ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುನಾಡ ಕಲೆ ಸ್ತಬ್ಧಚಿತ್ರ: ಕನ್ನಡ ಎಲ್ಲಿ?

ಅಕ್ಷರ ಗಾತ್ರ

73ನೇ ಗಣರಾಜ್ಯೋತ್ಸವ ಹಲವು ವಿಶೇಷಗಳಿಗೆ ಮತ್ತು ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ (ಪ್ರ.ವಾ., ಜ. 27) ನಿಜ! ಆದರೆ ಕರುನಾಡ ಕಲೆಯ ಸ್ತಬ್ಧಚಿತ್ರದಲ್ಲಿ ಕನ್ನಡವೇ ಗೈರುಹಾಜರಾಗಿದೆ. ಕೇವಲ ಹಿಂದಿಯಲ್ಲಿ ‘ಕರ್ನಾಟಕ’ ಎಂದು ಬರೆಯಲಾಗಿದೆ. ಇದು ನಮ್ಮ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ಅಲ್ಲವೆ? ಅಕ್ಕಪಕ್ಕದಲ್ಲೋ ಹಿಂದೆಯೋ ಬರೆದಿರಬಹುದೇನೊ! ಆದರೆ ಅದು ಹಿಂದಿ ಬಾರದ ಕನ್ನಡಿಗರಿಗೆ ತಿಳಿಯುವುದಾದರೂ ಹೇಗೆ? ಇದು ಪ್ರಾದೇಶಿಕ ಭಾಷೆಗಳನ್ನು ಪಕ್ಕಕ್ಕೆ ಸರಿಸುವ ಜಾಣ್ಮೆ ಅಷ್ಟೆ.

ಜೊತೆಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಹೃದಯದ ಭಾಷೆ ಕನ್ನಡ, ಆತ್ಮದ ಭಾಷೆ ಸಂಸ್ಕೃತ, ಮೆದುಳಿನ ಭಾಷೆ ಇಂಗ್ಲಿಷ್ ಮುಂತಾಗಿ ತಮ್ಮ ಲೇಖನದಲ್ಲಿ (ಸಂಗತ, ಜ. 27) ಹೇಳಿದ್ದಾರೆ. ಕನ್ನಡ ವಿಶ್ವವಿದ್ಯಾಲಯವೇ ಅನುದಾನವಿಲ್ಲದೆ ಸೊರಗುತ್ತಿರುವಾಗ ಸಂಸ್ಕೃತ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕೊಡುತ್ತಿರುವ ಯಥೇಚ್ಛ ಅನುದಾನವನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ತಮ್ಮ ಸಮರ್ಥನೆಗೆ ಕುವೆಂಪು ಅವರ ‘ಸಂಸ್ಕೃತ ಮಾತೆ’ ಕವನದ ಸಾಲುಗಳನ್ನು ಉಲ್ಲೇಖಿಸಿದ್ದಾರೆ, ಸರಿಯೆ. ಆದರೆ ಕುವೆಂಪು ಅವರ ‘ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ’ (ಕೋಗಿಲೆ ಮತ್ತು ಸೋವಿಯತ್ ರಷ್ಯಾ) ಎಂಬ ಮಾತನ್ನು ಸಚಿವರು ಗಮನಿಸಿದಂತೆ ಕಾಣುವುದಿಲ್ಲ. ‘ರಾಜನುಡಿ (ಇಂಗ್ಲಿಷ್) ರಾಷ್ಟ್ರನುಡಿ (ಹಿಂದಿ) ದೇವನುಡಿ (ಸಂಸ್ಕೃತ) ಇವು ಮೂರೂ ಕನ್ನಡಮ್ಮನ ಬೆನ್ನಮೇಲೆ ಹತ್ತಿ ಆ ಮುದಿಯಳ ಬಾಯ್ಮುಚ್ಚಿ ಹಿಡಿದಿಹರು’- ಎಂದು ಭಾರತ ಒಕ್ಕೂಟ ವ್ಯವಸ್ಥೆಯು ಕನ್ನಡದ ಕತ್ತು ಹಿಸುಕುತ್ತಿದೆಯೆಂದುಖಂಡಿಸುತ್ತಾರೆ! ಅಲ್ಲದೆ, ‘ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು, ದಕ್ಷಿಣದ ದೇಶಕದು ಕುದುರೆಯಹುದೆ?’ ಎಂದು ಪ್ರಶ್ನಿಸುವರು. ಸಚಿವರು ಈ ಕವನವನ್ನು ಗಮನಿಸಬೇಕು. ಕನ್ನಡದಲ್ಲಿ ‘ಯಾರನ್ನಾದರೂ ಕೊಲ್ವಮುನ್ನ ಸೊಲ್ಲಡಗಿಸು’ ಎಂಬ ಗಾದೆ ಇದೆ. ಅಂದರೆ ಯಾರಿಗೂ ಗೊತ್ತಾಗದಂತೆ ಕೊಲ್ಲುವ ಪರಿ ಇದು. ಕನ್ನಡಿಗರು ಇತ್ತ ಸೊಲ್ಲೆತ್ತಬೇಕು.

- ಪ್ರೊ. ಶಿವರಾಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT