ

ಬ್ಯಾಂಕ್‌ನಲ್ಲಿ ಠೇವಣಿ ಇಳಿಕೆ: ಕಾರಣ ಅರಿಯಬೇಕಿದೆ

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸಾಲದ ಪ್ರಮಾಣ ಏರುತ್ತಿದೆ, ಆದರೆ ಠೇವಣಿ ಸಂಗ್ರಹದಲ್ಲಿ ಏರಿಕೆ ಕಾಣುತ್ತಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ. ಅಂತೆಯೇ ಠೇವಣಿ ಸಂಗ್ರಹವನ್ನು ಚುರುಕುಗೊಳಿಸುವಂತೆ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಿದ್ದಾರೆ.‌ ಆದರೆ ಇಂತಹ ಬೆಳವಣಿಗೆಗೆ ಕಾರಣ ಏನೆಂದು ವಿಶ್ಲೇಷಿಸುವ ಪ್ರಯತ್ನವನ್ನು ಅವರು ಮಾಡಿಲ್ಲ.

ಷೇರು ಮಾರುಕಟ್ಟೆ ನಾಗಾಲೋಟದಲ್ಲಿ ಏರುತ್ತಿದ್ದು, ಹೂಡಿಕೆದಾರರು ಬ್ಯಾಂಕ್‌ ಬಿಟ್ಟು ದಲಾಲ್‌ ಸ್ಟ್ರೀಟ್‌ಗೆ ನುಗ್ಗು ತ್ತಿದ್ದಾರೆ. ಗರಿಷ್ಠ ಶೇ 9ರಷ್ಟು ರಿಟರ್ನ್ಸ್‌ ನೀಡುವ ಬ್ಯಾಂಕ್‌ ಠೇವಣಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ. ಇದು ಸಾಲದು ಎನ್ನುವಂತೆ, ಇದರಿಂದ ಬರುವ ಬಡ್ಡಿಗೂ ತೆರಿಗೆ ಬೇರೆ. ಜನತೆ ತಮ್ಮ ಆದಾಯದ ಶೇ 47ರಷ್ಟನ್ನು ವಿವಿಧ ರೀತಿಯ ತೆರಿಗೆಗಳ ಹೆಸರಿನಲ್ಲಿ ಸರ್ಕಾರಕ್ಕೆ ನೀಡುತ್ತಿದ್ದಾರೆ. ಹಣದುಬ್ಬರದ ದಿನಗಳಲ್ಲಿ ಬಹುತೇಕರಿಗೆ ತಿಂಗಳನ್ನು ದೂಡುವುದೇ ದುಸ್ತರವಾಗಿರುವಾಗ, ಬ್ಯಾಂಕ್‌ನಲ್ಲಿ ಠೇವಣಿ ಇಡಲು ಏನಾದರೂ ಉಳಿಯಬೇಕಲ್ಲವೇ?

 - ರಮಾನಂದ ಶರ್ಮಾ, ಬೆಂಗಳೂರು

ತ್ಯಾಜ್ಯ ವಿಲೇವಾರಿ: ನ್ಯಾಯಸಮ್ಮತವಾಗಿರಲಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೆ ಕೋಲಾರ ಜಿಲ್ಲೆಯ ಕೆಜಿಎಫ್‌ ತಾಲ್ಲೂಕಿನಲ್ಲಿ 300 ಎಕರೆ ಜಾಗವನ್ನು ಗುರುತಿಸಿರುವುದಾಗಿ ವರದಿಯಾಗಿದೆ. ಈ ಸ್ಥಳ ಇರುವ ಪ್ರದೇಶವು ಕೃಷ್ಣಮೃಗಗಳ ಆವಾಸಸ್ಥಾನವೂ ಆಗಿದೆ. ಕೆಲವು ವರ್ಷಗಳ ಹಿಂದೆ ಸರ್ಕಾರ ಇದೇ ಬಗೆಯ ಪ್ರಸ್ತಾಪವನ್ನು ಮಾಡಿತ್ತು. ಅದಕ್ಕೆ ಮುಂಚೆ, ಪರಮಾಣು ತ್ಯಾಜ್ಯವನ್ನು ಗಣಿ ಸುರಂಗಗಳಲ್ಲಿ ಸುರಿಯುವ ಮಾತುಗಳು ಕೇಳಿಬಂದಿದ್ದವು.

ಪ್ರಸ್ತುತ ಸುಮಾರು 3.5 ಕೋಟಿ ಟನ್ನುಗಳಷ್ಟು ಗಣಿತ್ಯಾಜ್ಯದ ಗುಡ್ಡಗಳು ಇನ್ನೂ ಕೆಜಿಎಫ್‍ನಲ್ಲಿ ಉಳಿದುಕೊಂಡಿವೆ. ಕೆಜಿಎಫ್ ನಗರವನ್ನು ‘ಗೋಸ್ಟ್ ಸಿಟಿ’ ಎಂದು ಕರೆಯಲಾಗುತ್ತದೆ. ಸಾಲದ್ದಕ್ಕೆ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹರಿಸಿ ಅಂತರ್ಜಲಕ್ಕೆ ಮಾಲಿನ್ಯವನ್ನು ಸೇರಿಸಲಾಗುತ್ತಿದೆ. ಬೆಂಗಳೂರಿಗೆ ರಾಜ್ಯದ ಎಲ್ಲಾ ನದಿಗಳ ನೀರು ಬೇಕು. ಆದರೆ ಬೆಂಗಳೂರು ಜನರು ಉತ್ಪಾದಿಸುವ ಘನತ್ಯಾಜ್ಯ, ತ್ಯಾಜ್ಯನೀರು ಮಾತ್ರ ಯಾಕೆ ಬೇಡ? ರಾಜ್ಯ ಸರ್ಕಾರವು ಬೆಂಗಳೂರಿನ ಆಯಾ ವಾರ್ಡ್‌ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಅಲ್ಲೇ ವೈಜ್ಞಾನಿಕವಾಗಿ ಸಂಸ್ಕರಿಸುವುದು ನ್ಯಾಯಸಮ್ಮತ. ಒಬ್ಬರು ಸೃಷ್ಟಿಸುವ ವಿಷ ತ್ಯಾಜ್ಯವನ್ನು ಇನ್ನೊಬ್ಬರಿಗೆ ಉಣಿಸುವುದು ಯಾವ ನ್ಯಾಯ? 

- ಎಂ.ವೆಂಕಟಸ್ವಾಮಿ, ಬೆಂಗಳೂರು

ನೇತಾರರಿಂದ ದೌರ್ಜನ್ಯ: ಕಠಿಣ ಶಿಕ್ಷೆಯಾಗಲಿ 

ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ಜನನಾಯಕರ ಸಂಖ್ಯೆಯೇ ಹೆಚ್ಚಾಗಿರುವ ವರದಿಯನ್ನು ಓದಿ ಬೇಸರವಾಯಿತು. ಇದರಲ್ಲಿ ಬಿಜೆಪಿಗೆ ಸೇರಿದ ನೇತಾರರ ಸಂಖ್ಯೆ ಹೆಚ್ಚಾಗಿರುವುದು ಆಶ್ಚರ್ಯಕರ. ಇದರಿಂದ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುವುದಿಲ್ಲವೇ? ಯಾವುದೇ ಪಕ್ಷವಿರಲಿ, ಈ ರೀತಿಯ ಆಪಾದನೆ ಹೊತ್ತ ರಾಜಕಾರಣಿಗಳನ್ನು ಅವರು ಆರೋಪಮುಕ್ತರಾಗುವವರೆಗೂ ಪಕ್ಷದಿಂದ ಅಮಾನತು ಮಾಡಬೇಕು. ಇಲ್ಲವಾದಲ್ಲಿ ರಾಜಕೀಯ ಮುಖಂಡರು ಮಹಿಳೆಯರ ಬಗ್ಗೆ ಮಾತನಾಡುವ ಹಕ್ಕನ್ನೇ ಕಳೆದುಕೊಳ್ಳುತ್ತಾರೆ. ಮಾತನಾಡಿದರೂ ಅದು ಬೂಟಾಟಿಕೆಯಂತೆ ಕಾಣುತ್ತದೆ.

ಮಹಿಳೆಯೊಬ್ಬಳು ಒಬ್ಬಂಟಿಯಾಗಿ ನಿರ್ಭಯದಿಂದ ಮಧ್ಯರಾತ್ರಿಯಲ್ಲಿ ಓಡಾಡುವಂತೆ ಆಗುವುದೇ ರಾಮರಾಜ್ಯದ ಕನಸು ಎಂದು ಗಾಂಧೀಜಿ ಹೇಳಿದ್ದರು. ಆದರೆ ರಾಜಕೀಯ ಪಕ್ಷಗಳು ಇದರ ಬಗ್ಗೆ ಚಿಂತನೆ ಮಾಡಿದಂತೆ ಕಾಣುವುದಿಲ್ಲ. ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಸಂಸದರೊಬ್ಬರ ವಿರುದ್ಧ ಗಣನೀಯ ಸಂಖ್ಯೆಯ ಮಹಿಳಾ ಕುಸ್ತಿಪಟುಗಳು ಬೀದಿಗಿಳಿದು ಹೋರಾಟ ಮಾಡಿದಾಗಲೇ ಏನನ್ನೂ ಮಾಡದ ರಾಜಕೀಯ ಪಕ್ಷಗಳಿಂದ ಮಹಿಳೆಯರು ಯಾವುದೇ ರೀತಿಯ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕುಸ್ತಿಪಟುಗಳ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದಂತಹ ಪ್ರಕರಣ ಅದು. ಇಲ್ಲದಿದ್ದರೆ ಭಾರತೀಯ ಕುಸ್ತಿಪಟುಗಳು ಒಲಿಂಪಿಕ್ಸ್‌ನಲ್ಲಿ ಒಂದೆರಡು ಪದಕಗಳನ್ನು ಪಡೆಯುತ್ತಿದ್ದರೇನೊ. 

–ಕೆ.ಎಸ್.ಗಂಗಾಧರ, ಬೆಂಗಳೂರು

ಸಮುದ್ರದ ನೀರು ತರಬಾರದೇಕೆ?

ಶರಾವತಿ ನೀರನ್ನು ಬೆಂಗಳೂರಿಗೆ ತಿರುಗಿಸಲು ಪ್ರಯತ್ನ ನಡೆದಿರುವುದು ನ್ಯಾಯೋಚಿತವಲ್ಲ. ಮಲೆನಾಡು ಹಾಗೂ ಕರಾವಳಿ ಭಾಗದ ಜನರಿಗೆ ಇದರಿಂದ ಅನ್ಯಾಯವಾಗುತ್ತದೆ. ನದಿಯ ಮೂಲವನ್ನೇ ತಿರುಗಿಸಲು
ಪ್ರಯತ್ನಪಟ್ಟರೆ ಅದು ವಿಫಲವಾಗುವ ಸಂಭವವೇ ಹೆಚ್ಚು. ಇದಕ್ಕೆ ಒಳ್ಳೆಯ ಉದಾಹರಣೆ ಅಂದರೆ ಎತ್ತಿನಹೊಳೆ ಯೋಜನೆ‌. ಬೆಂಗಳೂರು ಇಂದು ಜಾಗತಿಕ ಮಟ್ಟದ ನಗರವಾಗಿ ಬೆಳೆಯುತ್ತಿದೆ ನಿಜ. ನೀರಿನ ಬೇಡಿಕೆಯೂ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಇದಕ್ಕಾಗಿ ಶರಾವತಿ ನದಿ ತಿರುವು ಯೋಜನೆಯ ಅವಶ್ಯಕತೆ ಇದೆಯೇ ಎನ್ನುವ ಜಿಜ್ಞಾಸೆ ಮೂಡುತ್ತದೆ.

ಬೇಕಾದರೆ ಉತ್ತರ ಕನ್ನಡ ಇಲ್ಲವೇ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿ, ಅದನ್ನು ಪೈ‍ಪ್‌ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಿ. ಈಗಾಗಲೇ ತಮಿಳುನಾಡಿನ ತೂತ್ತುಕುಡಿಯಲ್ಲಿ ಇಂತಹ ಒಂದು ಕಾರ್ಖಾನೆ ಇದೆ. ಬಹಳಷ್ಟು ಅರಬ್‌ ದೇಶಗಳಲ್ಲೂ ಇಂತಹ ಕೈಗಾರಿಕೆಗಳಿವೆ. ಇವು ಸ್ವಲ್ಪ ದುಬಾರಿ ವೆಚ್ಚದವು ಆಗಿರಬಹುದು. ಆದರೆ ಶರಾವತಿ ನದಿ ನೀರಿನ ಬದಲಿಗೆ ಸಮುದ್ರದ ನೀರನ್ನು ಸಿಹಿಯಾಗಿ ಪರಿವರ್ತಿಸಿ ಅದನ್ನು ಬೆಂಗಳೂರಿಗೆ ಕೊಂಡೊಯ್ಯುವುದು ಪರಿಣಾಮಕಾರಿ ಆಗಬಹುದು. 

– ಚಂದ್ರಕಾಂತ ನಾಮಧಾರಿ, ಅಂಕೋಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT