ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ದೊಂಬಿದಾಸ ಸಮುದಾಯದತ್ತ ಇರಲಿ ಚಿತ್ತ

Published 19 ಜನವರಿ 2024, 20:17 IST
Last Updated 19 ಜನವರಿ 2024, 20:17 IST
ಅಕ್ಷರ ಗಾತ್ರ

ದೊಂಬಿದಾಸ ಸಮುದಾಯದತ್ತ ಇರಲಿ ಚಿತ್ತ

ಪರಿಶಿಷ್ಟ ಜಾತಿಯಲ್ಲಿನ ವಿವಿಧ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದಾಗಿ ವರದಿಯಾಗಿದೆ. ಇದನ್ನು ಓದಿದಾಗ, ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳಂತಿದ್ದು ಇಂದು ತಬ್ಬಲಿಗಳಂತೆ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿರುವ ದೊಂಬಿದಾಸ ಸಮುದಾಯದವರು ನೆನಪಾದರು. ನಾಡಿನಲ್ಲಿ ಸಾವಿರ ಸಂಖ್ಯೆ
ಯಲ್ಲಿರುವ ಈ ಸಮುದಾಯವು ನಾಟಕ, ಹರಿಕತೆ, ಲಾವಣಿಯಂತಹವುಗಳ ಮೂಲಕ ಜನಪದ ಕಲೆಗಳಿಗೆ ಧ್ವನಿಯಾಗಿದೆ. ಆದರೆ ಇಂದು ತಮ್ಮ ಹಕ್ಕುಗಳಿಗೆ ಧ್ವನಿಯೆತ್ತಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ಹಿಂದುಳಿದ ವರ್ಗಗಳ ಪ್ರವರ್ಗ 1ರಲ್ಲಿ ಪ್ರಬಲ ಜಾತಿಗಳೊಂದಿಗೆ ಸೇರ್ಪಡೆಯಾಗಿರುವ ಈ ಸಮುದಾಯವು ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಸವಲತ್ತುಗಳಿಂದ ವಂಚಿತವಾಗಿದೆ.

ಈ ಸಮುದಾಯದ ಬಗ್ಗೆ ಧಾರವಾಡ ವಿಶ್ವವಿದ್ಯಾಲಯ
ದಿಂದ ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆದಿದೆ. ಇದನ್ನು ಸರ್ಕಾರ ಪರಿಶೀಲಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕಾದ ತುರ್ತಿದೆ. ಮೀಸಲಾತಿ ಎಂಬುದು ಬಡತನ ನಿರ್ಮೂಲನ ಕಾರ್ಯಕ್ರಮವಲ್ಲ, ಜಾತಿ ವಿನಾಶದ ಕಾರ್ಯಕ್ರಮವೂ ಅಲ್ಲ. ಅದು, ಸಾಮಾಜಿಕ ಪ್ರಾತಿನಿಧ್ಯ ವಂಚಿತ ಜನರಿಗೆ ಪ್ರಾತಿನಿಧ್ಯ ಕಲ್ಪಿಸುವ ಮಾನವ ಹಕ್ಕು, ಜೊತೆಗೆ ಸಂವಿಧಾನದ ಹಕ್ಕು. ಇದರ ಅರಿವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಕಾಳಜಿ ವಹಿಸಿ, ಈ ತೆರನಾದ ತಬ್ಬಲಿ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲಿ. ಈ ಮೂಲಕ, ಪ್ರತಿ ವ್ಯಕ್ತಿಯೂ ಆತ್ಮಗೌರವದಿಂದ ಜೀವನ ಸಾಗಿಸುವಂತೆ ಆಗಬೇಕೆಂಬ ಸಂವಿಧಾನದ ಆಶಯವನ್ನು ಈಡೇರಿಸಲಿ.⇒

-ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ಶಿಕ್ಷಕರ ಮುಂದೊಂದು ಮಾದರಿ ನಡೆ

ಕಲಬುರಗಿ ಜಿಲ್ಲೆಯ ತೋನಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಜೀರ್ ಅಹ್ಮದ್‌ ಅವರು, ಕಲಿಕೆಯಿಂದ ದೂರವುಳಿದ ಮಕ್ಕಳನ್ನು ಆಕರ್ಷಿಸಲು ಮಾಡಿರುವ ಪ್ರಯತ್ನಗಳು
(ಪ್ರ.ವಾ., ಜ. 19) ಅನನ್ಯವಾದವು, ಮೌಲಿಕವಾದವು.

ಎಂಟು ಮಕ್ಕಳು ಹಾಜರಾಗುತ್ತಿದ್ದ ಶಾಲೆಗೆ ಇದೀಗ 20 ಮಕ್ಕಳು ಉತ್ಸಾಹದಿಂದ ಸೇರಿಕೊಳ್ಳಬೇಕಾದರೆ ಈ ಶಿಕ್ಷಕ ಏನು ಮಾಡಿದರು ಗೊತ್ತೇ? ನಿರುಪಯೋಗಿ ಪರಿಕರಗಳಿಂದ ಬಣ್ಣ ಬಣ್ಣದ ಆಟಿಕೆಗಳನ್ನು ತಯಾರಿಸಿದರು, ಶಾಲಾ ಕೊಠಡಿಗಳನ್ನು ಸಿಂಗರಿಸಿದರು, ಮಕ್ಕಳನ್ನು ರಮಿಸಿ, ಪ್ರೀತಿಸಿ ಕರೆತಂದರು. ಅದಕ್ಕಾಗಿ  ಸರ್ಕಾರದ ನೆರವಿಗೆ ಕೈಚಾಚದೆ ಸ್ವಯಂಪ್ರೇರಣೆಯಿಂದ ₹ 1.6 ಲಕ್ಷ ಸ್ವಂತ ಹಣವನ್ನು ವೆಚ್ಚ ಮಾಡಿದ್ದು ಸಣ್ಣ ಸೇವೆಯಲ್ಲ, ಬೆಲೆ ಕಟ್ಟಲಾಗದಂತಹ ಸೇವೆ.
ಹೀಗೆ ಅವರು ನಮ್ಮ ಕನ್ನಡ ಶಾಲಾ ಶಿಕ್ಷಕರ ಮುಂದೆ ಒಂದು ಮಾದರಿಯನ್ನು ಇಟ್ಟಿದ್ದಾರೆ. ಇದು, ನಿಜವಾದ ಸಮಾಜಸೇವೆ. 

-ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ಶ್ವಾನಗಳ ಪೋಷಣೆ: ಪೊಲೀಸರ ಅನನ್ಯ ಕಾರ್ಯ

ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಶ್ವಾನಗಳು ವೃದ್ಧಾಪ್ಯ ಅಥವಾ ಇತರ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅನರ್ಹಗೊಂಡಾಗ, ಅವುಗಳ ಪಾಲನೆ, ಪೋಷಣೆಗಾಗಿ ಗುಜರಾತ್‍ನ ಆನಂದ್ ಜಿಲ್ಲೆಯಲ್ಲಿ ‘ನಿವೃತ್ತ ಪೊಲೀಸ್ ಶ್ವಾನಗಳ ವಿಶ್ರಾಂತಿ ಧಾಮ’ವನ್ನು ಆರಂಭಿಸಿರುವುದು (ಪ್ರ.ವಾ., ಜ. 18) ನಿಜಕ್ಕೂ ಮಾದರಿ ನಡೆ. ಈ ಬಗೆಯ ‘ಶ್ವಾನಗಳ ನಿವೃತ್ತಿ ಧಾಮ’ಗಳು ದೇಶದೆಲ್ಲೆಡೆ ಪ್ರಾರಂಭವಾಗಲು ಇದು ಪ್ರೇರಣೆ ನೀಡುತ್ತದೆ.
ಗಂಡ ಅಥವಾ ಹೆಂಡತಿ ದುಡಿಯುವ ಕಾಲದಲ್ಲಿ ಪರಸ್ಪರ ಪ್ರೀತಿಸುವಂತೆ ನಟಿಸಿ, ಮೂಲೆ ಹಿಡಿದಾಗ ಕಾಲಕಸದಂತೆ ಕಾಣುವುದನ್ನು ಹಾಗೂ ಮಕ್ಕಳಿಗಾಗಿ ಹಗಲಿರುಳು ದುಡಿದ ತಂದೆ-ತಾಯಿ ವಯಸ್ಸಾದ ಕಾಲಕ್ಕೆ ಅವರಿಂದ ಅನಾದರಕ್ಕೆ ಒಳಗಾಗಿ, ಜೀವ ಹೋಗುವ ಗಳಿಗೆಯನ್ನು ಎದುರು ನೋಡುತ್ತಾ ದೇವಸ್ಥಾನದಲ್ಲೋ ಛತ್ರದಲ್ಲೋ ವೃದ್ಧಾಶ್ರಮದಲ್ಲೋ ಕಾಲ ನೂಕುವಂಥ ಪರಿಸ್ಥಿತಿ ಈ ಸಮಾಜದಲ್ಲಿದೆ. ಹೀಗಿರುವಾಗ, ನಿವೃತ್ತವಾದ, ಸೇವೆಗೆ ಬಳಸಲು ಅನರ್ಹವಾದ ಶ್ವಾನಗಳಿಗೆ ಪುನರ್ವಸತಿ ಕಲ್ಪಿಸಿರುವುದು ಪ್ರಶಂಸನೀಯ ನಡೆ. ಅವುಗಳಿಗೆ ಹೊತ್ತುಹೊತ್ತಿಗೆ ಹಾಲು, ಅನ್ನ, ಮೊಟ್ಟೆಯ ಊಟ, ವೈದ್ಯಕೀಯ ತಪಾಸಣೆ, ಅವು ಆಟ ಆಡುವುದಕ್ಕೆ ಅವಕಾಶ ಎಲ್ಲವನ್ನೂ ಕಲ್ಪಿಸಿರುವ ಈ ಯೋಜನೆಯನ್ನು ಜಾರಿಗೆ ತಂದ ಅಲ್ಲಿನ ಪೊಲೀಸ್ ಅಧಿಕಾರಿಗಳು ಅಭಿನಂದನಾರ್ಹರು.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT