ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಎಲ್ಲೆಡೆ ಜಾರಿಯಾಗಲಿ ‘ಲೋಕ ಸ್ಪಂದನ’

Published 2 ಆಗಸ್ಟ್ 2023, 23:25 IST
Last Updated 2 ಆಗಸ್ಟ್ 2023, 23:25 IST
ಅಕ್ಷರ ಗಾತ್ರ

ಎಲ್ಲೆಡೆ ಜಾರಿಯಾಗಲಿ ‘ಲೋಕ ಸ್ಪಂದನ’

ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುವ ಸಲುವಾಗಿ ಅಳವಡಿಸಿದ್ದ ‘ದರ್ಪಣ’ ಕ್ಯುಆರ್ ಕೋಡ್ ವ್ಯವಸ್ಥೆ
ಯಶಸ್ವಿಯಾಗಿದ್ದು, ಅದನ್ನು ಈಗ ‘ಲೋಕ ಸ್ಪಂದನ’ ಎಂಬ ಹೆಸರಿನಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಜಾರಿ ಮಾಡಲು ಮುಂದಾಗಿರುವುದು ಸುಧಾರಣೆಯ ಹೆಜ್ಜೆ. ಇಂತಹುದೇ ಕ್ಯುಆರ್ ಕೋಡ್‌ಗಳನ್ನು ಪ್ರತಿ ಸರ್ಕಾರಿ ಕಚೇರಿಯಲ್ಲೂ ಅಳವಡಿಸಿದರೆ ಸರ್ಕಾರಿ ನೌಕರರ ಕಾರ್ಯವೈಖರಿಯ ಬಗ್ಗೆ ವಿಮರ್ಶಿಸಲು
ಸಾಧ್ಯವಾಗುತ್ತದೆ. ಅಧಿಕಾರಿಗಳು ಮತ್ತು ನೌಕರರು ಜನರೊಡನೆ ಸೌಜನ್ಯದಿಂದ ನಡೆದುಕೊಳ್ಳುತ್ತಾರೆ. ಜೊತೆಗೆ ಈ ದೂರನ್ನು ಮುಂದಿಟ್ಟು ಲೋಕಾಯುಕ್ತರನ್ನು ಸಂಪರ್ಕಿಸಿದರೆ, ಭ್ರಷ್ಟಾಚಾರವನ್ನು ಕಡಿಮೆ ಮಾಡಲು
ಸಾಧ್ಯವಾಗುತ್ತದೆ. ಈ ಮೂಲಕ ಸರ್ಕಾರಿ ಕಚೇರಿಗಳಲ್ಲಿ ಉತ್ತಮ ಪರಿಸರ ಹೊಂದಬಹುದು. ಜನರು ಒಂದೇ ಕೆಲಸಕ್ಕೆ ಹಲವು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನೂ ತಪ್ಪಿಸಬಹುದು.

-ಸುನಿಲ್ ಟಿ.ಪಿ., ತಳಗವಾದಿ, ಮಳವಳ್ಳಿ

ಪ್ಲಾಸ್ಟಿಕ್‌ ಬಾಟಲಿಗೆ ತಡೆ: ಮಾದರಿ ನಡೆ

ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಕಂದಾಯ ಇಲಾಖೆಯ ಸಭೆಗಳಲ್ಲಿ ಬಳಸಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿರುವುದಕ್ಕೆ ಪೂರಕವಾಗಿ, ಇಲಾಖೆಯ ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಟೀಲ್ ಲೋಟಗಳನ್ನೇ ಬಳಸಿರುವುದು ಸ್ವಾಗತಾರ್ಹ. ಇದು ಒಂದು ಮಾದರಿ ನಡೆಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿಯ ಕಾಳಜಿ ತೋರಿಸಿದರೆ ಖಂಡಿತವಾಗಿಯೂ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಾಧ್ಯ.

-ಸುರೇಶ ಎಸ್.ಜಿ., ಶಹಾಬಾದ್‌, ಚಿತ್ತಾಪುರ

ವಿಶೇಷ ಅನುದಾನ ಬಳಕೆ: ವಿವೇಚನೆ ಇರಲಿ

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನವನ್ನು
(ಎಸ್‌ಸಿಎಸ್‌ಪಿ– ಟಿಎಸ್‌ಪಿ) ‘ಗ್ಯಾರಂಟಿ’ ಯೋಜನೆಗಳಿಗೆ ಬಳಕೆ ಮಾಡಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆ ಸಮ್ಮತಿ ಸೂಚಿಸಿರುವುದು ಅತ್ಯಂತ ದುರದೃಷ್ಟಕರ. ಈ ನಿಗದಿತ ₹ 11 ಸಾವಿರ ಕೋಟಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತ ಕಾಯುವುದಕ್ಕೇ ಬಳಸುವುದು ನ್ಯಾಯಸಮ್ಮತ.

-ಪ್ರಶಾಂತ್ ಬುಳ್ಳಣ್ಣವರ, ಉಗರಗೋಳ, ಬೆಳಗಾವಿ

ಆನ್‌ಲೈನ್‌ ವಂಚನೆ ಜಾಲ: ಬೇಕು ಸಹನೆ

ವಿದ್ಯುತ್ ಬಿಲ್ ಪಾವತಿ ನೆಪದಲ್ಲಿ ವ್ಯಕ್ತಿಯೊಬ್ಬರ ಮೊಬೈಲಿಗೆ ಲಿಂಕ್ ಕಳಿಸಿ, ಅವರ ಬ್ಯಾಂಕ್ ಖಾತೆಯಿಂದ ₹ 2 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವುದು ವರದಿಯಾಗಿದೆ. ಹಿಂದಿನ ವಾರ ನನಗೂ ‘ತಮ್ಮ ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿ 9.30ಕ್ಕೆ ಕಡಿತಗೊಳಿಸಲಾಗುತ್ತದೆ. ಹಿಂದಿನ ಬಾಕಿ ಅಪ್‌ಡೇಟ್ ಆಗಿಲ್ಲ. ಮಾಹಿತಿಗಾಗಿ ಈ ಸಂಖ್ಯೆಯನ್ನು... ಸಂಪರ್ಕಿಸಿ’ ಎಂಬ ಸಂದೇಶ ಬಂದಿತ್ತು. ನಮ್ಮ ಯಾವುದೇ ಬಿಲ್ ಬಾಕಿ ಇಲ್ಲ ಎಂಬ ಸಂದೇಶವನ್ನು ಅದೇ ಸಂಖ್ಯೆಗೆ ಕಳುಹಿಸಿದೆ. ಆದರೂ ಕುತೂಹಲಕ್ಕೆ ಅವರು ಕೊಟ್ಟ ನಂಬರ್‌ಗೆ ಫೋನ್ ಮಾಡಿದರೆ ವ್ಯಕ್ತಿಯೊಬ್ಬ ಹಿಂದಿಯಲ್ಲಿ ಮಾತನಾಡಿದ. ‘ಕನ್ನಡ ಬಿಟ್ಟು ಬೇರಾವುದೇ ಭಾಷೆ ನನಗೆ ಬರದು’ ಎಂದಿದ್ದಕ್ಕೆ ಕೆಟ್ಟ ಪದಗಳಲ್ಲಿ ನಿಂದಿಸಿದ. ಆಗಲೇ ಇದು ವಂಚಕರ ಜಾಲವೆಂಬ ಅನುಮಾನದ ವಾಸನೆ ನನಗೆ ಸಿಕ್ಕಿತು. ಕೂಡಲೇ ನಾನು ಫೋನ್‌ ಸಂಪರ್ಕ ಕಡಿತಗೊಳಿಸಿದೆ.

ವಿದ್ಯುತ್ ಸಂಪರ್ಕವನ್ನು ರಾತ್ರಿ 9.30ಕ್ಕೆ ಕಡಿತಗೊಳಿಸಲಾಗುತ್ತದೆ ಎಂದಾಗಲೂ ಅನುಮಾನ ಬಂತು. ಸಾರ್ವಜನಿಕರು ಅವಸರಪಡದೆ ಕೊಂಚ ತಾಳ್ಮೆಯಿಂದ ಯೋಚಿಸಿ ಮುಂದಡಿ ಇಟ್ಟಲ್ಲಿ ವಂಚನೆಗೆ
ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು. 

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಅಧಿಕಾರಿ ವರ್ಗಾವಣೆ: ಬಹಿರಂಗ ಹೇಳಿಕೆ ತರವೇ?

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಹೊನ್ನಾಳಿ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ಉದ್ದೇಶಿಸಿ, ‘ಅದೇನು ಮಾಡುತ್ತೀರೋ ಗೊತ್ತಿಲ್ಲ, ಮೊದಲು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆಯಾಗಬೇಕು’ ಎಂದು ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. ಹೊನ್ನಾಳಿ ತಾಲ್ಲೂಕಿನಲ್ಲಿ ಮನೆಗಳ ನಿರ್ಮಾಣಕ್ಕೂ ಮರಳು ಸಂಗ್ರಹಿಸಲು ಅವರು ಬಿಡುತ್ತಿಲ್ಲ ಎನ್ನುವ ಕಾರಣವನ್ನು ಶಾಸಕರು ಮುಂದಿಟ್ಟಿದ್ದಾರೆ. ಅಕ್ರಮ ಮರಳು ಸಂಗ್ರಹದ ವಿಚಾರವಾಗಿ ಈ ಹಿಂದೆ ಸದನದಲ್ಲಿಯೇ ವಾದ ವಿವಾದ ನಡೆದಿದೆ.
ಕಾನೂನು ಪಾಲನೆ ವಿಚಾರದಲ್ಲಿ ಬಿಗಿ ನಿಲುವು ಹೊಂದಿರುವ ದಾವಣಗೆರೆಯ ಎಸ್‌ಪಿ, ಸಾಮಾಜಿಕ ಕಾಳಜಿ ಉಳ್ಳವರು. ಅವರಿಗೆ ವಾಸ್ತವವನ್ನು ಮನದಟ್ಟು ಮಾಡಿ, ಸುಗಮ ಆಡಳಿತ ನಿರ್ವಹಣೆಗೆ ಸಹಕರಿಸುವುದು
ಜನಪ್ರತಿನಿಧಿಗಳ ಆದ್ಯ ಕರ್ತವ್ಯ.

ಅದುಬಿಟ್ಟು ಏಕಾಏಕಿ ಬಹಿರಂಗವಾಗಿ ಐಪಿಎಸ್ ಅಧಿಕಾರಿಯ ವರ್ಗಾವಣೆಗೆ ಪ್ರಯತ್ನಿಸುವುದರಿಂದ
ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾದಂತೆ ಆಗುತ್ತದೆ.

-ತಿಮ್ಮೇಶ ಮುಸ್ಟೂರು, ಜಗಳೂರು

ಯುವಜನರಿಗೆ ಸಿಗಲಿ ‘ಯುವನಿಧಿ’ ಭಾಗ್ಯ

ರಾಜ್ಯ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಆದರೆ ‘ಯುವನಿಧಿ’ ಕಡೆಗೆ ಇನ್ನೂ ಗಮನಹರಿಸಿಲ್ಲ. ಈ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಬೇಕಾಗಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾಗಿದೆ. ಈಗಲಾದರೂ ಈ ಯೋಜನೆಯತ್ತ ಸರ್ಕಾರ ಗಮನಹರಿಸಲಿ.

ತಮೀಮ್, ಉಪ್ಪಿನಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT