ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 4 ಜುಲೈ 2024, 19:30 IST
Last Updated 4 ಜುಲೈ 2024, 19:30 IST
ಅಕ್ಷರ ಗಾತ್ರ

ಮಾತು ಆಡಿದರೆ ಮುಗಿಯಿತು

ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಸೋಮವಾರ ತಮ್ಮ ಚೊಚ್ಚಲ ಭಾಷಣ ಮಾಡಿದ್ದಾರೆ. ಭಾಷಣದಲ್ಲಿನ ಕೆಲವು ಭಾಗಗಳನ್ನು ಕಡತಕ್ಕೆ ಸೇರಿಸದೆ ಇರುವ ಕ್ರಮಕ್ಕೆ ರಾಹುಲ್ ‌ಆಕ್ಷೇಪ ವ್ಯಕ್ತಪಡಿಸಿ ‘ತೆಗೆದುಹಾಕಿರುವ ಭಾಗಗಳನ್ನು ಮತ್ತೆ ಸೇರಿಸಬೇಕು’ ಎಂದು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಮಾತೊಂದಿದೆ. ಅವರು ಆಡಿದ ಮಾತುಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಮಾತುಗಳು ಇಡೀ ದೇಶದ ಗಮನಕ್ಕೆ ಬಂದಿವೆ. ಅವನ್ನು ಕಡತದಲ್ಲಿ ಸೇರಿಸದೇ ಇರುವುದರಿಂದ ಏನೂ ಪ್ರಯೋಜನವಿಲ್ಲ. ಅಲ್ಲಿ ಇರುವ ಸದಸ್ಯರೆಲ್ಲರೂ ಜನರ ಪ್ರತಿನಿಧಿಗಳು. ಅವರು ಏನೇ ಮಾತನಾಡಿದರೂ ದಾಖಲಾಗಬೇಕು. ಅವು ಮುಂದಿನ ತಲೆಮಾರಿಗೆ ಕೂಡ ತಿಳಿಯಬೇಕು. ಅವುಗಳನ್ನು ಗಮನಿಸಿ, ಮುಂದೆ ಆಯ್ಕೆಯಾಗಿ ಬರುವವರಿಗೆ ತಾವು ಏನು ಮಾತಾಡಬೇಕು, ಏನು ಮಾತಾಡಬಾರದು ಎಂಬ ಪಾಠವೂ ಆದೀತು.

ಈ ಕಡತಗಳು ಜನಸಾಮಾನ್ಯರಿಗೆ ಲಭ್ಯವೇ? ಅವನ್ನು ಮತ್ತೆ ಓದುವವರಾರು? ಹಾಗಾಗಿ, ಮಾತುಗಳನ್ನು ಕಡತಕ್ಕೆ ಸೇರಿಸಿ ಅಥವಾ ಸೇರಿಸಬೇಡಿ ಎಂದು ಹೇಳುವುದೇ ಅನಗತ್ಯ. ಇಂತಹ ವಿಚಾರಗಳಿಗೆ ಸದನದಲ್ಲಿ ಗದ್ದಲ ಎಬ್ಬಿಸಿ ಕಾಲಹರಣ ಮಾಡದೆ ಜನರ ಅಗತ್ಯ ಕೆಲಸಗಳು ಮತ್ತು ದೇಶದ ಅಭಿವೃದ್ಧಿಯ ಕುರಿತು ಮಾತ್ರ ಚರ್ಚೆ ನಡೆಸಬೇಕು. 

–ಪತ್ತಂಗಿ ಎಸ್. ಮುರಳಿ, ಬೆಂಗಳೂರು

****

ಸಿಗಿವೆಂ ಕ್ಷಣದಲಿ ನಿನ್ನನು...

‘ಸಮಾನರಾರಿಹರೈ ಎನ್ನ ಸಮಾನರಾರಿಹರೈ’ ಎನ್ನುತ್ತ 16ನೇ ಮತ್ತು 17ನೇ ಲೋಕಸಭೆಯಲ್ಲಿ ವಿಜೃಂಭಿಸಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ 18ನೇ ಲೋಕಸಭೆಯು ನಿಜಕ್ಕೂ ಮುಳ್ಳಿನ ಹಾದಿಯೇ ಸೈ. ಅಧಿಕಾರಾರೂಢ ಎನ್‌ಡಿಎ ಕೂಟವು ತಪ್ಪು ಹೆಜ್ಜೆ ಇರಿಸಿದರೆ ‘ಸಿಗಿವೆಂ ಕ್ಷಣದಲಿ ನಿನ್ನನು’ ಎಂಬಂತೆ ಕಾದಿರುವ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಈಗ ಇದೆ. ಈ ಸಂಗತಿಯು 18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿಯೇ ವೇದ್ಯವಾಗಿದೆ. ಮುಂದಿನ ಐದು ವರ್ಷ ಪ್ರಜಾಪ್ರಭುತ್ವ ವಿಜೃಂಭಿಸಲಿದ್ದು ಪ್ರತಿ ಅಧಿವೇಶನವೂ ರೋಚಕವಾಗಿರಲಿದೆ. ರಚಿತವಾಗಲಿರುವ‌ ಪ್ರತಿಯೊಂದು‌ ಕಾನೂನು ಕೂಡ ತೀವ್ರ ಪರಾಮರ್ಶೆಗೆ ಒಳಪಡಲಿದೆ. ಇದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ಎರಡೂ ಮೈತ್ರಿಕೂಟಗಳ ಕಾರ್ಯವೈಖರಿಯನ್ನು ಮತದಾರ ನೋಡುತ್ತಲಿದ್ದಾನೆ. ಆತನ ಮನವೊಲಿಸಲು ಬಹಳಷ್ಟು ಬೆವರು ಹರಿಸುವುದು ಉಭಯ ಕೂಟಗಳಿಗೆ ಅನಿವಾರ್ಯ.

–ವೆಂಕಟೇಶ್ ಮುದಗಲ್, ಕಲಬುರಗಿ

****

ಸೂಕ್ತ ನಿಯಮಗಳು ಬೇಕು

ಉತ್ತರಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ನಡೆದ ಸತ್ಸಂಗದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ವೇಳೆ ಮಕ್ಕಳು, ಮಹಿಳೆಯರು ಸೇರಿದಂತೆ 121 ಮಂದಿ ಸಾವನ್ನಪ್ಪಿರುವುದು ವ್ಯವಸ್ಥೆ ವಿಫಲವಾಗಿದೆ ಎಂಬುದನ್ನು ಸೂಚಿಸುತ್ತದೆ. ಸತ್ಸಂಗ ನಡೆಸಿದ್ದ ಭೋಲೆಬಾಬಾ ಅವರ ಹಿನ್ನೆಲೆ ಏನೇ ಇರಲಿ, ಲಕ್ಷಾಂತರ ಮಂದಿ ಸೇರುವ ಕಡೆ ಕೈಗೊಳ್ಳಬೇಕಾದ ಕ್ರಮಗಳ ವಿಚಾರದಲ್ಲಿ ಆಡಳಿತವು ನಿರ್ಲಕ್ಷ್ಯ ವಹಿಸಿತ್ತು ಅನ್ನಿಸುತ್ತದೆ. ಸತ್ಸಂಗದ ವೇಳೆ ಅಗತ್ಯ ಆರೋಗ್ಯ ಮೂಲಸೌಲಭ್ಯಗಳ ವ್ಯವಸ್ಥೆ ಆಗಿರಲಿಲ್ಲ ಎಂಬುದು ಸೋಜಿಗದ ಸಂಗತಿ. ನಾವು ಜೀವಕ್ಕೆ ಎಷ್ಟು ಬೆಲೆ ಕೊಡುತ್ತೇವೆ ಎಂಬುದನ್ನು ಇದು ಹೇಳುತ್ತಿದೆ.

ಈ ದೇಶದಲ್ಲಿ ಸತ್ಸಂಗ, ಜಾತ್ರೆ, ರಥೋತ್ಸವ, ಕುಂಭಮೇಳ, ಉರುಸ್, ಜಯಂತಿ, ಪೀಠಾರೋಹಣ ಸಮಾರಂಭ, ಚುನಾವಣೆ ಪ್ರಚಾರ, ವಿಜಯೋತ್ಸವ, ಸನ್ಮಾನ ಸಭೆಯ ಹೆಸರಲ್ಲಿ ವರ್ಷವಿಡೀ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಲೇ ಇರುತ್ತವೆ. ಇಂದು ಉತ್ತರಪ್ರದೇಶದಲ್ಲಿ ಸಂಭವಿಸಿದ ದುರ್ಘಟನೆ ನಾಳೆ ದೇಶದ ಮತ್ಯಾವುದೇ ರಾಜ್ಯದಲ್ಲಿ ಸಂಭವಿಸಬಹುದು. ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮಗಳಿಗೆ ಅನ್ವಯವಾಗುವ ನೀತಿಯನ್ನು ದೇಶದಾದ್ಯಂತ ಜಾರಿಗೆ ತರುವ ಅನಿವಾರ್ಯ ಇದೆ.

–ಎಂ.ಜಿ. ರಂಗಸ್ವಾಮಿ, ಹಿರಿಯೂರು

****

ಸತ್ಯಕ್ಕೆ ದೂರವಾದ ಮಾತು

ಎ. ಸೂರ್ಯ ಪ್ರಕಾಶ್ ಅವರ ‘ಮಾಡಿದ್ದನ್ನೂ ಹೇಳಲಾಗದೆ ಮಂಕಾದ ಬಿಜೆಪಿ’ ಲೇಖನವನ್ನು (ಪ್ರ.ವಾ., ಜುಲೈ 2) ಎರಡು ರೀತಿಯಲ್ಲಿ ನೋಡಬಹುದು. ಒಂದು, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ‘ಮಾಡಿದ್ದನ್ನು’ ಹೇಳಲಾಗದೆ ಪ್ರಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ಎದ್ದುಕಾಣುತ್ತಿತ್ತು. ಬಿಜೆಪಿ ಮಾಡಿದ್ದೇನು? ಹೆಚ್ಚುತ್ತಲೇ ಇರುವ ನಿರುದ್ಯೋಗ, ಸಾಮಾನ್ಯ ಜನರ ಅಗತ್ಯದ ಎಲ್ಲ ಆಹಾರ ಪದಾರ್ಥಗಳ ಬೆಲೆ ಏರಿಕೆ, ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಕೊಡುವಲ್ಲಿ ವೈಫಲ್ಯ... ಈ ನಿರ್ದಿಷ್ಟ ವಿಷಯಗಳ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಣತನದಿಂದ ಮೌನ ವಹಿಸಿದ್ದರು.

ಯಾವ ಸಮುದಾಯವನ್ನು ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಬೇಕು ಎಂಬುದು ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಒಳಪಟ್ಟಿತ್ತು. ಒಬಿಸಿ ಸಮುದಾಯವು ಬಹುದೊಡ್ಡ ಮತಬ್ಯಾಂಕ್ ಆಗಿರುವ ಕಾರಣಕ್ಕೆ ಈಗ ಉಲ್ಲೇಖಿಸಿದ ಅಧಿಕಾರವನ್ನು ಮೋದಿ ನೇತೃತ್ವದ ಸರ್ಕಾರ ತನ್ನ ವ್ಯಾಪ್ತಿಗೆ ತಂದುಕೊಳ್ಳಲು 2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿ ತಂದಿತ್ತು. ಇದು ಅತ್ಯಂತ ಮುಖ್ಯವಾದ ಅಂಶ. ಅದನ್ನು ವಿರೋಧಿಸಿ ಕೆಲವರು ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದರು. ಇತರ ಹಲವರು ಆ ತಿದ್ದುಪಡಿಯನ್ನು ವಿರೋಧಿಸಿದ್ದರು.

ತಿದ್ದುಪಡಿಯ ಪ‍ರಿಣಾಮವಾಗಿ ರಾಜ್ಯ ಸರ್ಕಾರಗಳು ತಮಗಿದ್ದ ಅಧಿಕಾರವನ್ನು ಕಳೆದುಕೊಂಡಿವೆ ಎಂದು ಸುಪ್ರೀಂ ಕೋರ್ಟ್‌ 2021ರಲ್ಲಿ ತೀರ್ಪು ನೀಡಿತ್ತು. ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರ್ಕಾರಗಳ ಪ್ರತಿಭಟನೆ ಹಾಗೂ ಜನಾಂದೋಲನಕ್ಕೆ ಹೆದರಿ, 2018ರ ತನ್ನದೇ ಕಾಯ್ದೆಯನ್ನು ವಜಾಗೊಳಿಸಿ, 2021ರಲ್ಲಿ ಹೊಸ ತಿದ್ದುಪಡಿ ತರುವುದು ಅನಿವಾರ್ಯವಾಗಿತ್ತು. ಆ ತಿದ್ದುಪಡಿಯನ್ನು ಬಿಜೆಪಿಯ ‘ಬದ್ಧತೆ’ಯೆಂದು ಸೂರ್ಯ ಪ್ರಕಾಶ್ ತಮ್ಮ ಲೇಖನದಲ್ಲಿ ಹೇಳಿರುವುದು ಸತ್ಯಕ್ಕೆ ಬಹುದೂರದ ಮಾತು. ಕೇಂದ್ರ ಸರ್ಕಾರ ಈ ರೀತಿ ಪಲ್ಟಿಹೊಡೆಯಬೇಕಾಗಿದ್ದಕ್ಕೆ ಕಾರಣವನ್ನು ಸೂರ್ಯ ಪ್ರಕಾಶ್ ಅವರು ಉಲ್ಲೇಖಿಸಲಿಲ್ಲವೇಕೆ?

–ಪ್ರೊ.ಬಿ.ಕೆ. ಚಂದ್ರಶೇಖರ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT